ಬೆಂಗಳೂರು, (ನವೆಂಬರ್ 15): ರಾಜ್ಯ ಬಿಜೆಪಿಗೆ ನೂತನ ಸಾರಥಿಯಾಗಿ ಆಯ್ಕೆಯಾಗಿ ಮಿಂಚಿನ ಸಂಚಲನಕ್ಕೆ ಕಾರಣವಾಗಿರುವ ಬಿವೈ ವಿಜಯೇಂದ್ರ(BY Vijayendra )ಇಂದು(ಬುಧವಾರ) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೆಳಗ್ಗೆ 10ಗಂಟೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ. ಅದಕ್ಕೂ ಮೊದಲು ಬೆಳಗ್ಗೆ 9.45ಕ್ಕೆ ಬಿಜೆಪಿ ರಾಜ್ಯ ಕಚೇರಿಯಲ್ಲಿ ಬಿವೈವಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುತ್ತೆ. ಬಳಿಕ ಗೋಪೂಜೆ ನೆರರೇವರಿಸಲಿದ್ದಾರೆ. ಗಣಪತಿ ಹೋಮದ ಪೂರ್ಣಾಹುತಿ ನಂತರ ವಿಜಯೇಂದ್ರಗೆ ಹಾಲಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನಿನ್ನೆ ರಾತ್ರಿಯಿಂದಲೇ ಪೂಜೆ, ಹೋಮ ಹವನಗಳು ನೆರವೇರುತ್ತಿವೆ. ನಿನ್ನೆ ದುರ್ಗಾಹೋಮ, ಗಣಪತಿ ಹೋಮ ನಡೆದಿದೆ. ಇನ್ನು ಮಲ್ಲೇಶ್ವರಂನಲ್ಲಿ ರಸ್ತೆಯುದ್ಧಕ್ಕೂ ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ. ಎಲ್ಲೆಲ್ಲೂ ವಿಜಯೇಂದ್ರ ಪೋಸ್ಟರ್‌ಗಳು ಮಿಂಚುತ್ತಿವೆ. ಅಲ್ಲದೇ ಬಿಜೆಪಿ ಕಚೇರಿ ತಳಿರು ತೋರಣಗಳಿಂದ ಸಿಂಗಾರಗೊಂಡಿದೆ. ಕಮಲಪಾಳಯದಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿದೆ.
ಇದನ್ನೂ ಓದಿ: ಬಿಜೆಪಿ ಹಿರಿಯರ ಮನವೊಲಿಸಲು ಬಿವೈ ವಿಜಯೇಂದ್ರ ಸರ್ಕಸ್: ಪದಗ್ರಹಣವಲ್ಲ ಕೇತುಗ್ರಹಣವೆಂದ ಕಾಂಗ್ರೆಸ್
ಮೊನ್ನೆ ಮಠಮಾನ್ಯಗಳಿಗೆ ರೌಂಡ್ಸ್ ಹಾಕಿದ್ದ ವಿಜಯೇಂದ್ರ, ನಿನ್ನೆ ಮುಳುಬಾಗಿಲು ತಾಲೂಕಿನಲ್ಲಿರುವ ಕುರುಡುಮಲೆ ವಿನಾಯಕನ ದರ್ಶನ ಪಡೆದಿದ್ದರು, ಅಲ್ಲದೇ ಸಂಜೆ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿರುವ ಶಕ್ತಿದೇವತೆ ಅಣ್ಣಮ್ಮ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದದ್ದರು.
ವಿಜಯೇಂದ್ರ ಆಯ್ಕೆಯಿಂದಾಗಿ ಯಡಿಯೂರಪ್ಪ ವಿರೋಧಿ ಬಣ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ವಿ.ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್ ಮೌನಕ್ಕೆ ಜಾರಿದ್ದಾರೆ. ಹೀಗಾಗಿ ಇಂದಿನ ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮಕ್ಕೆ ಬಂಡಾಯ ಬಾವುಟದ ಬಿಸಿ ತಟ್ಟಲಿದ್ದು, ಹಲವು ನಾಯಕರು ಗೈರಾಗುವ ಸಾಧ್ಯತೆ ಇದೆ.
ಬಿ.ವೈ.ವಿಜಯೇಂದ್ರ ಅವರು ಪಕ್ಷದ ನಾಯಕರಿಗೆ ಖುದ್ದು ಕರೆ ಮಾಡಿ ಪದಗ್ರಹಣ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ರಾಜ್ಯ ಬಿಜೆಪಿ ನಾಯಕರು, ಕೇಂದ್ರ ಸಚಿವರು, ಜಿಲ್ಲಾಧ್ಯಕ್ಷರು ಸೇರಿ ಹಲವರಿಗೆ ವಿಜಯೇಂದ್ರ ಅವರೇ ಕರೆ ಮಾಡಿ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ಆದ್ರೆ, ಇಂದಿನ ಪದಗ್ರಹಣ ಕಾರ್ಯಕ್ರಮಕ್ಕೆ ಸಿ.ಟಿ.ರವಿ ಗೈರಾಗಲಿದ್ದು, ಇನ್ನುಳಿದಂತೆ ಅಸಮಾಧಾನಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೋ ಇಲ್ಲವೋ ಎನ್ನುವ ಪ್ರಶ್ನೆ ಎದ್ದಿದ್ದು, ಮುಂದೆ ವಿಜಯೇಂದ್ರ ಇದೆಲ್ಲವನ್ನು ಹೇಗೆ ಸರಿದೂಗಿಸಿಕೊಂಡು ಹೋಗುತ್ತಾರೆ ಎನ್ನುವುದೇ ಸದ್ಯದ ಕುತೂಹಲ.
ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:43 am, Wed, 15 November 23