ವಿ ಸೋಮಣ್ಣಗೆ ನನ್ನ ಮೇಲೆ ಪ್ರೀತಿ ಇದೆ: ಸಿಎಂ ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ
ಸೋಮಣ್ಣ, ಬಸವರಾಜ ಬೊಮ್ಮಾಯಿ ನಾವೆಲ್ಲ ಒಟ್ಟಿಗೆ ಇದ್ದವರು. ನಮಗೆಲ್ಲ ವೈಯಕ್ತಿಕವಾಗಿ ಪ್ರೀತಿ ಇದೆ, ಆದರೆ ರಾಜಕೀಯವಾಗಿ ಬೇರೆ ಇದ್ದೇವೆ. ಬೊಮ್ಮಾಯಿ ಅವರ ತಂದೆ ರಾಜಕೀಯವಾಗಿ ನನಗೆ ಸಹಾಯ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಬೆಂಗಳೂರು, ನವೆಂಬರ್ 16: ಮಾಜಿ ಸಚಿವ, ಬಿಜೆಪಿ ನಾಯಕ ವಿ ಸೋಮಣ್ಣ (V Somanna) ಅವರಿಗೆ ನನ್ನ ಮೇಲೆ ಪ್ರೀತಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿಕೆ ನೀಡಿದ್ದಾರೆ. ಬಿವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರಿಂದ ಅಸಮಾಧಾನಗೊಂಡಿರುವ ಸೋಮಣ್ಣ ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ ಎಂಬ ವದಂತಿಗಳ ಬೆನ್ನಲ್ಲೇ ಸಿದ್ದರಾಮಯ್ಯ ಈ ಹೇಳಿಕೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ರಮಣಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ ಮಾತನಾಡಿದ ಸಿದ್ದರಾಮಯ್ಯ ಅವರು ಸೋಮಣ್ಣ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಜತೆಗಿನ ಬಾಂಧವ್ಯದ ಬಗ್ಗೆ ಹೇಳಿದ್ದಾರೆ.
ಸೋಮಣ್ಣ, ಬಸವರಾಜ ಬೊಮ್ಮಾಯಿ ನಾವೆಲ್ಲ ಒಟ್ಟಿಗೆ ಇದ್ದವರು. ನಮಗೆಲ್ಲ ವೈಯಕ್ತಿಕವಾಗಿ ಪ್ರೀತಿ ಇದೆ, ಆದರೆ ರಾಜಕೀಯವಾಗಿ ಬೇರೆ ಇದ್ದೇವೆ. ಬೊಮ್ಮಾಯಿ ಅವರ ತಂದೆ ರಾಜಕೀಯವಾಗಿ ನನಗೆ ಸಹಾಯ ಮಾಡಿದ್ದಾರೆ. ವಿ.ಸೋಮಣ್ಣ ನನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಏನೋ ಹೈಕಮಾಂಡ್ ಹೇಳಿತ್ತು ಎಂದು ನನ್ನ ವಿರುದ್ಧ ಸ್ಪರ್ಧಿಸಿದ್ದರು. ಆದರೂ ವೈಯಕ್ತಿಕವಾಗಿ ವಿ. ಸೋಮಣ್ಣಗೆ ನನ್ನ ಮೇಲೆ ಪ್ರೀತಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಮಧ್ಯೆ, ಡಿಸೆಂಬರ್ 6ರಂದು ಮಾಜಿ ಸಚಿವ ಸೋಮಣ್ಣ ನೇತೃತ್ವದಲ್ಲಿ ಸಿದ್ದಗಂಗಾ ಮಠದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅದಕ್ಕೆ ಸಚಿವರಾದ ಪರಮೇಶ್ವರ್, ಕೆಎನ್ ರಾಜಣ್ಣ, ಲಿಂಗಾಯತ ಸಮುದಾಯದ ಪ್ರಮುಖ ಮುಖಂಡರಿಗೂ ಆಹ್ವಾನ ನೀಡಲಾಗಿದೆ. ಈ ಮಧ್ಯೆ, ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಚಾರವಾಗಿ ಮಾತನಾಡಿರುವ ಸೋಮಣ್ಣ, ವಿಜಯೇಂದ್ರ ವಿಚಾರಕ್ಕೆ ಕಾಲವೇ ಉತ್ತರ ಕೊಡಲಿದೆ ಎಂದು ಹೇಳಿದ್ದಾರೆ. ಆದಾಗ್ಯೂ, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಬಗ್ಗೆ ಯೋಚಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಯತೀಂದ್ರ ವಿಡಿಯೋ ಬಗ್ಗೆ ತನಿಖೆಯಾಗಲಿ: ಬೊಮ್ಮಾಯಿ ಆಗ್ರಹ
ವರ್ಗಾವಣೆ ಅಕ್ರಮಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರ ವೈರಲ್ ಆಗಿರುವ ವಿಡಿಯೋದ ಬಗ್ಗೆ ತನಿಖೆಯಾಗಲಿ ಎಂದು ಬಸವರಾಜ ಬೊಮ್ಮಾಯಿ ಆಗ್ರಹಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಖಂಡಿತವಾಗಿಯೂ ಈ ವಿಡಿಯೋ ಬಗ್ಗೆ ತನಿಖೆ ಆಗಲೇಬೇಕು. ಯಾರಾದರೂ ಹೇಳಿಕೆ ಕೊಟ್ರೆ, ಟ್ವೀಟ್ ಮಾಡಿದ್ರೆ ಕೇಸ್ ಹಾಕ್ತಾರೆ. ಹೀಗಿರುವಾಗ, ಯತೀಂದ್ರ ನೇರವಾಗಿ ಸಿಎಂ ಜೊತೆ ಮಾತನಾಡಿರುವುದು ಸ್ಪಷ್ಟವಾಗಿದೆ. ಈ ಬಗ್ಗೆ ತನಿಖೆ ಮಾಡಲೇಬೇಕು ಎಂದು ಬೊಮ್ಮಾಯಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಸ್ಫೋಟವಾಗುತ್ತಾ ಬಿಜೆಪಿ ಭಿನ್ನಮತ? ವಿಜಯೇಂದ್ರ ಆಯ್ಕೆ ಬಗ್ಗೆ ವಿ ಸೋಮಣ್ಣ ಮಾರ್ಮಿಕ ಮಾತು ಹೀಗಿದೆ ನೋಡಿ
ಅಪ್ಪನ ಕೆಲಸ ಡಾ.ಯತೀಂದ್ರ ಮಾಡ್ತಿರೋದು ಗೊತ್ತಿರುವ ವಿಚಾರ. ಇದಕ್ಕೆಲ್ಲ ಮುಖ್ಯಮಂತ್ರಿಗಳೇ ಸ್ಪಷ್ಟನೆ ಕೊಡಬೇಕು. 40% ಕಮಿಷನ್ ಕಡಿಮೆ ಆಗಿದೆ, ಈಗ 50 ಪರ್ಸೆಂಟ್ ಆಗಿದೆ ಎಂದು ಬಸವರಾಜ ಬೊಮ್ಮಾಯಿ ಕುಟುಕಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ