ಚಾಮರಾಜನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಗೂಂಡಾ, ರೌಡಿ ಎಂದ ಯತೀಂದ್ರ ಸಿದ್ದರಾಮಯ್ಯ
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ನಾಯಕರಿಗೆ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ವಾಗ್ದಾಳಿ ಮುಂದುವರಿಸಿದ್ದಾರೆ.. ಇತ್ತೀಚೆಗಷ್ಟೇ ಸಚಿವ ಶಿವರಾಜ್ ತಂಗಡಗಿ ಮೋದಿ ವಿರುದ್ಧ ಅಕ್ಷೇಪಾರ್ಹ ಹೇಳಿಕೆ ನೀಡಿದ್ದರೆ, ಇದೀಗ ಯತೀಂದ್ರ ಸಿದ್ದರಾಮಯ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಗೂಂಡಾ, ರೌಡಿ ಎಂದು ನಿಂದಿಸಿದ್ದಾರೆ.
ಚಾಮರಾಜನಗರ, ಮಾರ್ಚ್ 29: ಬಿಜೆಪಿ (BJP) ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಒಬ್ಬ ‘ಗೂಂಡಾ, ರೌಡಿ’. ಪ್ರಧಾನಿ ಮೋದಿ ಅರಿಗೆ ಇಂಥವರೇ ಸಹವರ್ತಿಗಳು ಎಂದು ಕಾಂಗ್ರೆಸ್ ಮುಖಂಡ, ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಟೀಕಿಸಿದ್ದಾರೆ. ಚಾಮರಾಜನಗರದ ಹನೂರಿನಲ್ಲಿ ಗುರುವಾರ ಕಾಂಗ್ರೆಸ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಮಿತ್ ಶಾ ಗುಜರಾತ್‌ನಲ್ಲಿ ಕೊಲೆ ಆರೋಪ ಎದುರಿಸುತ್ತಿದ್ದಾರೆ. ಅವರಿಗೆ ಅಪರಾಧ ಚಟುವಟಿಕೆಗಳ ಹಿನ್ನೆಲೆ ಇದೆ. ಆದರೆ ಈಗ ಅವರು ದೇಶದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ ಎಂದರು.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಯತೀಂದ್ರ, ನಿರುದ್ಯೋಗಿಗಳಿಗೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಈಗ ಉದ್ಯೋಗ ಸೃಷ್ಟಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಲ್ಲ ಎನ್ನುತ್ತಾರೆ. ಕಪ್ಪುಹಣ ತರುವುದಾಗಿ ಭರವಸೆ ನೀಡಿದರು. ಆದರೆ ಏನಾಯಿತು? ಸ್ವಿಸ್ ಬ್ಯಾಂಕ್‌ನಲ್ಲಿರುವ ಖಾತೆದಾರರ ಹೆಸರನ್ನು ಸಹ ಅವರು ಬಹಿರಂಗಪಡಿಸಿಲ್ಲ ಎಂದರು.
ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವುದಾಗಿ ಹೇಳಿಕೊಳ್ಳುತ್ತಿದೆ. 400 ಸೀಟು ಬಂದರೆ ಸಂವಿಧಾನ ಬದಲಿಸುವುದು ಅವರ ರಹಸ್ಯ ಅಜೆಂಡಾ. ದೇಶದ ಇತಿಹಾಸದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕತ್ತು ಹಿಸುಕುವ ಸರ್ಕಾರವಿದ್ದರೆ ಅದು ಮೋದಿ ಸರ್ಕಾರ ಎಂದು ಯತೀಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಅತ್ತ ಸಿದ್ದರಾಮಯ್ಯ ಸಹ ಮೂರು ದಿನ ಮೈಸೂರಿನಲ್ಲಿ ಬೀಡುಬಿಟ್ಟು ಬಿಜೆಪಿ ಜೆಡಿಎಸ್ ಮೈತ್ರಿಯನ್ನು ಹಣಿಯಲು ತಂತ್ರಗಾರಿಕೆ ರೂಪಿಸಿದ್ದರು. ಇದರ ಬೆನ್ನಲ್ಲೇ ಯತೀದ್ರ ಸಹ ಮೈಸೂರು, ಚಾಮರಾಜನಗರದಲ್ಲಿ ರಾಜಕೀಯ ಸಭೆಗಳನ್ನು ಹೆಚ್ಚಿಸಿದ್ದಾರೆ.
ಮೈಸೂರು ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ವಿರುದ್ಧ ಯಾವುದೇ ರೀತಿಯ ಟೀಕೆ ಮಾಡಲು ಸಿಎಂ ಸಿದ್ದರಾಮಯ್ಯ ಮತ್ತು ಯತೀಂದ್ರ ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಕೇಂದ್ರ ಸರ್ಕಾರವನ್ನೇ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿದ್ದಾರೆ.ಯಾವುದೇ ಕಾರಣಕ್ಕೂ ಯದುವೀರ್ ವಿರುದ್ಧ ನೇರ ಟೀಕೆ ಮಾಡಿದಂತೆ ಪಕ್ಷದ ಕಾರ್ಯಕರ್ತರು ಮತ್ತು ನಾಯಕರಿಗೆ ಸಿದ್ದರಾಮಯ್ಯ ನೀಡಿದ್ದಾರೆ.
ಇದನ್ನೂ ಓದಿ: ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಖಚಿತ, ನಾಮಪತ್ರ ಸಲ್ಲಿಕೆಗೆ ಮುಹೂರ್ತ ಫಿಕ್ಸ್
ಮತ್ತೊಂದೆಡೆ, ಪ್ರಧಾನಿ ಮೋದಿ ಹಾಗೂ ಕೇಂದ್ರ ನಾಯಕರ ವಿರುದ್ಧ ಕಾಂಗ್ರೆಸ್ ಪಕ್ಷದ ನಾಯಕರ ಆಕ್ಷೇಪಾರ್ಹ ಹೇಳಿಕೆಗಳು ಮುಂದುವರಿದಿವೆ. ‘ಮೋದಿ ಮೋದಿ’ ಎಂದು ಘೋಷಣೆ ಕೂಗುವ ಯುವಕರು ಮತ್ತು ವಿದ್ಯಾರ್ಥಿಗಳ ಕಪಾಳಕ್ಕೆ ಬಾರಿಸಬೇಕು ಎಂದು ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದು ವಿವಾದಕ್ಕೀಡಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ