ಚಿತ್ರದುರ್ಗ: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ಸದ್ದಿಲ್ಲದೇ ಪಕ್ಷಾಂತರ ಪರ್ವ ಜೋರಾಗಿದೆ. ಈ ಬಾರಿ ಶತಾಯಗತಾಯವಾಗಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಿಕ್ಕೆ ತರಬೇಕೆಂದು ಹೈಕಮಾಂಡ್ ಭರ್ಜರಿ ತಂತ್ರಗಳನ್ನು ರೂಪಿಸಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಕರ್ನಾಟಕದಲ್ಲಿ ಆಗಲೇ ಚುನಾವಣೆ ಪ್ರಚಾರ ಆರಂಭಿಸಿದ್ದಾರೆ. ಇದರ ಮಧ್ಯೆ ಕೋಟೆನಾಡು ಚಿತ್ರದುರ್ಗದಲ್ಲಿ ಬಿಜೆಪಿಗೆ ಆರಂಭಕ ಆಘಾತವಾಗಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಬಸವರಾಜ ಮಂಡಿಮಠ(Basavaraj Mandimutt) ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಇಂದು (ಜನವರಿ 29) ಜೆಡಿಎಸ್ ಜಿಲ್ಲಾಧ್ಯಕ್ಷ ಯಶೋಧರ್ ಹಾಗೂ ಚಳ್ಳಕೆರೆ ಅಭ್ಯರ್ಥಿ ರವೀಶ್ ಉಪಸ್ಥಿತಿಯಲ್ಲಿ ಮಾಜಿ ಶಾಸಕ ಬಸವರಾಜ ಮಂಡಿಮಠ ಅವರು ಬಿಜೆಪಿ ತೊರೆದು ಜೆಡಿಎಸ್ ಸೇರಿದರು.
1999ರ ಚಳ್ಳಕೆರೆ ವಿಧಾನಸಭೆ ಚುನಾವಣೆಯಲ್ಲಿ ಬಸವರಾಜ ಮಂಡಿಮಠ ಅವರು ಬಿಜೆಪಿಯಿಂದ ಸ್ಪರ್ಧಿಸಿ 26517 ಮತಗಳೊಂದಿಗೆ ತಿಪ್ಪೇಸ್ವಾಮಿ ಅವರನ್ನು ಸೋಲಿಸಿದ್ದರು. ಬಳಿಕ 2004ರಲ್ಲಿ ಕಾಂಗ್ರೆಸ್ನ ಸುಧಾಕರ್ ಡಿ ಅವರ ವಿರುದ್ಧ ಬಸವರಾಜ ಮಂಡಿಮಠ ಸೋಲುಕಂಡಿದ್ದರು. 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ತಿಪ್ಪೇಸ್ವಾಮಿ ಅವರು ಕಾಂಗ್ರೆಸ್ನಿಂದ ಅಖಾಡಕ್ಕಿಳಿದಿದ್ದ ನಟ ಶಶಿಕುಮಾರ್ ಅವರನ್ನು ಸೋಲಿಸಿದ್ದರು.
ಇತ್ತೀಚೆಗೆ ನಟ ಶಶಿಕುಮಾರ್ ಅವರು ಬಸವರಾಜ ಮಂಡಿಮಠ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಶಿಕುಮಾರ್ ಮತ್ತೆ ರಾಜಕೀಯಕ್ಕೆ ರೀ ಎಂಟ್ರಿಯಾಗುತ್ತಾರಾ ಎನ್ನುವ ಚರ್ಚೆಗಳು ನಡೆದಿದ್ದವು.
ಇನ್ನು ಕಳೆದ ಅಂದರೆ 2018ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ರಘುಮೂರ್ತಿ ಅವರು ಗೆಲುವು ಸಾಧಿಸಿದ್ದರು. ಆದ್ರೆ, ಈ ಚುನಾವಣೆಯಲ್ಲಿ ಜೆಡಿಎಸ್ನ ರವೀಶ್ ಕುಮಾರ್ ಅವರು 59335 ಮತಗಳನ್ನು ಪಡೆದುಕೊಂಡು ಭಾರೀ ಪೈಪೋಟಿ ನೀಡಿ ಕೊನೆಗೆ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಈ ಬಾರಿ ಚಳ್ಳಕೆರೆ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಮತ್ತೆ ರವೀಶ್ ಕುಮಾರ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದೆ. ಇದೀಗ ಬಿಜೆಪಿ ಮಾಜಿ ಶಾಸಕ ಬಸವರಾಜ ಮಂಡಿಮಠ ಸಹ ಜೆಡಿಎಸ್ ಸೇರ್ಪಡೆಯಾಗಿದ್ದು, ರವೀಶ್ ಕುಮಾರ್ ಗೆಲ್ಲುವ ಉತ್ಸಹದಲ್ಲಿದ್ದಾರೆ.