ಬೆಂಗಳೂರು, ನವೆಂಬರ್ 14: ಬಿಜೆಪಿಯ (BJP) ಕರ್ನಾಟಕ ಘಟಕದ ನೂತನ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ (BY Vijayendra) ಅವರು ಬುಧವಾರ ಪದಗ್ರಹಣ ಮಾಡಲಿದ್ದಾರೆ. ಬೆಳಗ್ಗೆ 9.45ಕ್ಕೆ ಪಕ್ಷದ ರಾಜ್ಯ ಪ್ರಧಾನ ಕಚೇರಿಯಲ್ಲಿ ಬಿವೈ ವಿಜಯೇಂದ್ರಗೆ ಪೂರ್ಣಕುಂಭ ಸ್ವಾಗತ ದೊರೆಯಲಿದೆ. ಬಳಿಕ ವಿಜಯೇಂದ್ರ ಅವರು ಜಗನ್ನಾಥ ಭವನದ ಮುಂಭಾಗ ಗೋಪೂಜೆ ನೆರವೇರಿಸಲಿದ್ದಾರೆ. ಆನಂತರ ರಾಜ್ಯ ಬಿಜೆಪಿ ಕಚೇರಿಯಲ್ಲಿ ಗಣಪತಿ ಹೋಮದ ಪೂರ್ಣಾಹುತಿ ನಡೆಯಲಿದೆ. ಇದೇ ವೇಳೆ ನಿರ್ಗಮಿತ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉಪಸ್ಥಿರಿರಲಿದ್ದಾರೆ.
ಗಣಪತಿ ಹೋಮದ ಪೂರ್ಣಾಹುತಿ ಬಳಿಕ ನಳಿನ್ ಕುಮಾರ್ ಕಟೀಲ್ ಅವರು ನೂತನ ಅಧ್ಯಕ್ಷ ವಿಜಯೇಂದ್ರ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದು ಸುಮಾರು 6 ತಿಂಗಳು ಕಳೆದ ಬಳಿಕ ಬಿಜೆಪಿ ಹೈಕಮಾಂಡ್ ರಾಜ್ಯ ಘಟಕಕ್ಕೆ ಅಧ್ಯಕ್ಷರ ನೇಮಕ ಮಾಡಿದೆ. ಇದರ ಬೆನ್ನಲ್ಲೇ, ಮುಂದಿನ ಶುಕ್ರವಾರ ಪ್ರತಿಪಕ್ಷ ನಾಯಕನ ಆಯ್ಕೆ ಪ್ರಕ್ರಿಯೆಯೂ ನಡೆಯಲಿದೆ.
ನೂತನ ಅಧ್ಯಕ್ಷರ ನೇಮಕ ಹಾಗೂ ಪ್ರತಿಪಕ್ಷ ನಾಯಕನ ಆಯ್ಕೆ ವಿಳಂಬವಾಗುತ್ತಿರುವುದು ರಾಜ್ಯದಲ್ಲಿ ಬಿಜೆಪಿ ನಾಯಕರ ಅಸಮಾಧಾನಕ್ಕೂ ಕಾರಣವಾಗಿತ್ತು. ಅನೇಕ ನಾಯಕರು ಈ ಬಗ್ಗೆ ಬಹಿರಂಗವಾಗಿಯೂ ಅಸಮಾಧಾನವನ್ನು ಹೊರಹಾಕಿದ್ದರು. ಇದೀಗ ಕೊನೆಗೂ ಹೈಕಮಾಂಡ್ ಅಧ್ಯಕ್ಷರ ನೇಮಕ ಮಾಡಿದ್ದು, ಪ್ರತಿಪಕ್ಷ ನಾಯಕನ ಆಯ್ಕೆಗೂ ಕ್ರಮ ಕೈಗೊಂಡಿದೆ.
ಇದನ್ನೂ ಓದಿ: ತಮ್ಮ ಸಾಮರ್ಥ್ಯದಿಂದ ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದಾರೆ: ಜೆಪಿ ನಡ್ಡಾ
ಶುಕ್ರವಾರ ಕೇಂದ್ರದ ವೀಕ್ಷಕರು ಬರಲಿದ್ದು, ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಆ ಬಳಿಕ ಪ್ರತಿಪಕ್ಷ ನಾಯಕನ ಆಯ್ಕೆ ನಡೆಯಲಿದೆ ಎಂದು ವಿಜಯೇಂದ್ರ ಈಗಾಗಲೇ ಘೋಷಿಸಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ