ಸಂತರ ಶಾಪದಿಂದ ಗೋಪಾಷ್ಟಮಿ ದಿನವೇ ಇಂದಿರಾ ಕುಟುಂಬ ಬಲಿಯಾಯಿತು: ಅನಂತಕುಮಾರ್ ಹೆಗಡೆ

| Updated By: Ganapathi Sharma

Updated on: Jan 18, 2024 | 7:49 AM

ಗೋಪಾಷ್ಟಮಿ ದಿನವೇ ಸಂಜಯ ಗಾಂಧಿ, ರಾಜೀವ್ ಗಾಂಧಿ, ಇಂದಿರಾಗಾಂಧಿ ಮೃತಪಟ್ಟಿದ್ದರು. ಆದರೆ, ಇದನ್ನು ಪ್ರಗತಿಪರರು ಒಪ್ಪುವುದಿಲ್ಲ. ಸಂತರ ಶಾಪ ಅತೀ ಕೆಟ್ಟದ್ದು. ಅದಕ್ಕೆ ಇಂದಿರಾ ಕುಟುಂಬ ಬಲಿಯಾಯಿತು ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.

ಸಂತರ ಶಾಪದಿಂದ ಗೋಪಾಷ್ಟಮಿ ದಿನವೇ ಇಂದಿರಾ ಕುಟುಂಬ ಬಲಿಯಾಯಿತು: ಅನಂತಕುಮಾರ್ ಹೆಗಡೆ
ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ
Follow us on

ಬೆಳಗಾವಿ, ಜನವರಿ 17: ಲೋಕಸಭೆ ಚುನಾವಣೆ (Lok Sabha Elections) ಸಮೀಪಿಸುತ್ತಿರುವಂತೆಯೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿರುವ ಉತ್ತರ ಕನ್ನಡ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ (Anantkumar Hegde) ಇದೀಗ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ. ಬೆಳಗಾವಿ (Belagavi) ಜಿಲ್ಲೆಯ ಕಿತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಲ್ಲಿ ಮಾತನಾಡಿದ ಅವರು, 1966 ನವೆಂಬರ್ 7 ರಂದು ಸಂತರ, ಗೋವುಗಳ ಮೇಲೆ ಗೋಲಿಬಾರ್ ಆಗಿತ್ತು. ಗೋಹತ್ಯಾ ನಿಷೇಧಕ್ಕಾಗಿ ಸಂತರು ಪಾರ್ಲಿಮೆಂಟ್‌ಗೆ ಮುತ್ತಿಗೆ ಹಾಕಿದ್ದರು. ಆಗ ಇಂದಿರಾಗಾಂಧಿ ಗೋಲಿಬಾರ್ ಮಾಡಿಸಿದ್ದರು. ಆಗ ಸಂತರು, ಗೋವುಗಳು ಮೃತಪಟ್ಟಿದ್ದವು. ಆಗ ಸಂತನೊಬ್ಬ ಇಂದಿರಾಗಾಂಧಿಗೆ, ‘ಇವತ್ತಿನ ದಿನ ಗೋಪಾಷ್ಟಮಿ. ನಿಮ್ಮ ಸಂತತಿಯೂ ಗೋಪಾಷ್ಟಮಿ ದಿನವೇ ಅಂತ್ಯವಾಗಲಿದೆ’ ಎಂಬುದಾಗಿ ಶಾಪ ನೀಡಿದ್ದರು ಎಂದು ಹೇಳಿದರು.

ಗೋಪಾಷ್ಟಮಿ ದಿನವೇ ಸಂಜಯ ಗಾಂಧಿ, ರಾಜೀವ್ ಗಾಂಧಿ, ಇಂದಿರಾಗಾಂಧಿ ಮೃತಪಟ್ಟಿದ್ದರು. ಆದರೆ, ಇದನ್ನು ಪ್ರಗತಿಪರರು ಒಪ್ಪುವುದಿಲ್ಲ. ಸಂತರ ಶಾಪ ಅತೀ ಕೆಟ್ಟದ್ದು. ಅದಕ್ಕೆ ಇಂದಿರಾ ಕುಟುಂಬ ಬಲಿಯಾಯಿತು ಎಂದು ಅವರು ಹೇಳಿದ್ದಾರೆ.

ಇದೀಗ ಮತ್ತೊಂದು ಸಂಗ್ರಾಮ ಬಂದಿದೆ. ಈ ಬಾರಿ ದೊಡ್ಡ ದಾಖಲೆ ನಿರ್ಮಿಸಬೇಕಿದೆ. ಎದುರಾಳಿಗಳ ಅಸ್ತಿತ್ವ ಇಲ್ಲದಂತಾಗಬೇಕಿದೆ ಎಂದು ಅನಂತಕುಮಾರ್ ಹೆಗಡೆ ಮಾರ್ಮಿಕವಾಗಿ ಹೇಳಿದ್ದಾರೆ.

ಯಾರನ್ನು ಕಣಕ್ಕಿಳಿಸಬೇಕೆಂದು ಪಕ್ಷ ನಿರ್ಧಾರ ಮಾಡುತ್ತದೆ: ಹೆಗಡೆ

ನಾನು ಮತ್ತೊಮ್ಮೆ ನಿಮ್ಮನ್ನು ನೋಡಲು ಆಗಲ್ಲ ಅಂದುಕೊಂಡಿದ್ದೆ. ಆದರೆ ದೇವರು ಅವಕಾಶ ಕೊಟ್ಟಿದ್ದಾನೆ. ಈ ಚುನಾವಣೆ ಸಂದರ್ಭದಲ್ಲಿ ಬರುತ್ತೇನೆ ಅಂದುಕೊಂಡಿರಲಿಲ್ಲ. ಜನರಿಂದ ದೂರವಾಗುತ್ತಿದ್ದೇನೆ ಅನ್ನೋ ಬೇಸರ ಇತ್ತು. ಎರಡು ವರ್ಷಗಳಿಂದ ಪ್ರವಾಸ ಮಾಡೋ ಸ್ಥಿತಿಯಲ್ಲಿರಲಿಲ್ಲ. ಕಳೆದ ವರ್ಷ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಇದೀಗ ಮತ್ತೆ ನಿಮ್ಮ ಮುಂದೆ ನಿಂತಿದ್ದೇನೆ ಎಂದು ಅನಂತಕುಮಾರ್ ಹೆಗಡೆ ಹೇಳಿದ್ದಾರೆ.

ಅನಂತಕುಮಾರ್ ಹೆಗಡೆ ವಿರುದ್ಧ ಶಿಕಾರಿಪುರದಲ್ಲಿ ಪ್ರತಿಭಟನೆ

ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಶಿವಮೊಗ್ಗದ ಶಿಕಾರಿಪುರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು. ಶಿಕಾರಿಪುರ ತಾಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ಸಂಸದ ಅನಂತಕುಮಾರ್ ಪ್ರತಿಕೃತಿ ದಹಿಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದರ ವಿರುದ್ಧ ಕಾರ್ಯಕರ್ತರು ಮತ್ತು ಮುಖಂಡರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Fact Check: ಇಂದಿರಾ ಗಾಂಧಿ ಕುಟುಂಬಕ್ಕೆ ಗೋಪಾಷ್ಟಮಿ ಶಾಪ?; ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಯ ಅಸಲಿಯತ್ತೇನು?

ಮತ್ತೆ ವಿವಾದಿತ ಹೇಳಿಕೆ ನೀಡಿದ್ದ ಅನಂತಕುಮಾರ್

ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ಅನಂತಕುಮಾರ್ ಹೆಗಡೆ, ಆ ವಿಚಾರ ವ್ಯಾಪಕ ಚರ್ಚೆಗೀಡಾಗುತ್ತಿದ್ದಂತೆಯೇ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಮಂಗಳವಾರ ಮಾತನಾಡಿದ್ದ ಅವರು, ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸುವ ಸಂತಾನ ನಮ್ಮದಲ್ಲ. ಒಂದು ಕೆನ್ನೆಗೆ ಹೊಡೆದರೆ ನಿಮ್ಮ ತಲೆಯನ್ನೇ ತೆಗೆಯುವ ಸಂತಾನದವರು ನಾವು. ನಮ್ಮದು ವೀರ ಸಂತಾನ, ಹೇಡಿಗಳ ಸಂತಾನ ಅಲ್ಲ ಎಂದು ಗುಡುಗಿದ್ದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:18 pm, Wed, 17 January 24