ಬಿಜೆಪಿ ಹಿರಿಯರ ಮನವೊಲಿಸಲು ಬಿವೈ ವಿಜಯೇಂದ್ರ ಸರ್ಕಸ್: ಪದಗ್ರಹಣವಲ್ಲ ಕೇತುಗ್ರಹಣವೆಂದ ಕಾಂಗ್ರೆಸ್
ಒಂದು ಕಡೆ ಹಿರಿಯ ನಾಯಕರನ್ನು ಭೇಟಿ ಮಾಡುತ್ತಾ, ಮತ್ತೊಂದು ಕಡೆ ದೇವರ ಮೊರೆ ಹೋಗ್ತಿದ್ದಾರೆ ವಿಜಯೇಂದ್ರ. ಇಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ವಿನಾಯಕನ ದರ್ಶನ ಪಡೆದು ಬುಧವಾರ ಪದಗ್ರಹಣಕ್ಕೆ ಸಿದ್ದರಾಗಿದ್ದಾರೆ. ಈ ವೇಳೆ ಮಾತನಾಡಿದ ವಿಜಯೇಂದ್ರ, ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಬೇಕಾಗಿದೆ ಎಂದಿದ್ದಾರೆ.
ಬೆಂಗಳೂರು, ನವೆಂಬರ್ 14: ತಾವು ಬಿಜೆಪಿ (BJP) ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಅಸಮಾಧಾನಗೊಂಡಿರುವ ಪಕ್ಷದ ಹಿರಿಯರನ್ನು ಸಮಾಧಾನಿಸುವ ಕೆಲಸವನ್ನು ಬಿವೈ ವಿಜಯೇಂದ್ರ (BY Vijayendra) ಮಂಗಳವಾರವೂ ಮುಂದುವರಿಸಿದ್ದಾರೆ. ಸೋಮವಾರ ಸಿಟಿ ರವಿ ನಿವಾಸಕ್ಕೆ ಹಾಗೂ ಆರ್. ಅಶೋಕ್ ಕಚೇರಿಗೆ ಭೇಟಿ ನೀಡಿದ್ದರು. ಆದರೆ ಪದಗ್ರಹಣಕ್ಕೆ ಬರಲ್ಲ ಎಂದು ಸಿಟಿ ರವಿ ಹೇಳಿದ್ದರು. ಈ ಮಧ್ಯೆ ವಿ ಸೋಮಣ್ಣ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಮೌನ ಮುಂದುವರಿದಿದೆ.
ಮತ್ತೊಂದೆಡೆ, ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಆಗ್ತಿದ್ದಂತೆ ವಿಜಯೇಂದ್ರ ಟೆಂಪಲ್ ರನ್ ಕೂಡ ಶುರುಮಾಡಿದ್ದಾರೆ. ಒಂದು ಕಡೆ ಹಿರಿಯ ನಾಯಕರನ್ನು ಭೇಟಿ ಮಾಡುತ್ತಾ, ಮತ್ತೊಂದು ಕಡೆ ದೇವರ ಮೊರೆ ಹೋಗ್ತಿದ್ದಾರೆ. ಇಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ವಿನಾಯಕನ ದರ್ಶನ ಪಡೆದು ಬುಧವಾರ ಪದಗ್ರಹಣಕ್ಕೆ ಸಿದ್ದರಾಗಿದ್ದಾರೆ. ಈ ವೇಳೆ ಮಾತನಾಡಿದ ವಿಜಯೇಂದ್ರ, ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಬೇಕಾಗಿದೆ ಎಂದಿದ್ದಾರೆ.
ಬುಧವಾರ ಪದಗ್ರಹಣದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ವಿಜಯೇಂದ್ರ ಮುಂದುವರಿಸಿದ್ದಾರೆ.
ವಿಜಯೇಂದ್ರ ಬಳಿ ಏನಂದ್ರು ಸಿಟಿ ರವಿ?
ಸಿಟಿ ರವಿ ಅವರ ನಿವಾಸಕ್ಕೆ ತೆರಳಿ ಪದಗ್ರಹಣ ಸಮಾರಂಭಕ್ಕೆ ಆಗಮಿಸುವಂತೆ ವಿಜಯೇಂದ್ರ ಆಹ್ವಾನ ನೀಡಿದ್ದಾರೆ. ಆದರೆ ಮಧ್ಯಪ್ರದೇಶ ವಿಧಾನಸಭಾ ಚುನಾವಣಾ ಜವಾಬ್ದಾರಿ ಇರುವ ಕಾರಣ ಪದಗ್ರಹಣದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ ಎಂದು ವಿಜಯೇಂದ್ರಗೆ ತಿಳಿಸಿರುವ ರವಿ, ಮಂಗಳವಾರ ಮುಂಜಾನೆಯೇ ಮಧ್ಯಪ್ರದೇಶಕ್ಕೆ ತೆರಳಿದ್ದಾರೆ.
ಈ ಮಧ್ಯೆ ಮಾಜಿ ಸಚಿವ ಮತ್ತು ಶಾಸಕ ಎಸ್. ಸುರೇಶ್ ಕುಮಾರ್ ತಮ್ಮ ಕ್ಷೇತ್ರದ ಮುಖಂಡರ ಜೊತೆ ವಿಜಯೇಂದ್ರ ನಿವಾಸಕ್ಕೆ ತೆರಳಿ ರಾಜ್ಯಾಧ್ಯಕ್ಷರಾಗಿದ್ದಕ್ಕೆ ಅಭಿನಂದಿಸಿದ್ದಾರೆ. ವಿಧಾನಸಭೆ ವಿಪಕ್ಷ ನಾಯಕ ಸ್ಥಾನದ ರೇಸ್ನಲ್ಲಿ ಸುರೇಶ್ ಕುಮಾರ್ ಹೆಸರು ಕೂಡಾ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ಪಕ್ಷದ ವೇದಿಕೆಯಲ್ಲಿ ಎಲ್ಲೂ ಕಾಣಿಸಿಕೊಳ್ಳದೇ ಇದ್ದ ಸುರೇಶ್ ಕುಮಾರ್ ನಿನ್ನೆಯ ಭೇಟಿ ಗಮನಾರ್ಹವಾಗಿದೆ.
ಇನ್ನು ವಿಜಯೇಂದ್ರ ಆಯ್ಕೆ ಬಗ್ಗೆ ಅಧಿಕೃತ ಘೋಷಣೆಯಾದ ಬಳಿಕ ಆರಂಭವಾಗಿರುವ ಮಾಜಿ ಸಚಿವ ವಿ. ಸೋಮಣ್ಣ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಅಸಮಾಧಾನಪೂರಿತ ಮೌನ ವ್ರತ ಇನ್ನೂ ಮುಂದುವರಿದಿದೆ. ಸೋಮಣ್ಣ ಮತ್ತು ಯತ್ನಾಳ್ ಅವರಿಬ್ಬರೂ ವಿಜಯೇಂದ್ರ ಅವರಿಗೆ ದೂರವಾಣಿ ಕರೆ ಮಾಡಿ ಶುಭ ಹಾರೈಸಿದ್ದರು. ಆ ವೇಳೆ ಬಿಎಸ್ ಯಡಿಯೂರಪ್ಪ ಕೂಡಾ ಮಾತನಾಡಿದ್ದಾರೆ ಎಂದು ಅವರ ಆಪ್ತರು ಹೇಳುತ್ತಿದ್ದಾರೆ. ಆದರೆ ಇಬ್ಬರು ನಾಯಕರ ನಡುವೆ ಫೋನ್ ಮಾತುಕತೆಯೇ ಆಗಿಲ್ಲ, ಯಡಿಯೂರಪ್ಪ ಕರೆ ಮಾಡಿದ್ದಾಗ ಸೋಮಣ್ಣ ಸ್ವೀಕರಿಸಿರಲಿಲ್ಲವಂತೆ ಎಂದು ಸೋಮಣ್ಣ ಆಪ್ತವಲಯ ಹೇಳುತ್ತಿದೆ.
ಕಾಂಗ್ರೆಸ್ ವ್ಯಂಗ್ಯ
ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮಕ್ಕೆ ಸಿಟಿ ರವಿ ಗೈರಾಗಲಿರುವುದು, ಯತ್ನಾಳ್, ಸೋಮಣ್ಣ ಅಂತರ ಕಾಯ್ದುಕೊಂಡಿರೋದರ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ. ಹೊಸ ಅಧ್ಯಕ್ಷರ ಪದಗ್ರಹಣವು ಬಿಜೆಪಿಗೆ ‘ಕೇತು ಗ್ರಹಣ’ವಾಗಿ ಪರಿಣಮಿಸುವುದು ನಿಶ್ಚಿತ ಎಂದು ಕಾಂಗ್ರೆಸ್ ಟೀಕೆ ಮಾಡಿದೆ.
ಇದನ್ನೂ ಓದಿ: ತಮ್ಮ ಸಾಮರ್ಥ್ಯದಿಂದ ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದಾರೆ: ಜೆಪಿ ನಡ್ಡಾ
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರೋ ಬಿವೈ ವಿಜಯೇಂದ್ರಗೆ ಸ್ವಪಕ್ಷದಲ್ಲೇ ಸಮನ್ವಯ ಕಾಯುವ ಟಾಸ್ಕ್ ಇದೆ. ಜೊತೆಗೆ ಕೆಲವೇ ತಿಂಗಳುಗಳಲ್ಲಿ ಎದುರಾಗಲಿರೋ ಲೋಕಸಭಾ ಚುನಾವಣೆಯಲ್ಲೂ ತಮ್ಮ ಸಾಮರ್ಥ್ಯ ಪ್ರದರ್ಶಿಸೋ ಅನಿವಾರ್ಯತೆ ಕೂಡಾ ಇದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ