ಚಿಕ್ಕಮಗಳೂರು, (ನವೆಂಬರ್ 13): ಬಿವೈ ವಿಜಯೇಂದ್ರ (BY Vijayendra) ಅವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷಗಿರಿ ಸಿಕ್ಕ ಬೆನ್ನಲ್ಲೇ ಸಿಟಿ ರವಿ (CT Ravi) ಬೇಸರಗೊಂಡಿದ್ದಾರೆ. ಅಲ್ಲದೇ ರಾಜ್ಯಾಧ್ಯಕ್ಷ ಹುದ್ದೆಯನ್ನು ವಿಜಯೇಂದ್ರಗೆ ನೀಡಿದ್ದಕ್ಕೆ ಪರೋಕ್ಷವಾಗಿ ಅಸಮಾಧಾನವನ್ನ ಹೊರಗೆ ಹಾಕಿದ್ದಾರೆ. ಇನ್ನು ಈ ಬಗ್ಗೆ ಚಿಕ್ಕಮಗಳೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಟಿ ರವಿ, ತಾವು ನಡೆದು ಬಂದ ರಾಜಕೀಯ ಹಾದಿ ಹಾಗೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಹಳೆ ನೆನಪುಗಳನ್ನು ಮೆಲುಕು ಹಾಕಿರು. ಅಲ್ಲದೇ ನಂಬಿಕೆ ಕುಸಿದ ದಿನ ಸಾರ್ವಜನಿಕ ಕ್ಷೇತ್ರದಿಂದ ದೂರ ಹೋಗುತ್ತೇನೆ ಎಂದಿದ್ದಾರೆ.
ಚಿಕ್ಕಮಗಳೂರಿನ ಮಲ್ಲೇನಹಳ್ಳಿಯಲ್ಲಿ ಮಾತನಾಡಿರುವ ಸಿ.ಟಿ ರವಿ, ನನ್ನ ಮತ್ತು ಪಕ್ಷದ ವಿಚಾರ, ಸಿದ್ದಾಂತ ಹಿಂದುತ್ವ. ನೀವು ಸಂದರ್ಭಕ್ಕೆ ಯಾವ ರೀತಿ ವ್ಯಾಖ್ಯಾನ ಮಾಡುತ್ತೀರಾ ಅದಕ್ಕೆ ಸ್ವತಂತ್ರ ಇದ್ದೀರಿ. ಹಿಂದುತ್ವದ ಕಾರಣಕ್ಕಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ಇದನ್ನು ನಾನು ಬಹಳ ಸಲ ಹೇಳಿದ್ದೇನೆ. ಸಿದ್ಧಾಂತಕಾಗಿನೇ ಹೋರಾಟ ಮಾಡಿದ್ದೇವೆ. ಸಿದ್ಧಾಂತದ ನಂಬಿಕೆ ಕಾರಣಕ್ಕಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದೇವೆ. ಆ ನಂಬಿಕೆ ಕುಸಿದ ದಿನ ಸಾರ್ವಜನಿಕ ಕ್ಷೇತ್ರದಿಂದ ದೂರ ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ವಿಜಯೇಂದ್ರ ರಾಜ್ಯಾಧ್ಯಕ್ಷರಾಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಹೊಸ ಲೆಕ್ಕಾಚಾರ, ಕಾಂಗ್ರೆಸ್ಗೆ ನಿರಾಸೆ?
ನಾನು ಬಿಜೆಪಿಗೆ ಸೇರಿ ಮನೆಯ ಮುಂದಿನ ಮರಕ್ಕೆ ಬಿಜೆಪಿ ಬಾವುಟ ಕಟ್ಟಿದ್ದೆ ಬಾವುಟ ನೋಡಿ ನಮ್ಮಪ್ಪ ಇದು ಯಾವ ಪಾರ್ಟಿ? ಯಾವನಿದ್ದಾನೆ ಎಂದು ಕೇಳಿದ್ದರು. ನಾನು ಅಡ್ವಾಣಿ, ವಾಜಪೆ ಎಂದು ಅಂತ ಅಪ್ಪನಿಗೆ ಹೇಳಿದ್ದೆ. ಅಲ್ಲದೇ ರಾಜ್ಯದಲ್ಲಿ ಯಡಿಯೂರಪ್ಪ ಇದ್ದಾರೆ ಎಂದು ಹೇಳಿದ್ದೆ. ನಿಮ್ದು ಯಾವ ಸೀಮೆ ಪಾರ್ಟಿ ಯಾವ ಕಾಲಕ್ಕೆ ಅಧಿಕಾರ ಬರುತ್ತೆ ದೇವೇಗೌಡರ ಪಾರ್ಟಿ ಸೇರಿಕೋ ಎಂದಿದ್ದರು. ಅವತ್ತು ದೇವೇಗೌಡರು ನೀರಾವರಿ ಸಚಿವರಾಗಿದ್ದರು. ದೇವೇಗೌಡರು ಆಗ ತಾನೆ ಸಮಾಜವಾದಿ ಪಾರ್ಟಿ ಕಟ್ಟಿದ್ದರು. ಆದ್ರೆ ನಾವು ದೇವೇಗೌಡರ ಪಾರ್ಟಿಯನ್ನು ಬಿಟ್ಟು ಬಿಜೆಪಿಯನ್ನು ಆರಿಸಿಕೊಂಡಿದ್ದು ಸಿದ್ಧಾಂತದ ಕಾರಣಕ್ಕಾಗಿ ಎಂದು ಹೇಳಿದರು.
ಹೋರಾಟ ಮಾಡಿದ್ದೇವೆ. ಪಕ್ಷ ಕಟ್ಟಿದ್ದೇವೆ. ಕಷ್ಟಪಟ್ಟಿದ್ದೇವೆ. ಇವತ್ತು ನಿಮ್ಮ ಕಣ್ಣಿಗೆ ಗುರುತಿಸಿಕೊಳ್ಳುವ ನಾಯಕ. ಅವತ್ತು ಜಾಮೀನು ಕೊಡುವುದಕ್ಕೂ ಯಾರು ಇರಲಿಲ್ಲ. ಆ ಕಾಲದಲ್ಲಿ ಹೋರಾಟ ಮಾಡಿದ್ದೇವೆ. ಅದಕ್ಕೆ ಸಿದ್ಧಾಂತ ಕಾರಣವಾಗಿತ್ತು. ಅಧಿಕಾರ ಸಿಗುತ್ತೆ ಎಂಬ ಕನಸು ನಮಗೆ ಬಿದ್ದಿರಲಿಲ್ಲ. ಸಿದ್ಧಾಂತಕಾಗಿನೇ ಹೋರಾಟ ಮಾಡಿದ್ವಿ . ಸಿದ್ಧಾಂತದ ನಂಬಿಕೆ ಕಾರಣಕ್ಕಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದೇವೆ . ಆ ನಂಬಿಕೆ ಕುಸಿದ ದಿನ ಸಾರ್ವಜನಿಕ ಕ್ಷೇತ್ರದಿಂದ ದೂರ ಹೋಗುತ್ತೇನೆ ಎಂದು ತಿಳಿಸಿದರು.
ಬಿಜೆಪಿಯಿಂದ ಮಾತ್ರ ನ್ಯಾಯ ಕೊಡಲು ಸಾಧ್ಯ. ಅದಕ್ಕೆ ಬಿಜೆಪಿಗೆ ನಾವು ಬಂದಿದ್ದು, ಅದಕ್ಕಾಗಿ ಬಿಜೆಪಿಯಲ್ಲಿ ಇರೋದು. ನನ್ನಂತಹ ಲಕ್ಷ ಜನ ಬಿಜೆಪಿಯಲ್ಲಿ ಯಾಕಿರಬೇಕೆಂದು ಯೋಚಿಸುತ್ತಾರೆ. ವೈಯಕ್ತಿಕ ಅಧಿಕಾರದ ಆಸೆಪಟ್ಟವರು ಬರುತ್ತಾರೆ ಹೋಗುತ್ತಾರೆ . ನಾವು ವೈಚಾರಿಕ ಕಾರಣಕ್ಕಾಗಿ ಬಿಜೆಪಿಯಲ್ಲಿ ಇರುವುದು. ನಮ್ಮ ವೈಚಾರಿಕ ನಿಲುವಿಗೆ ಯಾವಾಗ ಧಕ್ಕೆ ಆಗುತ್ತೋ ಅವತ್ತು ಮಾತ್ರ ಬಿಜೆಪಿಯ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಮಾರ್ಮಿಕವಾಗಿ ನುಡಿದರು.
ಕೆಲವರಿಗೆ ಅಸಮಾಧಾನ ಇದೆ ಎಂದಿದ್ದ ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿಗೆ ಗರಂ ಆದ ಸಿಟಿ ರವಿ, ನಾನು ವ್ಯಕ್ತಿಗತ ಕಾರಣಕ್ಕಾಗಿ ರಾಜಕಾರಣ ಮಾಡಿದವನಲ್ಲ. ಅಸಮಧಾನದ ಪ್ರಶ್ನೆ ಬರುವುದಿಲ್ಲ. ವೈಚಾರಿಕ ಹಿನ್ನೆಲೆಯಲ್ಲಿ, ಹಿಂದುತ್ವಕ್ಕಾಗಿ 35 ವರ್ಷದ ಹಿಂದೆ ಬಿಜೆಪಿಯನ್ನ ಆಯ್ಕೆ ಮಾಡಿಕೊಂಡಿದ್ದೆ . ಆಗ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂಬ ಕನಸು ಇರಲಿಲ್ಲ. ರಾಜ್ಯದಲ್ಲಿ ಅವಾಗ ಇಬ್ಬರು ಎಮ್ಎಲ್ಎಗಳು ಗೆದ್ದಿದ್ರು. ಅದರಲ್ಲಿ ಒಬ್ಬರು ಪಾರ್ಟಿ ಬಿಟ್ಟು ಹೋಗಿದ್ದರು. ಯಡಿಯೂರಪ್ಪ ಒಬ್ಬರೇ ಎಂಎಲ್ಎ ಆಗಿದ್ದ ಸಂದರ್ಭದಲ್ಲಿ ಬಿಜೆಪಿ ಆರಿಸಿಕೊಂಡಿದ್ದೆ. ಬಿಜೆಪಿ ಪಕ್ಷವನ್ನು ಆರಿಸಿಕೊಂಡಿದ್ದು ಸಿದ್ಧಾಂತದ ಕಾರಣಕ್ಕಾಗಿ ಆರಿಸಿಕೊಂಡಿದ್ದು, ಸಿದ್ಧಾಂತಕ್ಕಾಗಿ ವೈಯಕ್ತಿಕ ರಾಜಕಾರಣ ಮಾಡುವುದೆ ಆಗಿದ್ರೆ ಅವತ್ತು ಬಲವಾಗಿದ್ದ ಕಾಂಗ್ರೆಸ್, ಜನತಾ ಪಕ್ಷ ಸೇರಬಹುದಿತ್ತು. ನಾನು ವಿಚಾರ ಮತ್ತು ಸಿದ್ಧಾಂತದ ಕಾರಣಕ್ಕಾಗಿ ಬಿಜೆಪಿ ಆರಿಸಿಕೊಂಡೆ. ಅಸಮಾಧಾನ ಎಂಬ ಪ್ರಶ್ನೆಯೇ ಇಲ್ಲ ಎಂದು ತಿರುಗೇಟು ನೀಡಿದರು.
ನನ್ನ ಸಿದ್ಧಾಂತದ ನಂಬಿಕೆಗೆ ನ್ಯಾಯ ಒದಗಿಸುವ ಕೆಲಸವನ್ನ ಬಿಜೆಪಿ ಸರ್ಕಾರ ಮಾಡಿದೆ. ಅಯೋಧ್ಯೆ ರಾಮಮಂದಿರ ನಿರ್ಮಾಣ ,ಆರ್ಟಿಕಲ್ 370 ರದ್ದು ಮಾಡಿದೆ. ನನ್ನಂತ ಕೋಟ್ಯಾಂತರ ಜನರ ಭಾವನೆಯನ್ನು ಗೌರವಿಸುವ ಕೆಲಸವನ್ನು ಪಕ್ಷ ಮಾಡಿದೆ. ಹಾಗಾಗಿ ವೈಯಕ್ತಿಕ ರಾಜಕಾರಣ ಮಾಡುವವರಿಗೆ ಅಸಮಾಧಾನ ಇರುತ್ತೆ. ಮುರುಗೇಶ್ ನಿರಾಣಿ ನನ್ನನ್ನ ಚೆನ್ನಾಗಿ ಅರ್ಥ ಮಾಡಿಕೊಳ್ಳಲಿ
ನನ್ನ ಸ್ನೇಹಿತ ಅವರು ನಾನು ಏನು ಎಂಬುದು ಅವರಿಗೆ ಇನ್ನೂ ಅರ್ಥವಾಗಿಲ್ಲ. ವೈಯಕ್ತಿಕ ಕಾರಣಕ್ಕೆ ಅಸಮಾಧಾನವಾಗುವ ವ್ಯಕ್ತಿತ್ವ, ವ್ಯಕ್ತಿ ನಾನಲ್ಲ ಎಂದು ಮುರುಗೇಶ್ ನಿರಾಣಿಗೆ ಟಾಂಗ್ ಕೊಟ್ಟರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:21 pm, Mon, 13 November 23