ಕಾಂಗ್ರೆಸ್​​ಗೆ ಭಾರಿ ಮುಖಭಂಗ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯದ್ದೇ ಪಾರುಪತ್ಯ

ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಆಡಳಿತಾರೂಢ ಕಾಂಗ್ರೆಸ್‌ಗೆ ಭಾರೀ ಮುಖಭಂಗವಾಗಿದೆ. ಮಂಕಿ, ಬಾಶೆಟ್ಟಿಹಳ್ಳಿ, ಬಜಪೆ, ಕಿನ್ನಿಗೋಳಿ ಪಟ್ಟಣ ಪಂಚಾಯತ್‌ಗಳು ಹಾಗೂ ಉಪಚುನಾವಣೆಗಳಲ್ಲಿ ಕೇಸರಿ ಪಡೆ ಪ್ರಾಬಲ್ಯ ಮೆರೆದಿದೆ. ರಾಜ್ಯ ಬಿಜೆಪಿಯ ಈ ಸಾಧನೆಗೆ ರಾಷ್ಟ್ರೀಯ ಸಂಘಟನಾ ‌ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸಂತಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್​​ಗೆ ಭಾರಿ ಮುಖಭಂಗ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯದ್ದೇ ಪಾರುಪತ್ಯ
ಬಿಜೆಪಿ ಸಂಭ್ರಮಾಚರಣೆ

Updated on: Dec 24, 2025 | 6:42 PM

ಬೆಂಗಳೂರು, ಡಿಸೆಂಬರ್​​ 24: ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್​​ಗೆ ಭಾರಿ ಮುಖಭಂಗವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್, ಉತ್ತರ ಕನ್ನಡ ಜಿಲ್ಲೆಯ ಮಂಕಿ ಪಟ್ಟಣ ಪಂಚಾಯತ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತ್​​ಗಳಲ್ಲಿ ಬಿಜೆಪಿ ಬಹುಮತ ಪಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರಸಭೆ ಮತ್ತು ರಾಯಚೂರು ಜಿಲ್ಲೆಯ ತುರವಿಹಾಳ ಪಟ್ಟಣ ಪಂಚಾಯತ್​​ಗಳ ತಲಾ 1 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿಯೂ ಬಿಜೆಪಿಗೆ ಗೆಲುವಿನ ನಗೆ ಬೀರಿದೆ.

ದಕ್ಷಿಣ ಕನ್ನಡದಲ್ಲಿ ಬಿಜೆಪಿ ಪ್ರಾಬಲ್ಯ

ಬಜಪೆ ಪಟ್ಟಣ ಪಂಚಾಯತ್‌ನ ಒಟ್ಟು 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 11 ಸ್ಥಾನಗಳನ್ನು ಗೆದ್ದಿದ್ದು, ಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ಪಡೆದಿದೆ. SDPI ಮೂರು ಸ್ಥಾನ ಪಡೆದಿದ್ದರೆ, ಉಳಿದ ಒಂದು ಸ್ಥಾನ ಸ್ವತಂತ್ರ ಅಭ್ಯರ್ಥಿ ಪಾಲಾಗಿದೆ. ಕಿನ್ನಿಗೋಳಿ ಪಟ್ಟಣ ಪಂಚಾಯತ್​​ನಲ್ಲಿ ಬಿಜೆಪಿ 10 ಮತ್ತು ಕಾಂಗ್ರೆಸ್ 8 ಸ್ಥಾನಗಳನ್ನು ಪಡೆದಿವೆ. ಒಟ್ಟು 42 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು.

ಇದನ್ನೂ ಓದಿ: ಅಪೆಕ್ಸ್ ಬ್ಯಾಂಕ್ ಜಟಾಪಟಿ; ಡಿಕೆಶಿಗೆ ಚೆಕ್​ಮೇಟ್ ಕೊಟ್ಟ ಸಿದ್ದರಾಮಯ್ಯ!

ಮೊದಲ ಚುನಾಣೆಯಲ್ಲೇ ಗೆದ್ದ BJP

ಮಂಕಿ ಪಟ್ಟಣ ಪಂಚಾಯತ್​​ ಆದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಕಂಡುಬಂದಿತ್ತು. ಆದರೆ ಫಲಿತಾಂಶ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದೆ. 12 ಸ್ಥಾನಗಳನ್ನು ಗೆದ್ದು ಬಿಜೆಪಿ ಅಧಿಕಾರ ಹಿಡಿದಿದ್ದರೆ, 8 ಸ್ಥಾನಗಳನ್ನು ಗೆಲ್ಲುವಲ್ಲಿ ಮಾತ್ರ ಕಾಂಗ್ರೆಸ್​​ ಸಫಲವಾಗಿದೆ.

ಬಾಶೆಟ್ಟಿಹಳ್ಳಿಯಲ್ಲಿ ಕೇಸರಿ ಪಡೆ ಕಮಾಲ್

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಚುನಾವಣೆಯಲ್ಲೂ ಕಮಲ ಪಡೆ ಗೆದ್ದು ಬೀಗಿದೆ. 19 ಸ್ಥಾನಗಳ ಪೈಕಿ 14 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. 11 ವರ್ಷಗಳ ಬಳಿಕ ನಡೆದ ಚುನಅವಣೆಯಲ್ಲಿ ಕೇಸರಿ ಪಡೆ ಕಮಾಲ್​​ ಮಾಡಿದೆ.

ಬಿ.ಎಲ್​​. ಸಂತೋಷ್​​ ಸಂತಸ

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಹಿನ್ನೆಲೆ ಬಿಜೆಪಿ ರಾಷ್ಟ್ರೀಯ ಸಂಘಟನಾ ‌ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸಾಮಾಜಿಕ ‌ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿನ ಓಟ ಮುಂದುವರಿಸಿದೆ. ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ, ಅದರಲ್ಲೂ ಮತಪತ್ರದ ಮೂಲಕ ನಡೆದ ಚುನಾವಣೆಯಲ್ಲಿ ಬಿಜೆಪಿ ವಿಜಯ ಸಾಧಿಸಿದೆ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:41 pm, Wed, 24 December 25