ಬಿಜೆಪಿ ಎರಡನೇ ಪಟ್ಟಿ: ವಿರೋಧಿಗಳಿಗೆ ಟಿಕೆಟ್ ತಪ್ಪಿಸುವಲ್ಲಿ ಬಿಎಸ್ ಯಡಿಯೂರಪ್ಪ ಮೇಲುಗೈ, ಸಂತೋಷ್ ಬಣಕ್ಕೆ ಅಲ್ಪ ಯಶಸ್ಸು

| Updated By: Ganapathi Sharma

Updated on: Mar 14, 2024 | 10:30 AM

ಕೊನೆಗೂ ಲೋಕಸಭಾ ಚುನಾವಣೆಗೆ ಬಿಜೆಪಿಯ ಕರ್ನಾಟಕದ ಅಭ್ಯರ್ಥಿಗಳ ಮೊದಲ ಪಟ್ಟಿ (ಬಿಜೆಪಿಯ ಎರಡನೇ ಪಟ್ಟಿ) ಬಿಡುಗಡೆಯಾಗಿದೆ. ಒಟ್ಟಾರೆಯಾಗಿ ನೋಡಿದರೆ ಮಾಜಿ ಸಿಎಂ ಬಿಎಸ್​​ ಯಡಿಯೂರಪ್ಪ ಬಣ ಮೇಲುಗೈ ಸಾಧಿಸಿದಂತಿದೆ. ಆದಾಗ್ಯೂ, ಬಿಎಲ್​​ ಸಂತೋಷ್​ ಬಣದ ಕೆಲವು ನಾಯಕರೂ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದಿದ್ದು ಹೈಕಮಾಂಡ್ ನೇರ ಆಯ್ಕೆ. ಈ ಕುರಿತು ಪೂರ್ಣ ವಿವರ ಇಲ್ಲಿದೆ.

ಬಿಜೆಪಿ ಎರಡನೇ ಪಟ್ಟಿ: ವಿರೋಧಿಗಳಿಗೆ ಟಿಕೆಟ್ ತಪ್ಪಿಸುವಲ್ಲಿ ಬಿಎಸ್ ಯಡಿಯೂರಪ್ಪ ಮೇಲುಗೈ, ಸಂತೋಷ್ ಬಣಕ್ಕೆ ಅಲ್ಪ ಯಶಸ್ಸು
ಯಡಿಯೂರಪ್ಪ & ಬಿಎಲ್ ಸಂತೋಷ್
Follow us on

ಬೆಂಗಳೂರು, ಮಾರ್ಚ್​ 14: ಲೋಕಸಭೆ ಚುನಾವಣೆಗೆ (Lok Sabha Election) ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ (BJP Candidate List) ಬುಧವಾರ ಬಿಡುಗಡೆಯಾಗಿದ್ದು, ಕರ್ನಾಟಕದ ಹಲವು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನೂ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಬಣ ಮೇಲುಗೈ ಸಾಧಿಸಿದ್ದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣಿಸಿದೆ. ಮೈಸೂರಿನಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಲಿ ಸಂಸದ, ಬಿಜೆಪಿಯ ರಾಜ್ಯ ಘಟಕದ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್​​ಗೆ ಟಿಕೆಟ್ ದೊರೆಯದಂತೆ ಮಾಡುವಲ್ಲಿ ಬಿಎಸ್​ವೈ ಬಣ ಯಶಸ್ವಿಯಾಗಿದೆ. ಈ ಮೂಲಕ ತಮ್ಮನ್ನು ವಿರೋಧಿಸಿದ್ದವರಿಗೆ ಟಿಕೇಟ್ ಸಿಗದಂತೆ ಮಾಡುವಲ್ಲಿ ಯಡಿಯೂರಪ್ಪ ಗೆಲುವು ಸಾಧಿಸಿದ್ದಾರೆ.

ಇಷ್ಟೇ ಅಲ್ಲದೆ, ಪ್ರಭಲ ವಿರೋಧದ ನಡುವೆಯೂ ಆಪ್ತರಿಗೆ ಟಿಕೆಟ್​ ಕೊಡಿಸುವಲ್ಲಿ ಕೂಡ ಅವರು ಯಶಸ್ವಿಯಾಗಿದ್ದಾರೆ. ಹಾಗೆಂದು, ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಬಣ ಕೂಡ ಮೇಲುಗೈ ಸಾಧಿಸಿದ್ದರೆ ಇನ್ನು ಕೆಲವು ಕ್ಷೇತ್ರಗಳಿಗೆ ಹೈಕಮಾಂಡ್​ ಸ್ವತಃ ಆಯ್ಕೆ ಮಾಡಿದೆ.

ಯಡಿಯೂರಪ್ಪ ಬಣದ ಅಭ್ಯರ್ಥಿಗಳಿವರು

ಪಿಸಿ ಗದ್ದಿಗೌಡರ್​ಗೆ ಯಡಿಯೂರಪ್ಪ ಮತ್ತು ಪಕ್ಷದ ಬೆಂಬಲವಿರುವುದರಿಂದ 5ನೆ ಬಾರಿ ಟಿಕೆಟ್ ದೊರೆತಿದೆ. ಗಾಯತ್ರಿ ಸಿದ್ದೇಶ್ವರ್ ಕೂಡ ಯಡಿಯೂರಪ್ಪ ಬಣ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ. ಮಹಿಳೆ ಕೋಟದಡಿ ಗಾಯತ್ರಿ ಸಿದ್ದೇಶ್ವರ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಸಿದ್ದೇಶ್ವರ ಕುಟುಂಬ ಹೊರತಾಗಿ ಅಭ್ಯರ್ಥಿ ಘೋಷಿಸಿದರೆ ಕ್ಷೇತ್ರ ಕಳೆದುಕೊಳ್ಳುವ ಆತಂಕವೂ ಇಲ್ಲಿ ಬಿಜೆಪಿಗೆ ಎದುರಾಗಿತ್ತು.

ಮತ್ತೊಂದೆಡೆ ಮೈಸೂರಿನಲ್ಲಿ ಪ್ರತಾಪ್​ ಸಿಂಹಗೆ ವ್ಯಕ್ತವಾಗಿದ್ದ​ ಯಡಿಯೂರಪ್ಪ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಹೈಕಮಾಂಡ್ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಅಭ್ಯರ್ಥಿಯನ್ನಾಗಿಸಿದೆ. ಯದುವೀರ ಪರವಾಗಿ ರಾಜ್ಯನಾಯಕರ ಒತ್ತಾಯ ಹೆಚ್ಚಾಗಿತ್ತು.

ದಕ್ಷಿಣ ಕನ್ನಡದಲ್ಲಿ ಕಟೀಲ್​ಗೆ ಯಡಿಯೂರಪ್ಪ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟರನ್ನು ಆಯ್ಕೆ ಮಾಡಲಾಗಿದೆ. ಇವರು ಹೈಕಮಾಂಡ್​ ಅಭ್ಯರ್ಥಿ ಎನ್ನಲಾಗಿದೆ.

ಸಂತೋಷ್ ಬಣದ ಜೊಲ್ಲೆಗೆ ಒಲಿದ ಟಿಕೆಟ್

ಅಣ್ಣಾ ಸಾಹೇಬ್ ಜೊಲ್ಲೆಗೆ ಟಿಕೆಟ್ ನೀಡುವಂತೆ ಬಿಎಲ್​ ಸಂತೋಷ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು. ಈ ಬಾರಿ ಜೊಲ್ಲೆಗೆ ಟಿಕೆಟ್​ ನೀಡಬಾರದೆಂದು ಸಾಕಷ್ಟು ಒತ್ತಡವಿತ್ತು. ರಮೇಶ್​ ಕತ್ತಿಗೆ ಟಿಕೆಟ್​ ನೀಡವಂತೆ ಯಡಿಯೂರಪ್ಪ ಒತ್ತಡ ಹೇರಿದ್ದರು. ಬಿಎಸ್​​ವೈ ಮತ್ತು ರಾಜ್ಯ ನಾಯಕರಿಂದ ರಮೇಶ್ ಕತ್ತಿ ಪರ ಬ್ಯಾಟಿಂಗ್ ನಡೆದಿತ್ತು. ಆದಾಗ್ಯೂ, ​ಜೊಲ್ಲೆಗೆ ಟಿಕೆಟ್​ ಕೊಡುಸುವಲ್ಲಿ ಸಂತೋಷ ಯಶಸ್ವಿಯಾಗಿದ್ದಾರೆ.

ಹೈಕಮಾಂಡ್ ಅಭ್ಯರ್ಥಿಗಳಿವರು

ಪಿ.ಸಿ.ಮೋಹನ್ ಆಯ್ಕೆ ನೇರ ಹೈಕಮಾಂಡ್​​ನದ್ದಾಗಿದೆ. ಬಲಿಜ ಸಮುದಾಯಕ್ಕೆ ಅವಕಾಶಕ್ಕಾಗಿ ಪಿಸಿ ಮೋಹನ್​​ಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇನ್ನು ಬಳ್ಳಾರಿಯಿಂದ ಬಿ ಶ್ರೀರಾಮುಲು ಅವರನ್ನು ಕಣಕ್ಕಿಳಿಸುವುದು ಕೂಡ ಹೈಕಮಾಂಡ್​ ತೀರ್ಮಾನ ಎನ್ನಲಾಗಿದೆ. ವಾಲ್ಮೀಕಿ ಸಮುದಾಯಕ್ಕೆ ಅವಕಾಶ ನೀಡುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಮಲು ಸ್ಪರ್ಧಯಿಂದ ಬಳ್ಳಾರಿ, ಕೊಪ್ಪಳ, ರಾಯಚೂರು ಕ್ಷೇತ್ರಗಳ ಮೇಲೆ ಪ್ರಭಾವದ ಲೆಕ್ಕಾಚಾರ ಇದರ ಹಿಂದೆ ಇದೆ.

ಇನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಹ ಹೈಕಮಾಂಡ್ ಅಭ್ಯರ್ಥಿ. ಹಾವೇರಿ-ಗದಗ ಕ್ಷೇತ್ರದಲ್ಲಿ ಪಕ್ಷ ಗೆಲ್ಲಿಸುವುದಕ್ಕೆ ಹೈಕಮಾಂಡ್​ ಈ ಆಯ್ಕೆ ಮಾಡಿದೆ ಎನ್ನಲಾಗಿದೆ. ಬಸವರಾಜ್​ ಬೊಮ್ಮಾಯಿಗೆ ನೇರ ಅಮಿತ್​ ಶಾ ಬೆಂಬಲವಿತ್ತು ಅಕ್ಕ-ಪಕ್ಕದ ಕ್ಷೇತ್ರಗಳ ಗೆಲುವಿನ ಲೆಕ್ಕಚಾರದಲ್ಲಿ ಬೊಮ್ಮಾಯಿಯನ್ನು ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ:​​ ಲೋಕಸಭಾ ಚುನಾವಣೆಗೆ ಬಿಜೆಪಿಯ 2ನೇ ಪಟ್ಟಿ ಪ್ರಕಟ, ಕರ್ನಾಟಕದ ಹಲವು ಹಾಲಿ ಸಂಸದರಿಗೆ ಟಿಕೆಟ್ ಕಟ್

ಡಾ.ಬಸವರಾಜ ತ್ಯಾವಟೂರು ಕೂಡ ಹೈಕಮಾಂಡ್ ಆಯ್ಕೆಯಾಗಿದೆ. ಕಳೆದ ಎರಡು ವಿಧಾನಸಭೆ ಚುನಾವಣೆಯಲ್ಲಿ ಸಂಗಣ್ಣ ಕರಡಿ ಪುತ್ರ & ಸೊಸೆಗೆ ಟೆಕೆಟ್​ ಪಡೆದಿದ್ದರು. ಬೇರೆಯವರ ಗೆಲುವಿಗೆ ಶ್ರಮಿಸದೆ ಇದ್ದ ಆರೋಪವೂ ಅವರ ಮೇಲಿತ್ತು. ಹಾಗಾಗಿ ಸಂಗಣ್ಣ ಕರಡಿ ಟಿಕೆಟ್​ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದರು.

ಇನ್ನು ವಿ. ಸೋಮಣ್ಣ ಹೈಕಮಾಂಡ್​ ಹಾಗೂ ಬಿಎಲ್​ ಸಂತೋಷ ಬಣದ ಅಭ್ಯರ್ಥಿಯಾಗಿದ್ದಾರೆ. ಇವರಿಗೆ ಕಳೆದ ವಿಧಾನಸಭೆ ಚುನಾವನೆಯಲ್ಲಿ ನೀಡಿದ್ದ ಭರವಸೆ ಈಡೇರಿಸಲೇಬೆಕಿದ್ದ ಅನಿವಾರ್ಯತೆ ಹೈಕಮಾಂಡ್​ ಮೇಲಿತ್ತು. ಹೀಗಾಗಿ ಯಡಿಯೂರಪ್ಪ ಪ್ರಬಲ ವಿರೋಧದ ನಡೆವೆಯೂ ವಿ. ಸೋಮಣ್ಣಗೆ ಟಿಕೆಟ್ ನೀಡಲಾಗಿದೆ.

ರಾಜ್ಯದ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:32 am, Thu, 14 March 24