ಲೋಕಸಭೆ ಚುನಾವಣೆ ನಂತರವೂ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಕೆ: ದೇವೇಗೌಡ ಅಧಿಕೃತ ಘೋಷಣೆ
ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ತಾತ್ಕಾಲಿಕವಲ್ಲ, ಮುಂದೆಯೂ ಇರಲಿದೆ ಎಂದು ನಿನ್ನೆಯಷ್ಟೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಇಂದು ಅಧಿಕೃತವಾಗಿ ಘೋಷಣೆ ಮಾಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್ಡಿ ದೇವೇಗೌಡ, ಲೋಕಸಭೆ ಚುನಾವಣೆ ನಂತರವೂ ಮೈತ್ರಿ ಮುಂದುವರಿಯಲಿದೆ ಎಂದಿದ್ದಾರೆ.
ತುಮಕೂರು, ಮಾ.30: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ (Lok Sabha Elections) ನಂತರವೂ ಬಿಜೆಪಿ-ಜೆಡಿಎಸ್ ಮೈತ್ರಿ (BJP-JDS Alliance) ಮುಂದುವರಿಯಲಿದೆ ಎಂದು ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್ಡಿ ದೇವೇಗೌಡ (HD Deve Gowda) ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಮೈತ್ರಿ ತಾತ್ಕಾಲಿಕವಲ್ಲ, ಮುಂದೆಯೂ ಇರಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಹೇಳಿಕೆ ಬೆನ್ನಲ್ಲೇ ದಳಪತಿ ಈ ಘೋಷಣೆ ಮಾಡಿದ್ದಾರೆ.
ತುಮಕೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ದೇವೇಗೌಡ, ಚುನಾವಣೆ ಮುಗಿದ ಮೇಲೇಯೂ ಬಿಜೆಪಿ-ಜೆಡಿಎಸ್ ಸಂಬಂಧ ಮುಂದುವರೆಯುತ್ತದೆ. ಈ ಸಂಬಂಧ ಕಾಪಾಡುಕೊಂಡು ಹೋಗುತ್ತೇವೆ. ನಮ್ಮ ಬಾಂಧವ್ಯ ತಾತ್ಕಾಲಿಕವಲ್ಲ. ಈ ಬಾಂಧವ್ಯವನ್ನ ಮುಂದುವರೆಸಿಕೊಂಡು ಹೋಗುವ ಪ್ರಾಮಾಣಿಕ ಕೆಲಸ ಮಾಡಬೇಕು ಎಂದರು.
ಯಾಕೆ ಕಾಂಗ್ರೆಸ್ ಈ ಹೀನಾಯ ಸ್ಥಿತಿ ತಲುಪಿದೆ, ಎಲ್ಲಿದೆ ಕಾಂಗ್ರೆಸ್? ಇಡೀ ಹಿಂದೂಸ್ತಾನದಲ್ಲಿ ಕಾಂಗ್ರೆಸ್ ನಾಲ್ಕು ಕಡೆ ಇದೆ. ಇಡೀ ದೇಶದಲ್ಲಿ ರಾಜಸ್ತಾನ್, ಮಧ್ಯ ಪ್ರದೇಶ, ತೆಲಂಗಾಣ, ಕರ್ನಾಟಕದಲ್ಲಿ ಮಾತ್ರ ಇದೆ ಎಂದರು.
ಈ ಕರ್ನಾಟಕ ಸಮನ್ವಯ ಸಮಿತಿಯಲ್ಲಿ ನಾನು ಒಂದು ಶಬ್ಧ ಬಳಕೆ ಮಾಡಿದೆ. ನಾನು ಯಾವತ್ತೂ ಕಟುವಾದ ಶಬ್ಧ ಬಳಕೆ ಮಾಡಲ್ಲ. ಜೆಡಿಎಸ್ ಎಲ್ಲಿದೆ ಅಂತಾ ಮೈಸೂರಿನಲ್ಲಿ ಗೌರವಾನ್ವಿತ ಮುಖ್ಯಮಂತ್ರಿ ಪ್ರಶ್ನೆ ಮಾಡುತ್ತಾರೆ. ಕುಮಾರಸ್ವಾಮಿಗೆ ಅವರ ಮಗನನ್ನ ಗೆಲ್ಲಿಸಲು ಆಗಲ್ಲ, ಕುಮಾರಸ್ವಾಮಿ ತಂದೆ ತುಮಕೂರಿನಲ್ಲಿ ನಿಂತಾಗ ಗೆಲ್ಲಿಸಲು ಆಗಿಲ್ಲ ಎಂದು ಹೇಳುತ್ತಿದ್ದಾರೆ ಎಂದರು. ಅಲ್ಲದೆ, 2019ರ ಸೋಲಿಗೆ ಕಾರಣ ಯಾರು ಅಂತ ಸೋಲಿನ ಪರಾಮರ್ಶೆ ಮಾಡಿದರು.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ತಾತ್ಕಾಲಿಕ ಮೈತ್ರಿ ಅಲ್ಲ, ಮುಂದೆಯೂ ಇರಲಿದೆ: ಹೆಚ್ಡಿ ಕುಮಾರಸ್ವಾಮಿ
ನಾನು ತುಮಕೂರಿನಲ್ಲಿ ನಿಂತಾಗ ಏನೇನು ಆಟ ಆಡಿದರು, ನಾನು ತುಮಕೂರಿನಲ್ಲಿ ಅರ್ಜಿ ಹಾಕಬೇಕು ಅಂತ ಯೋಚಿಸಿರಲಿಲ್ಲ. ನಾನು ಮುಂದಕ್ಕೆ ಪಾರ್ಲಿಮೆಂಟ್ಗೆ ನಿಲ್ಲುವುದಿಲ್ಲ ಅಂತ ಖಂಡತುಂಡವಾಗಿ ಹೇಳಿದ್ದೆ. ನನ್ನ ಮಂಡಿನೋವು ಇತ್ತು. ರಾಹುಲ್ ಗಾಂಧಿ, ಸೋನಿಯಾಗಾಂಧಿ, ಫಾರೂಕ್ ಅಬ್ದುಲ್ಲಾ, ಮಲ್ಲಿಕಾರ್ಜುನ್ ಖರ್ಗೆ ಇದ್ದರು. ಅವರೆಲ್ಲಾರ ಮುಂದೆ ಚುನಾವಣೆಗೆ ನಿಲ್ಲದಿರುವ ಬಗ್ಗೆ ಹೇಳಿದ್ದೆ. ನಾನೇನು ಸೀಟು ಕೇಳಿರಲಿಲ್ಲ ಎಂದರು.
ಸಿದ್ದರಾಮಯ್ಯನವರು ದೇವಲೋಕದಿಂದ ಇಳಿದುಬಂದಿದ್ದಾರೆ ಅನ್ನೋ ಭಾವನೆಯಿತ್ತು. ದೇವೇಗೌಡರೇ ನೀವು ತುಮಕೂರಿಗೆ ಬಂದ ಕಾರಣವೇನು ಎಂದು ರಾಜಣ್ಣ ಅವರು ಹೇಳುತ್ತಾರೆ. ಆದರೆ, ತುಮಕೂರಿಗೆ ಬರಬೇಕು ಅಂತಾ ನಾನು ಹೇಳೇ ಇಲ್ಲ. ರಾಜಕೀಯ ಚದುರಂಗದ ಆಟ. ನೀವು ಮುದ್ದಹನುಮೇಗೌಡರಿಗೆ ಅನ್ಯಾಯ ಮಾಡಿದ್ದೀರಿ. ಅವರಿಗೆ ನೀವು ಸ್ಥಾನ ಕಲ್ಪಿಸಿಕೊಡಬೇಕಿತ್ತು ಎಂದರು.
ಸಿದ್ರಾಮಣ್ಣ, ರಾಜಣ್ಣ ಅವರೇ ನಾನು ರಾಜಕೀಯದಿಂದ ನಿವೃತ್ತಿ ಆಗೋ ಹೊತ್ತಿಗೆ ಏನ್ ಮಾಡಿದ್ರಿ ನೀವು ಎಂದು ಪ್ರಶ್ನಿಸಿದ ದೇವೇಗೌಡರು, ಸಿದ್ದರಾಮಯ್ಯ ಅವರಿಗೆ ಅವರ ಸಮಾಜದ ಸಭೆಯಿತ್ತು. ಆ ಸಭೆಗೆ ನಾನು ಮತ್ತು ಸುರೇಶ್ ಬಾಬು ಹೋದಾಗ ತಕ್ಷಣ ಸಭೆ ನಿಲ್ಲಿಸಿದರು. ನನಗೆ ಬೇಸರವಾಗಿ ಅಲ್ಲಿಂದ ವಾಪಸ್ ಬಂದೆ. ದೇವೇಗೌಡನನ್ನ ತೆಗೆಯುವುದು ಹೇಗೆ ಅಂತ ರಾತ್ರಿ ಒಂದು ಗಂಟೆವರೆಗೂ ಚರ್ಚೆ ನಡೆದಿತ್ತು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ