ಬರಿಗೈಯಲ್ಲಿ ರಾಜ್ಯಕ್ಕೆ ಬಂದ ಅಮಿತ್ ಶಾ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

| Updated By: Ganapathi Sharma

Updated on: Feb 11, 2024 | 4:11 PM

Siddaramaiah vs Amit Shah: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕರ್ನಾಟಕ ಭೇಟಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ. ಭಾನುವಾರ ಮಾಧ್ಯಾಹ್ನವಷ್ಟೇ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದ ಅವರು, ಇದೀಗ ಬರ ಪರಿಹಾರ ವಿಚಾರವಾಗಿ ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬರಿಗೈಯಲ್ಲಿ ರಾಜ್ಯಕ್ಕೆ ಬಂದ ಅಮಿತ್ ಶಾ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಸಿದ್ದರಾಮಯ್ಯ
Follow us on

ಬೆಂಗಳೂರು, ಫೆಬ್ರವರಿ 11: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಬರಿಗೈಯಲ್ಲಿ ರಾಜ್ಯಕ್ಕೆ ಬಂದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದರು. ಅಮಿತ್ ಶಾ ರಾಜ್ಯ ಪ್ರವಾಸ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಇವತ್ತಿನವರೆಗೂ ಬರ ಪರಿಹಾರ ನೀಡುವ ಬಗ್ಗೆ ಅಮಿತ್ ಶಾ ಒಂದೇ ಒಂದು ಸಭೆ ಮಾಡಿಲ್ಲ. ರೈತರು, ಬಡವರ ಬಗ್ಗೆ ಮಾತಾಡುವ ನೈತಿಕತೆ ಬಿಜೆಪಿಯವರಿಗಿಲ್ಲ. ರೈತರು ಕಷ್ಟ ಪಡುತ್ತಿದ್ದಾರೆ, ಕುಡಿಯುವ ನೀರಿಗೆ ಸಮಸ್ಯೆ ಇದೆ. ಎಂನರೇಗಾದಡಿ ಕೆಲಸದ ದಿನಗಳನ್ನು 150ಕ್ಕೆ ಹೆಚ್ಚಿಸಬೇಕು. ಈ ಬಗ್ಗೆ ಪತ್ರ ಕೊಟ್ಟಿದ್ದೇವೆ. ಆದರೆ, ಈವರೆಗೆ ಅನುಮತಿ ಕೊಟ್ಟಿಲ್ಲ ಎಂದು ಹೇಳಿದರು.

ಸಿಎಂ ತವರು ಜಿಲ್ಲೆಯಿಂದ ಅಮಿತ್ ಶಾ ಚುನಾವಣಾ ರಣಕಹಳೆ ಮೊಳಗಿಸುತ್ತಿದ್ದಾರೆ ಎಂಬ ಮಾಧ್ಯಮ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಣ ಕಹಳೆ ಅಂದರೇನು? ನೀವು ಬಳಸುವ ಪದ ಇದೆಯಲ್ಲ ಕಹಳೆ, ಏನದು? ನಾವು ಈ ಸಲ ಮೈಸೂರು, ಚಾಮರಾಜನಗರ ಎರಡೂ ಕಡೆಯೂ ಗೆಲ್ಲುತ್ತೇವೆ ಎಂದು ಹೇಳಿದರು.

ತೆರಿಗೆ ಹಂಚಿಕೆ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ ಬೆಂಬಲ ನೀಡಿರುವುದಕ್ಕೆ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ದೇವೇಗೌಡರು ಈಗ ಬಿಜೆಪಿಯವರ ಜತೆ ಸೇರಿಕೊಂಡಿದ್ದಾರೆ. ಅದಕ್ಕೆ ನಿರ್ಮಲಾ ಸೀತಾರಾಮನ್ ಹೇಳಿಕೆ ಸರಿ ಎಂದಿದ್ದಾರೆ. ಮುಂದಿನ ಜನ್ಮ ಎಂಬುದು ಇದ್ದರೆ ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದು ಅವರು ಹೇಳಿದ್ದರು. ಅಂಥ ದೇವೇಗೌಡರು ಈಗ ಏನು ಹೇಳುತ್ತಾರೆ? ಅವರು ಯಜಮಾನರು, ಮಾಜಿ ಪ್ರಧಾನಿ. ಅವರು ಹೀಗೆಲ್ಲ ಹೇಳಬಾರದು. ಮೈತ್ರಿಯಾಗಿದೆ ಎಂದು ಬಿಜೆಪಿಯವರ ಅನ್ಯಾಯವನ್ನೆಲ್ಲಾ ಸರಿ ಎನ್ನಬಾರದು ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: ಗ್ಯಾರಂಟಿಯಿಂದ ಬೊಕ್ಕಸ ಖಾಲಿ ಹೇಳಿಕೆ: ಅಮಿತ್ ಶಾ ಬಹಿರಂಗ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಸವಾಲು

ಇದಕ್ಕೂ ಮುನ್ನ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದ ಸಿದ್ದರಾಮಯ್ಯ, ಕೇಂದ್ರ ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂಬ ಅಮಿತ್ ಶಾ ಹೇಳಿಕೆ ವಿರುದ್ಧ ಕಿಡಿ ಕಾರಿದ್ದಲ್ಲದೆ, ಈ ವಿಚಾರವಾಗಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದರು.

ಈ ಮಧ್ಯೆ, ಮೈಸೂರು ಪ್ರವಾಸದಲ್ಲಿರುವ ಅಮಿತ್ ಶಾ ಭಾನುವಾರ ಮಧ್ಯಾಹ್ನ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಜತೆಗೆ, ಚಾಮುಂಡಿ ಬೆಟ್ಟಕ್ಕೂ ಭೇಟಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ