ಚಿಕ್ಕಬಳ್ಳಾಪುರ, ಮಾರ್ಚ್ 29: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ (Chikkaballapur Lok Sabha Constituency) ಕಾಂಗ್ರೆಸ್ (Congress) ಟಿಕೆಟ್ ವಿಚಾರವಾಗಿ ಹೊತ್ತಿದ್ದಂತೆ ಬೆಂಕಿ ಸದ್ಯದ ಮಟ್ಟಿಗೆ ಆರಿದಂತೆ ಕಾಣುತ್ತಿದೆ. ಷರತ್ತುಗಳ ಮೇಲೆ ರಕ್ಷಾ ರಾಮಯ್ಯಗೆ ಬೆಂಬಲ ಸೂಚಿಸಲು ಕ್ಷೇತ್ರದ ಕಾಂಗ್ರೆಸ್ ಮುಖಂಡರು ನಿರ್ಧರಿಸಿದ್ದಾರೆ. ನಿನ್ನೆ (ಮಾ.28) ರಂದು ಖಾಸಗಿ ಹೋಟಲ್ನಲ್ಲಿ ನಡೆದ ಸಭೆಯಲ್ಲಿ ಬಾಗೇಪಲ್ಲಿ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಹಲವು ಷರತ್ತುಗಳನ್ನು ಮುಂದಿಟ್ಟು ಬೆಂಬಲ ಸೂಚಿಸಲು ಒಪ್ಪಿಕೊಂಡಿದ್ದಾರೆ. ಹಾಗಾದರೆ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ವಿಧಿಸಿದ ಷರತ್ತುಗಳೇನು?….
“ಸರ್ಕಾರದ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನಕ್ಕೆ ಬೆಂಬಲ ಕೊಡಬೇಕು. ಬಾಗೇಪಲ್ಲಿ ಕ್ಷೇತ್ರದಲ್ಲಿ ಸುಬ್ಬಾರೆಡ್ಡಿ ಮೂಲಕವೆ ಚುನಾವಣೆ ನಡೆಸಬೇಕು. ಶಾಸಕ ಸುಬ್ಬಾರೆಡ್ಡಿ ವಿರೋಧಿ ಪಾಳಯವನ್ನು ದೂರ ಇಡಬೇಕು. ಮುಂಬರುವ ಸ್ಥಳಿಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಬಾರದು. ಷರತ್ತುಗಳಿಗೆ ಒಪ್ಪಿದರೇ ಲೋಕಸಭಾ ಚುನಾವಣೆಯಲ್ಲಿ ಬಹುಮತ ಕೊಡಿಸುವ ಜವಾಬ್ದಾರಿ ನಮ್ಮದು” ಎಂದು ಎಸ್.ಎನ್ ಸುಬ್ಬಾರೆಡ್ಡಿ ಷರತ್ತು ವಿಧಿಸಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ರಕ್ಷಾ ರಾಮಯ್ಯ ಅವರಿಗೆ ನೀಡದಂತೆ ಸ್ಥಳೀಯ ಶಾಸಕರು ವಿರೋಧ ವ್ಯಕ್ತಪಡಿಸಿದ್ದರು. ರಕ್ಷಾ ರಾಮಯ್ಯ ಅವರ ಬದಲು ವೀರಪ್ಪ ಮೊಯ್ಲಿ ಅಥವಾ ಶಿವಶಂಕರ ರೆಡ್ಡಿ ಅವರಿಗೆ ನೀಡುವಂತೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದರು.
ಏಕಪಕ್ಷೀಯವಾಗಿ ರಕ್ಷಾ ರಾಮಯ್ಯ ಅವರ ಆಯ್ಕೆಯಾಗುತ್ತಿದೆ, ಇದಕ್ಕೆ ನಾವು ವಿರೋಧ ವ್ಯಕ್ತಪಡಿಸುತ್ತೇವೆ. ಯೂತ್ ಕಾಂಗ್ರೆಸ್ ಚುನಾವಣೆ ಗೆಲ್ಲಲು ಸಾಧ್ಯವಾಗದವರಿಗೆ ನಮ್ಮ ಕ್ಷೇತ್ರಕ್ಕೆ ಕಳಿಸುವುದು ಯಾಕೆ? ಶಾಸಕರ ಅಭಿಪ್ರಾಯ ಪಡೆಯದೇ ಟಿಕೆಟ್ ಘೋಷಣೆ ಸರಿಯಲ್ಲ ಎಂದು ಶಾಸಕ ಸುಬ್ಬಾ ರೆಡ್ಡಿ ಸೇರಿಂದತೆ ಕ್ಷೇತ್ರದ ಮತ್ತಷ್ಟು ಶಾಸಕರು ಹೈಕಮಾಂಡ್ ನಾಯಕರು ಮತ್ತು ಸಿಎಂ, ಡಿಸಿಎಂರನ್ನು ಭೇಟಿಯಾಗಲು ತೀರ್ಮಾನ ಮಾಡಿದ್ದರು.
ಇದನ್ನೂ ಓದಿ: ಕೋಲಾರ ಕಾಂಗ್ರೆಸ್ ಶಾಸಕರ ಸಂಧಾನ ಸಭೆ ಯಶಸ್ವಿ: ಹಾಗಾದ್ರೆ ಲೋಕಸಭೆ ಟಿಕೆಟ್ ಯಾರಿಗೆ..?
ಮತ್ತೊಂದಡೆ ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಅವರಿಗೆ ಟಿಕೆಟ್ ನೀಡುವಂತೆ ಗೌರಿಬಿದನೂರಿನಲ್ಲಿ ಬೆಂಬಲಿಗರು ಒತ್ತಾಯಿಸಿದ್ದಾರೆ. ಎನ್.ಹೆಚ್.ಶಿವಶಂಕರ ರೆಡ್ಡಿ ಅವರಿಗೆ ಟಿಕೆಟ್ ತಪ್ಪಿದರೆ ತಮ್ಮ ಸ್ಥಾನಮಾನಗಳಿಗೆ ರಾಜೀನಾಮೆ ನೀಡುತ್ತೇವೆ ಎಂದು ನಗರಸಭಾ ಸದಸ್ಯರು ಹಾಗೂ ಸ್ಥಳಿಯ ಕಾಂಗ್ರೆಸ್ ಮುಖಂಡರು ಎಚ್ಚರಿಕೆ ನೀಡಿದ್ದರು.
ಒಟ್ಟಿನಲ್ಲಿ ಇಂದು (ಮಾರ್ಚ್ 29) ನಡೆಯುವ ಸಿಇಸಿ ಸಮಿತಿಯತ್ತ ಎಲ್ಲರ ಚಿತ್ತ ನೆಟ್ಟಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗಾಗಿ ನಡೆದ ಹೈಡ್ರಾಮಾ ಅಂತ್ಯ ಕಾಣಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ