ಸ್ವಪಕ್ಷದ ವಿರುದ್ಧ ಆರೋಪಗಳ ಬೆನ್ನಲ್ಲೇ ಅಮಿತ್ ಶಾ, ನಡ್ಡಾ ಭೇಟಿಯಾಗಿ ಬಂದ ಯತ್ನಾಳ್ ಹೇಳಿದ್ದಿಷ್ಟು
ರಾಜ್ಯ ಬಿಜೆಪಿಯ ಮಹತ್ವದ ಸಭೆಗಳಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವ ಮಾತುಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ ಯತ್ನಾಳ್ ಖುದ್ದು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಕೆಲ ರಾಜ್ಯ ಬಿಜೆಪಿ ನಾಯಕರ ವಿರುದ್ಧ ದೂರುಗಳನ್ನ ನೀಡಿದ್ದಾರೆ. ಹಾಗಿದ್ದರೆ ಯತ್ನಾಳ್ ಏನೆಲ್ಲಾ ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ ನೋಡಿ.
ವಿಜಯಪುರ, (ಜನವರಿ, 08): ಈ ಹಿಂದೆ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಕೊರೋನಾ ಸಂದರ್ಭದಲ್ಲಿ 40 ಸಾವಿರ ಕೋಟಿ ರೂ. ಭ್ರಷ್ಟಾಚಾರ ಅಗಿದೆ ಎನ್ನುವ ಗಂಭೀರ ಆರೋಪ ಮಾಡಿದ ಬಳಿಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangpuda Patil Yatnal), ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಬಂದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ದಾ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ಮಾಡಿದ್ದಾರೆ. ಅಲ್ಲದೇ ಕರ್ನಾಟಕ ರಾಜ್ಯ ರಾಜಕಾರಣದ ಬಗ್ಗೆಯೂ ವಿವರಣೆ ನೀಡಿದ್ದಾರೆ.
ಇನ್ನು ಬಗ್ಗೆ ಇಂದು ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ದೆಹಲಿಯ ಭೇಟಿ ಫಲಪ್ರದವಾಗಿದೆ. ದೆಹಲಿಗೆ ಬರಲು ರಾಷ್ಟ್ರೀಯ ಅಧ್ಯಕ್ಷರಿಂದ ನನಗೆ ಕರೆ ಬಂದಿದ್ದ ಕಾರಣ ಹೋಗಿದ್ದೆ. ರಾಷ್ಟ್ರೀಯ ಅಧ್ಯಕ್ಷರ ಭೇಟಿಗೂ ಮುನ್ನ ಅರುಣಸಿಂಗ್ ಹಾಗೂ ರಾಧಾಮೋಹನ್ ಅಗರವಾಲ್ ಅವರನ್ನು ಭೇಟಿ ಮಾಡಲು ತಿಳಿಸಿದ್ದರು. ಅವರಿಬ್ಬರ ಬಳಿ ಮಾತನಾಡಿದ ಮಾಹಿತಿಯನ್ನು ತಿಳಿದುಕೊಂಡ ಬಳಿಕ ಅಮಿತ್ ಶಾ ಹಾಗೂ ನಡ್ಡಾ ಅವರನ್ನ ಭೇಟಿಯಾಗಿದ್ದು, 25 ನಿಮಿಷಗಳ ಕಾಲ ಸುದೀರ್ಘ ಮಾತುಕತೆ ನಡೆಯಿತು. ಈ ವೇಳೆ ಎಲ್ಲಾ ವಿಚಾರಗಳನ್ನ ಕೇಂದ್ರದ ನಾಯಕರ ಮುಂದೆ ಹೇಳಿದ್ದೇನೆ ಎಂದು ವಿವರಿಸಿದರು.
ಇದನ್ನೂ ಓದಿ: ಬಿಜೆಪಿ ಸಭೆಯ ಹೈಲೇಟ್ಸ್: ಯತ್ನಾಳ್ಗೆ ಮೂಗುದಾರ ಹಾಕಲು ಹಿರಿಯ ನಾಯಕರ ಸಭೆಯಲ್ಲಿ ತೀರ್ಮಾನ
ಎಲ್ಲವನ್ನೂ ಮುಂದಿನ ದಿನಗಳಲ್ಲಿ ಸರಿಪಡಿಸುವುದಾಗಿ ಕೇಂದ್ರದ ನಾಯಕರು ಭರವಸೆ ನೀಡಿದ್ದಾರೆ. ಏನಾದರೂ ಹೇಳುವುದಿದ್ದರೆ ನನಗೆ ನೇರವಾಗಿ ಹೇಳಿ ಎಂದು ನಡ್ಡಾ ಹೇಳಿದ್ದಾರೆ. ಎರಡು ದಿನ ಮುಂಚಿತವಾಗಿ ಮಾಹಿತಿ ನೀಡಿ ನಾನು ಭೇಟಿಯಾಗಲು ಸಮಯ ನೀಡುವೆ ಎಂದು ಹೇಳಿದ್ದಾರೆ. ಈ ವೇಳೆ ನಿಮ್ಮ ಅಪಾರ್ಟ್ಮೆಂಟ್ ಸಿಗಲ್ಲ ಯಡಿಯೂರಪ್ಪ ವಿಜಯೇಂದ್ರಗೆ ಮಾತ್ರ ಸಿಗುತ್ತದೆ ಎಂದು ನಡ್ಡಾ ಅವರಿಗೆ ನಾನು ಮನವಿ ಮಾಡಿಕೊಂಡೆ. ಎರಡು ದಿನದಲ್ಲೇ ಭೇಟಿಗೆ ಅವಕಾಶ ನೀಡುತ್ತೇನೆ ಎಂದಿದ್ದಾರೆ. ಏನೇ ಇದ್ದರೂ ನಮಗೆ ತಿಳಿಸಬೇಕು ಯಾರ ಮುಲಾಜಿ ಇಲ್ಲದೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ನನಗೆ ಯಾವುದೇ ನೋಟಿಸ್ ಇಲ್ಲ. ಎಚ್ಚರಿಕೆ ಇಲ್ಲ. ನನ್ನ ಜೊತೆ ಇಬ್ಬರು ನಾಯಕರು ಗೌರವಯುತವಾಗಿ ನಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಇದಷ್ಟೇ ಅಲ್ಲ ಬಹಳ ವಿಚಾರ ಪ್ರಸ್ತಾಪ ಮಾಡಿದ್ದೇನೆ. ಇಲ್ಲಿ ಎಲ್ಲವನ್ನೂ ಹೇಳಲಾಗಲ್ಲ ಇಲ್ಲಿ ಏನೆಲ್ಲ ಮಾಹಿತಿ ನೀಡಬೇಕೆಂದು ಹೇಳಿದ್ದಾರೆ ನಾನು ಮಾಹಿತಿ ಕೊಡುವೆ ಎಂದು ಕೊರೋನಾ ಮಹಾಮಾರಿ ವೇಳೆ 40, 000 ಕೋಟಿ ಭ್ರಷ್ಟಾಚಾರ ಬಗ್ಗೆ ಹೇಳಿದರು.
ರಾಜ್ಯ ಬಿಜೆಪಿ ಉಸ್ತುವಾರಿ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಅದೆಲ್ಲಾ ಹೈಕಮಾಂಡ್ ನಿರ್ಣಯ. ಬದಲಾವಣೆ ಯಾರು ಮಾಡುತ್ತಾರೆ ಗೊತ್ತಿಲ್ಲ. ಕೇಂದ್ರ ವರಿಷ್ಠ ಮಂಡಳಿಗೆ ಏನು ಮಾಹಿತಿ ಇರುತ್ತದೆಯೋ ಆ ಆಧಾರದ ಮೇಲೆ ಬದಲಾವಣೆ ಮಾಡುತ್ತಾರೆ. ನಾನು ಬದಲಾವಣೆ ಆಗಲಿ ಎಂದು ಹೇಳಿದರು ಆಗಲ್ಲ. ಬದಲಾವಣೆ ಮಾಡಬೇಡಿ ಎಂದರು ಆಗಲ್ಲ ಎಂದರು.
ಹೈಕಮಾಂಡ್ ನಾಯಕರನ್ನ ದೆಹಲಿಯಲ್ಲಿ ಭೇಟಿ ಮಾಡಿದ್ದೇನೆ. ರಾಜ್ಯದ ಹೊಂದಾಣಿಕೆ ರಾಜಕಾರಣದ ಬಗ್ಗೆ ಹೈಕಮಾಂಡ್ ನಾಯಕರಿಗೆ ಮನವರಿಕೆ ಮಾಡಿದ್ದೇನೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೇನೆ. ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದು ಕಾಯುತ್ತಿದ್ದವರಿಗೆ ನಿರಾಸೆ ಆಗಿದೆ. ರಾಧಾ ಮೋಹನ್ ಅಗರವಾಲ್, ಅರುಣ್ ಸಿಂಗ್ ಅವರನ್ನು ಸಹ ಭೇಟಿ ಮಾಡಿದ್ದು, ರಾಜ್ಯದ ಹೊಂದಾಣಿಕೆ ರಾಜಕಾರಣದ ಬಗ್ಗೆ ಹೈಕಮಾಂಡ್ ನಾಯಕರಿಗೆ ಪೂರ್ಣ ಮಾಹಿತಿ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲ ಸರಿಹೋಗಲಿದೆ ಎಂದಿದ್ದಾರೆ. ಇಷ್ಟು ದಿನ ಆಗಿದ್ದು ಆಗಿದೆ. ಮುಂದೆ ಒಳ್ಳೆಯ ಭವಿಷ್ಯವಿದೆ. ನಿಮ್ಮ ಬಗ್ಗೆ ಗೌರವ ಎಂದು ಅಮಿತ್ ಶಾ ಹಾಗೂ ನಡ್ಡಾ ಹೇಳಿದ್ದಾರೆ ಎಂದು ಹೇಳಿದರು.
ನನ್ನ ಬಿಜೆಪಿಗೆ ಸೇರಿಸಿಕೊಂಡಿದ್ದು ಅಮಿತ್ ಶಾ
ಯತ್ನಾಳ್ ಅವರನ್ನು ಯಡಿಯೂರಪ್ಪ ಬಿಜೆಪಿಗೆ ಸೇರಿಸಿಕೊಂಡಿದ್ದಾರೆ ಎನ್ನುವ ಈ ಬಗ್ಗೆ ಸ್ಪಷ್ಟಪಡಿಸುತ್ತೇನೆ. ನನ್ನನ್ನ ಬಿಜೆಪಿಗೆ ಕರೆದುಕೊಂಡವರು ನಮ್ಮ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮೀತ್ ಶಾ ಅವರು. ಸದಾನಂದ ಗೌಡರಿಂದಾಲಿ ಅಥವಾ ಯಡಿಯೂರಪ್ಪ ಅವರಿಂದಾಗಲಿ ನಾನು ಬಿಜೆಪಿಗೆ ಬಂದಿಲ್ಲ. ಈ ವಿಚಾರವನ್ನು ಕೇಂದ್ರ ನಾಯಕರೇ ನನಗೆ ಹೇಳಿದ್ದಾರೆ. ನಾನು ಪರಿಚಯ ಇದ್ದಾಗ ರಾಷ್ಟ್ರೀಯ ನಾಯಕರೇ ನನ್ನ ಕರೆದು ಬಿಜೆಪಿಗೆ ಸೇರಿಸಿಕೊಂಡರು. ನನ್ನನ್ನ ಬಿಜೆಪಿಗೆ ಸೇರಿಸಿಕೊಳ್ಳುವಲ್ಲಿ ಯಡಿಯೂರಪ್ಪರ ಪಾತ್ರ ಇಲ್ಲ. ನಾನು ವಾಪಸ್ ಬಿಜೆಪಿ ಸೇರುವಾಗ ಯಡಿಯೂರಪ್ಪರು ಸ್ಪಷ್ಟವಾಗಿ ವಿರೋಧ ಮಾಡಿದ್ದಾರೆ. ಈ ವಿಚಾರವನ್ನು ಓರ್ವ ರಾಷ್ಟ್ರೀಯ ನಾಯಕರು ನನಗೆ ಹೇಳಿದ್ದಾರೆ. ನಾನು ಮರಳಿ ಬಿಜೆಪಿಗೆ ಸೇರಿದ್ದರಲ್ಲಿ ಯಡಿಯೂರಪ್ಪರ ಉಪಕಾರ ಏನಿಲ್ಲ. ನಿಮ್ಮಿಂದ ಯಡಿಯೂರಪ್ಪರಿಂದ ನಾನು ಮರಳಿ ಬಿಜೆಪಿಗೆ ಬಂದಿಲ್ಲ ಎಂದು ಸಂಸದ ಡಿವಿ ಸದಾನಂದಗೌಡ ಅವರಿಗೆ ತಿರುಗೇಟು ನೀಡಿದರು.
ನಾನು ಬಿಜೆಪಿಗೆ ಮರಳಿ ಸೇರಲು ಪ್ರಮುಖ ಕಾರಣವೇ ಅಮಿತ್ ಶಾ. ಭವಿಷ್ಯದಲ್ಲಿ ಏನೆಲ್ಲಾ ಆಗುತ್ತದೆ ಎಂದು ನನಗೆ ಹೇಳಿದ್ದಾರೆ. ಮತ್ತೊಮ್ಮೆ ದೇಶದಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ಬರಬೇಕು. ತೀಸ್ರೇ ಬಾರ್ ಮೋದಿ ಕಾ ಸರ್ಕಾರ್. ಇಲ್ಲದಿದ್ದರೆ ನಮ್ಮ ದೇಶ ಉಳಿಯಲ್ಲ. ಹಿಂದೂಗಳು ದೇಶದಲ್ಲಿ ಜೀವನ ಮಾಡಲಾಗಲ್ಲ. ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕು. ನನ್ನ ದೆಹಲಿ ಭೇಟಿ ಯಶಸ್ವಿಯಾಗಿದೆ. ಯಾವುದೇ ಕ್ರಮ ಇಲ್ಲ ಎಚ್ಚರಿಕೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:40 pm, Mon, 8 January 24