ಸಿಎಂ ಬದಲಾವಣೆ ಸುದ್ದಿಗೆ ರೆಕ್ಕೆಪುಕ್ಕ: ಆಪ್ತರ ಬಳಿ ಬೇಸರ ತೋಡಿಕೊಂಡ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬದಲಾವಣೆಯ ಸುದ್ದಿ ಹರಿದಾಡಿದ ಬೆನ್ನಲ್ಲೇ ಮತ್ತಷ್ಟು ಚುರುಕಾಗಿ ಕೆಲಸ ಮಾಡಲು ಬೊಮ್ಮಾಯಿ ಮುಂದಾಗಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಬಿಜೆಪಿಯ ಕೆಲವರು ಮಾತನಾಡಿರುವುದು ಹಾಗೂ ಕಾಂಗ್ರೆಸ್ ಅದನ್ನೇ ದೊಡ್ಡದಾಗಿ ಬಿಂಬಿಸುವಂತೆ ಟ್ವೀಟ್ ಮಾಡಿರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರಿಗೆ ಬೇಸರ ತರಿಸಿದೆ. ಈ ಕುರಿತು ಆಪ್ತರ ಜೊತೆಗೆ ಅಸಮಾಧಾನ ತೋಡಿಕೊಂಡಿರುವ ಬೊಮ್ಮಾಯಿ, ‘ಯಾವುದೇ ರೆಕ್ಕೆಪುಕ್ಕ ಇಲ್ಲದ ಇಂಥ ಸುದ್ದಿ ಹೇಗಾದ್ರೂ ಹೊರಗೆ ಬರುತ್ತೆ. ಪದೇಪದೇ ಈ ರೀತಿ ಸುದ್ದಿ ಹರಿದಾಡಿದರೆ ಕೆಲಸ ಮಾಡುವುದು ಹೇಗೆ’ ಎಂದು ಪ್ರಶ್ನಿಸಿದ್ದಾರೆ.
ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್ ಗೌಡ ಹೇಳಿಕೆ ಬಗ್ಗೆ ಸಿಟ್ಟಿನಿಂದ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಇವರು ಅದೇನು ಮಾತಾಡ್ತಿದ್ದಾರೆ. ನಮ್ಮ ಪಕ್ಷದಲ್ಲಿ ಇಂಥ ಗುಸುಗುಸು ಇದ್ದರೆ ಹೊರಗಿನವರು ಬಳಸಿಕೊಳ್ಳುತ್ತಾರೆ’ ಎಂದು ಆಕ್ಷೇಪಿಸಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ಟಿವಿ9 ಪ್ರತಿನಿಧಿಗೆ ತಿಳಿಸಿವೆ. ಸುರೇಶ್ ಗೌಡ ಮಾತನ್ನು ಆಧರಿಸಿಯೇ ಕಾಂಗ್ರೆಸ್ನ ಕರ್ನಾಟಕ ಘಟಕ ಟ್ವೀಟ್ ಮಾಡಿತ್ತು. ರಾಜ್ಯದಲ್ಲಿ ಬಿಜೆಪಿಯಿಂದ 3ನೇ ಮುಖ್ಯಮಂತ್ರಿ ಬರುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಚರ್ಚೆ ಹುಟ್ಟುಹಾಕಿತ್ತು.
ಮುಖ್ಯಮಂತ್ರಿ ಬದಲಾವಣೆಯ ಸುದ್ದಿ ಹರಿದಾಡಿದ ಬೆನ್ನಲ್ಲೇ ಮತ್ತಷ್ಟು ಚುರುಕಾಗಿ ಕೆಲಸ ಮಾಡಲು ಬೊಮ್ಮಾಯಿ ಮುಂದಾಗಿದ್ದಾರೆ. ಮಂಡ್ಯ ಭಾಗದಲ್ಲಿ ಸರ್ಕಾರದ ಕಾರ್ಯಕ್ರಮಗಳ ಮೂಲಕ ಮತದಾರರ ಸೆಳೆಯಲು ಸಜ್ಜಾಗಿರುವ ಅವರು, ನಾಳೆ ಮೈಸೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಪ್ರವಾಸ ನಡೆಸಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಎರಡು ವಾರಗಳ ಹಿಂದೆಯಷ್ಟೇ ಕೆಆರ್ ಪೇಟೆ ತಾಲ್ಲೂಕಿನಲ್ಲಿ ಪ್ರವಾಸ ಮಾಡಿದ್ದರು. ಇದೀಗ ಮತ್ತೆ ಮಂಡ್ಯದಲ್ಲಿ ಪ್ರವಾಸ ಮಾಡುವ ಮೂಲಕ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಎಂದರೆ ಬಿಜೆಪಿಗೆ ಗೊಂಬೆಯಾಟ: ಕಾಂಗ್ರೆಸ್ ಟ್ವೀಟ್
‘ಬಿಜೆಪಿ ಹೈಕಮಾಂಡ್ (BJP High Command) ಪಾಲಿಗೆ ಕರ್ನಾಟಕದ ಮುಖ್ಯಮಂತ್ರಿಗಳೆಂದರೆ ಆಟಿಕೆ ಮುಖ್ಯಮಂತ್ರಿಗಳಿದ್ದಂತೆ (#PuppetCM). ಅಡಿಸಿಯೂ ನೋಡುತ್ತಾರೆ, ಬೀಳಿಸಿಯೂ ನೋಡುತ್ತಾರೆ’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿತ್ತು. ಬಿ.ಎಸ್.ಯಡಿಯೂರಪ್ಪ (BS Yediyurappa) ಅವರಂಥ ನಾಯಕರನ್ನೇ ಹೇಳದೆ ಕೇಳದೆ ಮನೆಗೆ ಕಳಿಸಿರುವಾಗ ‘ಬೊಂಬೆ ಬೊಮ್ಮಾಯಿ’ (Basavaraj Bommai) ಯಾವ ಲೆಕ್ಕ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ‘ಸಂತೋಷ ಕೂಟ’ಕ್ಕೆ ಸಂತೋಷಪಡಿಸುವ ಬೊಮ್ಮಾಯಿಯವರ ಪ್ರಯತ್ನ ವಿಫಲವಾಗಿದೆ. ಹಗರಣ ಮತ್ತು ವೈಫಲ್ಯಗಳ ಕೊಡ ತುಂಬಿದೆ ಎಂದು ಕರ್ನಾಟಕದ ಬಿಜೆಪಿ ವಿದ್ಯಮಾನಗಳ ಮೇಲೆ ಇರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಛಾಯೆಯ ಬಗ್ಗೆಯೂ ಲೇವಡಿ ಮಾಡಿದೆ.
ಈ ಹಿಂದೆ ಯಡಿಯೂರಪ್ಪ ಅವರನ್ನು ಸರ್ಕಾರದ ಎರಡನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದ ಸಂದರ್ಭದಲ್ಲೇ ಕಣ್ಣೀರು ಹಾಕಿಸಿ ಕಳಿಸಲಾಗಿತ್ತು. ಈಗ ಬೊಮ್ಮಾಯಿ ಅವರನ್ನು 1ನೇ ವಾರ್ಷಿಕೋತ್ಸವದ ಹೊತ್ತಲ್ಲಿ ಕೆಳಗಿಳಿಸಲು ವೇದಿಕೆ ಸಜ್ಜಾಗುತ್ತಿದೆ. 1 ವರ್ಷದಲ್ಲಿ 12 ಬಾರಿ ದೆಹಲಿ ಪ್ರವಾಸ ಕೈಗೊಂಡರೂ ಕೈಗೊಂಬೆ ಮುಖ್ಯಮಂತ್ರಿಗೆ ಸಂಪುಟ ಸಂಕಟ ಬಗೆಹರಿಸಲು ಸಾಧ್ಯವಾಗಿಲ್ಲ ಎಂದು ಕಾಂಗ್ರೆಸ್ ಪಕ್ಷವು ಟ್ವೀಟ್ ಮೂಲಕವೇ ಚಾಟಿ ಬೀಸಿತ್ತು.
Published On - 2:43 pm, Wed, 10 August 22