
ಬೆಂಗಳೂರು, ಡಿಸೆಂಬರ್ 22: ಮುಂಬರುವ ಲೋಕಸಭೆ ಚುನಾವಣೆಗೆ (Lok Sabha Election) ಕರ್ನಾಟಕದಲ್ಲಿ ಬಿಜೆಪಿ (BJP) ಹಾಗೂ ಜೆಡಿಎಸ್ (JDS) ಮಧ್ಯೆ ಸೀಟು ಹಂಚಿಕೆ ಬಹುತೇಕ ಪೂರ್ಣಗೊಂಡಿದೆ. ಮೂಲಗಳ ಪ್ರಕಾರ, 24 ಕ್ಷೇತ್ರಗಳಲ್ಲಿ ಬಿಜೆಪಿ ಕಣಕ್ಕಿಳಿಯಲಿದ್ದು, 4 ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟುಕೊಡಲು ಮಾತುಕತೆ ನಡೆದಿದೆ. ಬಿಜೆಪಿ ಹೈಕಮಾಂಡ್ ಜತೆ ಮಾತುಕತೆ ನಡೆಸಿದ ನಂತರ 4 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಜೆಡಿಎಸ್ ನಿರ್ಧಾರ ಕೈಗೊಂಡಿದೆ. ಹಾಸನ, ಮಂಡ್ಯ, ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಬಹುತೇಕ ಫಿಕ್ಸ್ ಎನ್ನಲಾಗಿದೆ.
ಮೈಸೂರು ಅಥವಾ ತುಮಕೂರು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರ ಆಯ್ಕೆ ಮಾಡುವಂತೆ ಬಿಜೆಪಿ ಹೈಕಮಾಂಡ್ ಜೆಡಿಎಸ್ಗೆ ಸಲಹೆ ನೀಡಿದೆ. ಜೆಡಿಎಸ್ಗೆ ನಿಗದಿಪಡಿಸಲಾಗುವ ನಾಲ್ಕು ಲೋಕಸಭಾ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಿಂದ ಹೆಚ್ಡಿ ಕುಮಾರಸ್ವಾಮಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಕುಮಾರಸ್ವಾಮಿಗೆ ಬಿಜೆಪಿ ಹೈಕಮಾಂಡ್ ನಾಯಕರು ಸಲಹೆ ನೀಡಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಕೇಂದ್ರಕ್ಕೆ ಬನ್ನಿ ಎಂದು ಕುಮಾರಸ್ವಾಮಿಗೆ ಬಿಜೆಪಿ ಹೈಕಮಾಂಡ್ ಸಲಹೆ ನೀಡಿದೆ. ಹೀಗಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ರಾಷ್ಟ್ರ ರಾಜಕಾರಣದ ಅಗ್ನಿಪರೀಕ್ಷೆಗೆ ಕುಮಾರಸ್ವಾಮಿ ಸಜ್ಜಾಗುವುದು ಬಹುತೇಕ ಖಚಿತವಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ: ಲೋಕಸಭೆ ಟಿಕೆಟ್ ಹಂಚಿಕೆ ಚರ್ಚೆ
ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ, ಶಾಸಕಾಂಗ ಪಕ್ಷದ ನಾಯಕ ಹೆಚ್ಡಿ ಕುಮಾರಸ್ವಾಮಿ, ಶಾಸಕ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಅವರನ್ನೊಳಗೊಂಡ ಜೆಡಿಎಸ್ ನಿಯೋಗವು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಸಿತ್ತು. ಆ ಬಳಿಕ ಬಿಜೆಪಿ ಹೈಕಮಾಂಡ್ ಜತೆಗೂ ನಿಯೋಗ ಮಾತುಕತೆ ನಡೆಸಿತ್ತು. ಈ ಚರ್ಚೆಯ ವೇಳೆ ಕರ್ನಾಟಕದಲ್ಲಿನ ಸೀಟು ಹಂಚಿಕೆ ಬಹುತೇಕ ಅಂತಿಮಗೊಂಡಿದೆ ಎನ್ನಲಾಗಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:18 am, Fri, 22 December 23