ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ವಿರುದ್ಧ ಅಖಾಡಕ್ಕಿಳಿಯುವ ಬಗ್ಗೆ ವಿನಯ್ ಕುಲಕರ್ಣಿ ಹೇಳಿದ್ದಿಷ್ಟು…
ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ವಿರುದ್ಧ ಅಖಾಡಕ್ಕಿಳಿಯಲು ವಿನಯ್ ಕುಲಕರ್ಣಿಗೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಈ ಬಗ್ಗೆ ವಿನಯ್ ಕುಲಕರ್ಣಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಅದು ಇಂತಿದೆ.
ಬೆಳಗಾವಿ: ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ವಿರುದ್ಧ ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಮಾಜಿ ಸಿಚಿವ ವಿನಯ್ ಕುಲಕರ್ಣಿಗೆ (Vinay kulkarni) ಕಾಂಗ್ರೆಸ್ ಹೈಕಮಾಂಡ್ ಅನುಮತಿ ನೀಡಿದೆ. ಪಂಚಮಸಾಲಿ ಮತಗಳು ಅಧಿಕವಾಗಿದ್ದರಿಂದ ವಿನಯ್ ಕುಲಕರ್ಣಿ ಮೂಲಕ ಸಿಎಂ ಬೊಮ್ಮಾಯಿ ಹಣೆಯಲು ಕಾಂಗ್ರೆಸ್ ಮುಂದಾಗಿದೆ. ಇನ್ನು ಈ ಬಗ್ಗೆ ಸ್ವತಃ ವಿನಯ್ ಕುಲಕರ್ಣಿ ಮಾಧ್ಯಮಗಳಿಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ನನ್ನ ನಿರ್ಧಾರವಲ್ಲ. ಸಿಎಂ ವಿರುದ್ಧ ಸ್ಪರ್ಧೆ ಮಾಡಬೇಕೆಂಬುದು ಹೈಕಮಾಂಡ್ ನಿರ್ಧಾರ ಎಂದು ಸ್ಪಷ್ಟಪಡಿಸಿದರು.
ಇಂದು(ಮಾರ್ಚ್ 20) ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿನಯ್ ಕುಲಕರ್ಣಿ, ಧಾರವಾಡಕ್ಕೆ ಹೋಗುವುದಕ್ಕೆ ನನಗೆ ಕೋರ್ಟ್ ನಿರ್ಬಂಧ ಇದೆ. ನಾನು ಶಿಗ್ಗಾಂವಿಯಲ್ಲಿ ಸ್ಪರ್ಧಿಸುವ ಬಗ್ಗೆ ಪಕ್ಷ ತೀರ್ಮಾನಿಸಲಿದೆ. ಶಿಗ್ಗಾಂವಿ ಒಂದೇ ಅಲ್ಲ, ನನಗೆ ಇನ್ನೂ ನಾಲ್ಕೈದು ಕ್ಷೇತ್ರಗಳಿವೆ. ದೇಶದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆಯಾಗಿರುವುದಕ್ಕೆ ನಾನು ಸಾಕ್ಷಿ. ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ.
ನಾನು ಶಿಗ್ಗಾಂವಿ ಹೋಗುವುದು ನನ್ನ ತೀರ್ಮಾನ ಅಲ್ಲ. ಇದು ಹೈಕಮಾಂಡ್ ತೀರ್ಮಾನ. ಯಾಕಂದ್ರೆ ನಾನು ಧಾರವಾಡಕ್ಕೆ ಹೋಗೋಕೆ ಆಗುತ್ತಿಲ್ಲ. ನಾನು ಟೆರರಿಸ್ಟ್ ಅಲ್ಲ. ನಾನು ಕಳೆದ 20 ವರ್ಷದಿಂದ ರಾಜಕಾರಣದಲ್ಲಿ ಇದ್ದೇನೆ. ನಾಲ್ಕೈದು ಕ್ಷೇತ್ರದಲ್ಲಿ ನಿಂತರೂ ನಾನು ಗೆಲ್ಲುತ್ತೇನೆ. ಪಕ್ಷ ನನಗೆ ನಿಲ್ಲಬೇಡ ಅಂದ್ರೆ ನಾನು ತ್ಯಾಗ ಮಾಡುತ್ತೇನೆ. ನೋಡುತ್ತೀರಿ ಇನ್ನೂ ನನ್ನ ವಿರುದ್ದ ಷಡ್ಯಂತ್ರ ಆರಂಭವಾಗತ್ತೆ ಎಂದು ಹೇಳಿದರು.
ಇನ್ನು ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ವಿನಯ್ ಕುಲಕರ್ಣಿ, ಸಿದ್ದರಾಮಯ್ಯ ಲೆವೆಲ್ಗೆ ರಾಜ್ಯದಲ್ಲಿ ಯಾರೂ ಸರಿಸಾಟಿ ಇಲ್ಲ. ಸಿದ್ದರಾಮಯ್ಯರನ್ನು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತ ಮಾಡಬೇಡಿ. ನಾವು ಕೂಡ ಸಿದ್ದರಾಮಯ್ಯರನ್ನು ಕ್ಷೇತ್ರಕ್ಕೆ ಆಹ್ವಾನಿಸಿದ್ದೇವೆ. ಯಾವ ಸಿಎಂ ನೀಡದ ಕೊಡುಗೆಯನ್ನು ಸಿದ್ದರಾಮಯ್ಯ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಕೊಟ್ಟ ಕೊಡುಗೆ ಯಾರಿಂದಲೂ ಕೊಡಲು ಸಾಧ್ಯವಿಲ್ಲ. ಈ ಹಿಂದೆ ಯಾರೂ ಕೊಟ್ಟಿಲ್ಲ ಮುಂದೆ ಯಾರೂ ಕೊಡುವುದಿಲ್ಲ ಎಂದು -ವಿನಯ್ ಕುಲಕರ್ಣಿ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದರು.
ಸಿಎಂ ಕ್ಷೇತ್ರದಲ್ಲಿ ಶುರುವಾಯ್ತು ಲೆಕ್ಕಾಚಾರ
ಕ್ಷೇತ್ರದಲ್ಲಿ ಪಂಚಮಸಾಲಿ ಹಾಗೂ ಮುಸ್ಲಿಂ ಮತಗಳು ನಿರ್ಣಾಯಕವಾಗಿವೆ. ಪಂಚಮಸಾಲಿ ಸಮಾಜದ 65 ಸಾವಿರ ಮತಗಳಿದ್ದರೆ, 50 ಸಾವಿರ ಮುಸ್ಲಿಂ ಮತಗಳಿವೆ. ಎಸ್ಸಿ 20 ಸಾವಿರ, ಎಸ್ಟಿ17 ಸಾವಿರ, ಕುರುಬ 20 ಸಾವಿರ ಮತಗಳಿವೆ. 2ಎ ಮೀಸಲಾತಿಗಾಗಿ ಪಂಚಮಸಾಲಿ ಹೋರಾಟ ಈ ಚುನಾವಣೆ ಮೇಲೆ ಪರಿಣಾಮ ಬೀರುವ ಆತಂಕದಲ್ಲಿ ಬಿಜೆಪಿ ನಾಯಕರು ಇದ್ದಾರೆ. ಇನ್ನು ವಿನಯ್ ಕುಲಕರ್ಣಿ ಶಿಗ್ಗಾಂವಿಯಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿ ಕೇಳುತ್ತಿದ್ದಂತೆಯೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಪ್ತರು ಲಾಭ-ನಷ್ಟದ ಲೆಕ್ಕಚಾರಗಳನ್ನು ಹಾಕುತ್ತಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ