ಚಿಕ್ಕಬಳ್ಳಾಪುರ, ಮಾರ್ಚ್ 31: ಲೋಕಸಭೆ ಚುನಾವಣೆಯಲ್ಲಿ (Lok Sabha Election) ಚಿಕ್ಕಬಳ್ಳಾಪುರ (Chikkaballapur) ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರವಾಗಿ ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ಎರಡೂ ರಾಷ್ಟ್ರೀಯ ಪಕ್ಷಗಳಿಗೆ ತಲನೋವಾಗಿತ್ತು. ಕೊನೆಗೆ ಸಾಕಷ್ಟು ಅಳಿದು, ತೂಗಿ ಟಿಕೆಟ್ ನೀಡಲಾಗಿದೆ. ಬಿಜೆಪಿಯಿಂದ ಮಾಜಿ ಸಚಿವ ಕೆ. ಸುಧಾಕರ್ ಮತ್ತು ಪ್ರತಿಸ್ಪರ್ಧಿಯಾಗಿ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಸ್ಪರ್ಧಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯು ಐದು ವಿಧಾನಸಭೆ ಕ್ಷೇತ್ರಗಳನ್ನು ಒಳಡಗೊಂಡಿದ್ದು, ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಶಾಲಿಯಾಗಿದೆ. ಹೀಗಾಗಿ ಚಿಕ್ಕಬಳ್ಳಾಪುರವನ್ನು ಕಾಂಗ್ರೆಸ್ ಭದ್ರಕೋಟೆಯನ್ನಾಗಿಸುವ ನಿಟ್ಟಿನಲ್ಲಿ ಲೋಕಸಭೆ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಜಿಲ್ಲೆಯ ಕೈ ನಾಯಕರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ.
ಹೀಗಾಗಿ ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ, ಹೆಚ್ಡಿ ದೇವೇಗೌಡರ ಆಪ್ತ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ಯೋಚಿಸಿದೆ. ಹೀಗಾಗಿ ‘ಕೈ’ ನಾಯಕರಾದ ಸಚಿವ ಎಂ.ಸಿ.ಸುಧಾಕರ್, ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ, ಶಾಸಕ ಪ್ರದೀಪ್ ಈಶ್ವರ್, ಎಂಎಲ್ಸಿ ಸೀತಾರಾಂ ಕೆ.ಪಿ ಬಚ್ಚೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿ, ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ.
ಜೆಡಿಎಸ್ ನಾಯಕರು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ನಮ್ಮ ರಾಜಕೀಯ ಎದುರಾಳಿ ಡಾ. ಕೆ ಸುಧಾಕರ್ ಪರ ನಾನು ನಿಲ್ಲಲ್ಲ. ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಹೇಳಿದಂತೆ ಸುಮ್ಮನಿರಲು ಆಗಲ್ಲ. ಹೀಗಾಗಿ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ಕೆ.ಪಿ ಬಚ್ಚೇಗೌಡ ಹೇಳಿದರು.
ಇದನ್ನೂ ಓದಿ: ಮೈಸೂರು ಭಾಗದಲ್ಲಿ ಬಿಜೆಪಿಗೆ ಮತ್ತೊಂದು ಶಾಕ್! ಕಮಲ ತೊರೆದು ಕೈ ಹಿಡಿಯಲಿರುವ ಯುವ ಮೋರ್ಚಾ ಘಟಕದ ಉಪಾಧ್ಯಕ್ಷ
ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಬಚ್ಚೇಗೌಡರ ತಂದೆ ಕೆ.ಬಿ.ಪಿಳ್ಳಪ್ಪ ಅವರದ್ದು ದೊಡ್ಡ ಹೆಸರು. ಜನತಾದಳದಿಂದ ಕೆ.ಬಿ.ಪಿಳ್ಳಪ್ಪ ವಿಧಾನ ಪರಿಷತ್ ಸದಸ್ಯರಾಗಿದ್ದರು. ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಮೊದಲ ಅಧ್ಯಕ್ಷರೂ ಆಗಿದ್ದ ಅವರು ಒಕ್ಕಲಿಗ ಸಮಾಜದ ಮೇಲೆ ಪ್ರಬಲ ಹಿಡಿತ ಹೊಂದಿದ್ದರು. 1975ರಿಂದಲೂ ಈ ಕುಟುಂಬ ದೇವೇಗೌಡರ ಆಪ್ತ ವಲಯದಲ್ಲಿದೆ.
2008ರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾಗಿದ್ದ ಕೆ.ಪಿ.ಬಚ್ಚೇಗೌಡ ಕ್ಷೇತ್ರದಲ್ಲಿ ತಮ್ಮದೇ ಆದ ಸಂಪರ್ಕ ಜಾಲ ಮತ್ತು ಬೆಂಬಲಿಗರನ್ನು ಹೊಂದಿದ್ದಾರೆ. ಸರಳ ವ್ಯಕ್ತಿ ಎನ್ನುವ ಚಹರೆಯನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. 2013, 2018 ಮತ್ತು 2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸೋಲು ಅನುಭವಿಸಿದ್ದಾರೆ.
2023ರ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಕ್ಷೇತ್ರದಲ್ಲಿ 60 ದಿನ ಪಾದಯಾತ್ರೆ ಸಹ ನಡೆಸಿದ್ದರು. ಈ ಚುನಾವಣೆಯಲ್ಲಿ ಆರ್ಥಿಕವಾಗಿ ಬಲ ತುಂಬುವುದಾಗಿ ವರಿಷ್ಠರು ಭರವಸೆ ಸಹ ನೀಡಿದ್ದರು. ಆದರೆ ಚುನಾವಣೆಯ ಅಂತಿಮ ಸಮಯದಲ್ಲಿ ವರಿಷ್ಠರು ಸಂಪನ್ಮೂಲ ಒದಗಿಸದ ಕಾರಣ ಕೊನೆ ಕ್ಷಣದಲ್ಲಿ ಜೆಡಿಎಸ್ ಮತಗಳು ಚದುರಿದವು. ಬಚ್ಚೇಗೌಡರು 11 ಸಾವಿರ ಮತ ಪಡೆದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ