ಅತೃಪ್ತರಿಗೆ ಗೂಟದ ಕಾರಿನ ಗ್ಯಾರಂಟಿ ನೀಡುವ ಸಮಿತಿ: ಗ್ಯಾರಂಟಿ ಜಾರಿ ಸಮಿತಿ ಬಗ್ಗೆ ಆರ್ ಅಶೋಕ ವ್ಯಂಗ್ಯ

| Updated By: Ganapathi Sharma

Updated on: Jan 11, 2024 | 10:53 AM

ಸಂಪುಟ ದರ್ಜೆ ಸ್ಥಾನಮಾನದ ಅಧ್ಯಕ್ಷರು, ರಾಜ್ಯ ಸಚಿವ ಸ್ಥಾನಮಾನದ ಐವರು ಉಪಾಧ್ಯಕ್ಷರು ಸೇರಿದಂತೆ 31 ಸದಸ್ಯರ ಸಮಿತಿಯ ಸಂಬಳ ಸಾರಿಗೆ ಖರ್ಚಿನಿಂದ ರಾಜ್ಯ ಸರ್ಕಾರಕ್ಕೆ 16 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಅಶೋಕ ಹೇಳಿದ್ದಾರೆ.

ಅತೃಪ್ತರಿಗೆ ಗೂಟದ ಕಾರಿನ ಗ್ಯಾರಂಟಿ ನೀಡುವ ಸಮಿತಿ: ಗ್ಯಾರಂಟಿ ಜಾರಿ ಸಮಿತಿ ಬಗ್ಗೆ ಆರ್ ಅಶೋಕ ವ್ಯಂಗ್ಯ
ಆರ್ ಅಶೋಕ
Follow us on

ಬೆಂಗಳೂರು, ಜನವರಿ 11: ಉಚಿತ ಗ್ಯಾರಂಟಿಗಳ (Guarantee Schemes) ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮೂರು ಹಂತಗಳಲ್ಲಿ ಕಾರ್ಯಕರ್ತರ ಸಮಿತಿ ರಚಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿರುವುದಕ್ಕೆ ವಿಪಕ್ಷ ನಾಯಕ ಆರ್ ಅಶೋಕ (R Ashok) ವಾಗ್ದಾಳಿ ನಡೆಸಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಸಂದೇಶ ಪ್ರಕಟಿಸಿರುವ ಅಶೋಕ, ಅದು ಗ್ಯಾರಂಟಿ ಜಾರಿ ಸಮಿತಿ ಅಲ್ಲ, ಅತೃಪ್ತ ಶಾಸಕರಿಗೆ ಗೂಟದ ಕಾರು ಗ್ಯಾರಂಟಿ ನೀಡುವ ಸಮಿತಿ ಎಂದು ವ್ಯಂಗ್ಯವಾಡಿದ್ದಾರೆ.

‘ಅಂಬಲಿ ಕುಡಿಯುವವನಿಗೆ ಮೀಸೆ ತಿಕ್ಕುವವನೊಬ್ಬ ಎಂಬ ಗಾದೆ ಮಾತಿನಂತೆ ಈಗಾಗಲೇ ಅವೈಜ್ಞಾನಿಕ ಗ್ಯಾರಂಟಿಗಳ ಭಾರವನ್ನ ಹೊರಲಾಗದೆ ಬೆನ್ನು ಮೂಳೆ ಮುರಿದಂತಾಗಿರುವ ಸರ್ಕಾರಕ್ಕೆ, ಗ್ಯಾರಂಟಿ ಜಾರಿ ಸಮತಿ ಎಂಬ ಮತ್ತೊಂದು ಹೊರೆ ಹೊರಿಸಲು ಹೊರಟಿದ್ದಾರೆ ಸಿಎಂ ಸಿದ್ದರಾಮಯ್ಯನವರು. ಗ್ಯಾರಂಟಿ ಜಾರಿಗೆ ಮುಖ್ಯಮಂತ್ರಿ ಆದಿಯಾಗಿ, 34 ಕ್ಯಾಬಿನೆಟ್ ಸಚಿವರು, ಆರ್ಥಿಕ,ರಾಜಕೀಯ, ಮಾಧ್ಯಮ ಸಲಹೆಗಾರರು, ಜಿಲ್ಲಾಡಳಿತಗಳು ಸೇರಿದಂತೆ ಇಡೀ ಆಡಳಿತ ಯಂತ್ರವೇ ಇರುವಾಗ ಪ್ರತ್ಯೇಕ ಸಮಿತಿಯ ಅಗತ್ಯ ಏನಿದೆ’ ಎಂದು ಅಶೋಕ ಪ್ರಶ್ನಿಸಿದ್ದಾರೆ.

ಸಂಪುಟ ದರ್ಜೆ ಸ್ಥಾನಮಾನದ ಅಧ್ಯಕ್ಷರು, ರಾಜ್ಯ ಸಚಿವ ಸ್ಥಾನಮಾನದ ಐವರು ಉಪಾಧ್ಯಕ್ಷರು ಸೇರಿದಂತೆ 31 ಸದಸ್ಯರ ಸಮಿತಿಯ ಸಂಬಳ ಸಾರಿಗೆ ಖರ್ಚಿನಿಂದ ರಾಜ್ಯ ಸರ್ಕಾರಕ್ಕೆ 16 ಕೋಟಿ ರೂಪಾಯಿ ಹೊರೆಯಾಗಲಿದೆ. ತಮ್ಮ ಪಕ್ಷದ ಅತೃಪ್ತ ಶಾಸಕರನ್ನ, ಪ್ರಮುಖ ಕಾರ್ಯಕರ್ತರನ್ನು ಲೋಕಸಭಾ ಚುನಾವಣೆಯ ಕೆಲಸಕ್ಕೆ ಬಳಸಿಕೊಳ್ಳಲು ರಾಜ್ಯದ ಸಾರ್ವಜನಿಕ ಹಣ ಏಕೆ ದುರ್ಬಳಕೆ ಮಾಡುತ್ತೀರಿ ಸಿಎಂ ಸಿದ್ದರಾಮಯ್ಯನವರೇ ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಗ್ಯಾರಂಟಿಯೇ ಕಾಂಗ್ರೆಸ್ ಅಸ್ತ್ರ: ರಾಜ್ಯ ಮಟ್ಟದ ಸಮಿತಿ ರಚನೆ, ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ

ಗ್ಯಾರಂಟಿ ಜಾರಿಯೇ ಹೊರೆಯಾಗಿ ಅಭಿವೃದ್ಧಿಗೆ ಹಣ ಇಲ್ಲದಿರುವಾಗ ಕಂಡ ಕಂಡವರಿಗೆ ಗೂಟದ ಕಾರು ಕೊಡಲು ರಾಜ್ಯದ ಖಜಾನೆ ಏನು ಕಾಂಗ್ರೆಸ್ ಪಕ್ಷದ ಆಸ್ತಿ ಎಂದುಕೊಂಡಿದ್ದೀರಾ? ಸಚಿವರು, ಆಡಳಿತ ಯಂತ್ರದ ಮೂಲಕ ಗ್ಯಾರಂಟಿ ಜಾರಿ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಅದು ಬಿಟ್ಟು ಸುಮ್ಮನೆ ರಾಜ್ಯದ ಬೊಕ್ಕಸವನ್ನ ಪೋಲು ಮಾಡಬೇಡಿ ಎಂದು ಅಶೋಕ ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ