ಪ್ರಧಾನಿ ಅಭ್ಯರ್ಥಿಯಾಗಿ ಖರ್ಗೆ ಹೆಸರು ಪ್ರಸ್ತಾಪ: ಅಭಿಪ್ರಾಯ ತಿಳಿಸಲು ಸಿದ್ದರಾಮಯ್ಯ ಹಿಂದೇಟು
ಇಂಡಿಯಾ ಮೈತ್ರಿಕೂಟ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿಸುವಂತೆ ಮಮತಾ ಬ್ಯಾನರ್ಜಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದಕ್ಕೆ ಅರವಿಂದ್ ಕೇಜ್ರಿವಾಲ್ ಬೆಂಬಲಿಸಿದ್ದಾರೆ. ಇನ್ನು ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಭಿಪ್ರಾಯ ತಿಳಿಸಲು ಹಿಂದೇಟು ಹಾಕಿರುವ ಪ್ರಸಂಗ ನಡೆದಿದೆ.
ಮೈಸೂರು, (ಡಿಸೆಂಬರ್ 22): ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎಸಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು (Mallikarjun Kharge) ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಬೇಕೆನ್ನುವ ಕೂಗು ಇಂಡಿಯಾ ಮೈತ್ರಿಕೂಟದಲ್ಲಿ ಕೇಳಿಬಂದಿದೆ. ಇತ್ತೀಚೆಗೆ ನಡೆದ ಇಂಡಿಯಾ ಮೈತ್ರಿಕೂಟ ಸಭೆಯಲ್ಲಿ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿಸುವಂತೆ ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ರೆ, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ತಮ್ಮ ಅಭಿಪ್ರಾಯ ತಿಳಿಸಲು ಹಿಂದೇಟು ಹಾಕಿದ್ದಾರೆ.
ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಖರ್ಗೆ ಹೆಸರು ಪ್ರಸ್ತಾಪ ವಿಚಾರದ ಬಗ್ಗೆ ಮೈಸೂರಿನಲ್ಲಿಂದ ಸುದ್ದಿಗಾರರು ಸಿದ್ದರಾಮಯ್ಯನವರನ್ನು ಅಭಿಪ್ರಾಯ ಕೇಳಿದ್ದಾರೆ. ಆದ್ರೆ, ಇದಕ್ಕೆ ಸಿದ್ದರಾಮಯ್ಯ ಅವರು ತಮ್ಮ ಅಭಿಪ್ರಾಯ ತಿಳಿಸಲು ಹಿಂದೇಟು ಹಾಕಿದ್ದು, ನನ್ನ ಅಭಿಪ್ರಾಯ ಏನು ಇಲ್ಲ. ಮಮತಾ ಬ್ಯಾನರ್ಜಿ ಅವರು ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಇಂಡಿಯಾ ಒಕ್ಕೂಟ ಏನು ತೀರ್ಮಾನ ಮಾಡುತ್ತೆ ನೋಡೋಣ ಎಂದು ಹೇಳಿ ಹೋದರು.
ಇದನ್ನೂ ಓದಿ: ಇಂಡಿಯಾ ಬಣದ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರು ಸೂಚಿಸಿದ ಮಮತಾ ಬ್ಯಾನರ್ಜಿ
ಸಭೆಯಲ್ಲಿ ಖರ್ಗೆ ಹೆಸರು ಪ್ರಸ್ತಾಪಿಸಿದ್ದ ಮಮತಾ
ಈವರೆಗೂ ಇಂಡಿಯಾ ಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ವಿಷಯ ಬಂದಾಗಲೆಲ್ಲಾ ಜಾರಿಕೆಯ ಉತ್ತರ ನೀಡುತ್ತಿದ್ದ 26 ಪಕ್ಷಗಳ ನಾಯಕರು ಇದೀಗ ಇದ್ದಕ್ಕಿದ್ದಂತೆ ರಣತಂತ್ರ ಬದಲಿಸಿದ್ದಾರೆ. ಮಮತಾ ಬ್ಯಾನರ್ಜಿ, ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿ ಹುದ್ದೆಗೆ ಪ್ರಸ್ತಾಪಿಸಿದ್ದು, ಇದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬೆಂಬಲಿಸಿದ್ದಾರೆ. ಆದ್ರೆ, ಇದಕ್ಕೆ ಪರೋಕ್ಷ ಅಸಮಾಧಾನ ಎಂಬಂತೆ ಬಿಹಾರದ ಹಾಲಿ ಮುಖ್ಯಮಂತ್ರಿ ನಿತೀಶ್‍ಕುಮಾರ್, ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಹೊರ ನಡೆದಿರುವುದು ನಾಟಕೀಯ ಬೆಳವಣಿಗೆಗಳಾಗಿವೆ.
ಅತ್ತ ಪ್ರಧಾನಿ ಅಭ್ಯರ್ಥಿಗೆ ಖರ್ಗೆ ಹೆಸರು ಕೇಳಿಬರುತ್ತಿದ್ದಂತೆಯೇ ಇತ್ತ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಓರ್ವ ಕನ್ನಡಿಗ ಅದರಲ್ಲೂ ದಲಿತ ನಾಯಕ ಪ್ರಧಾನಿಯಾಗುತ್ತಾರೆ ಎನ್ನುವ ಚರ್ಚೆಗಳು ಶುರುವಾಗಿವೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:10 pm, Fri, 22 December 23