‘ಮಂತ್ರಿಪಟ್ಟ ಕಳೆದುಕೊಳ್ಳಲು ರೆಡಿಯಾಗಿ’: ಸಚಿವರ ಜತೆ ಹೈಕಮಾಂಡ್​​​ ಸಭೆಯ ಇನ್​ಸೈಡ್​ ಡಿಟೇಲ್ಸ್​ ಇಲ್ಲಿದೆ

| Updated By: ರಮೇಶ್ ಬಿ. ಜವಳಗೇರಾ

Updated on: Aug 04, 2024 | 7:15 PM

ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣದ ಗದ್ದಲ... ಪ್ರಾಸಿಕ್ಯೂಷನ್ ಭೀತಿ.. ಸರಣಿ ಹಗರಣಗಳ ಸರಮಾಲೆಯಲ್ಲಿ ಸಿಲುಕಿರುವ ಸರ್ಕಾರಕ್ಕೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ. ಹೀಗಾಗಿ ಇಂದು (ಆಗಸ್ಟ್ 04) ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದ ಹೈಕಮಾಂಡ್ ನಾಯಕರು, ಸಚಿವರಿಗೆ ಬೂಸ್ಟ್ ನೀಡುವ ಜೊತೆಗೆ ಫುಲ್​ ಕ್ಲಾಸ್ ತೆಗೆದುಕೊಂಡಿದ್ದಾರೆ. ಜೊತೆಗೆ ಅದೊಂದು ಎಚ್ಚರಿಕೆ ಸಂದೇಶವನ್ನೂ ನೀಡಿದ್ದಾರೆ. ಇನ್ನು ಸಚಿವರ ಜೊತೆ ಹೈಕಮಾಂಡ್​ ಸಭೆಯಲ್ಲಿ ಏನೆಲ್ಲಾ ಆಯ್ತು ಎನ್ನುವ ವಿವರ ಇಲ್ಲಿದೆ.

‘ಮಂತ್ರಿಪಟ್ಟ ಕಳೆದುಕೊಳ್ಳಲು ರೆಡಿಯಾಗಿ’: ಸಚಿವರ ಜತೆ ಹೈಕಮಾಂಡ್​​​ ಸಭೆಯ ಇನ್​ಸೈಡ್​ ಡಿಟೇಲ್ಸ್​ ಇಲ್ಲಿದೆ
Follow us on

ಬೆಂಗಳೂರು, (ಆಗಸ್ಟ್​ 04): ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದ ಗದ್ದುಗೆ ಏರಿ ಒಂದು ವರ್ಷ ನಾಲ್ಕು ತಿಂಗಳು ಕಳೆದಿದೆ. ಒಂದೇ ವರ್ಷದಲ್ಲಿ ಹಲವು ಹಗರಣಗಳನ್ನ ಮೈಮೇಲೆ ಎಳೆದುಕೊಂಡಿದೆ. ಮುಡಾ, ವಾಲ್ಮೀಕಿ, ಸಚಿವರ ಕಾರ್ಯನಿರ್ವಹಣೆ, ಶಾಸಕರಿಂದ ದೂರು. ಹೀಗೆ ಎಲ್ಲಾ ಒಂದು ವಿಚಾರಗಳು ಹೈಕಮಾಂಡ್ ಕಿವಿಗೂ ಬಿಡಿದಿದೆ. ಹೀಗಾಗಿ ಇಂದು (ಆಗಸ್ಟ್​ 04) ಬೆಂಗಳೂರಿಗೆ ಆಗಮಿಸಿರುವ ಎಐಸಿಸಿ ನಾಯಕರಾದ ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಅವರು ಸಚಿವರೊಂದಿಗೆ ಮಹತ್ವದ ಸಭೆ ನಡೆಸಿದರು. ಈ ವೇಳೆ ಸಚಿವರ ಕಾರ್ಯವೈಖರಿಗೆ ಅಸಮಾಧಾನ ಹೊರಹಾಕಿರುವ ಹೈಕಮಾಂಡ್ ನಾಯಕರು, ಸಚಿವರಿಗೆ ಫುಲ್ ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ದಸರಾ ವೇಳೆಗೆ ಸಂಪುಟ ಪುನಾರಚನೆ ಮಾಡುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಸಚಿವರ ಸಭೆ ನಡೆಸಿದ ಎಐಸಿಸಿ ನಾಯಕರು, ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಕಾರ್ಯವೈಖರಿ ತವರು ಮತ್ತು ಉಸ್ತುವಾರಿ ಜಿಲ್ಲೆಗಷ್ಟೇ ಸೀಮಿತವಾಗಿದೆ. ರಾಜ್ಯ ಪ್ರವಾಸ ಮಾಡಬೇಕು. ಇಲಾಖೆಯಲ್ಲಿ ಸುಧಾರಣೆ ತರಬೇಕು. ನೀವು ಸರಿಯಾಗಿ ಕೆಲಸ ಮಾಡಿದ್ದರೆ ಲೋಕಸಭೆಯಲ್ಲಿ ಕನಿಷ್ಠ 15 ಸ್ಥಾನ ಗೆಲ್ಲುತ್ತಿದ್ದೆವು ಎಂದಿದ್ದಾರೆ. ಹಾಗೆಯೇ ನೀವು ಕೆಲಸ ಮಾಡದಿದ್ದರೆ, ದಸರಾ ವೇಳೆಗೆ ಸಂಪುಟ ಪುನಾರಚನೆ ಮಾಡಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ಸಂದೇಶವನ್ನೂ ಕೊಟ್ಟಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಮಹತ್ವದ ಬೆಳವಣಿಗೆ: ಉಸ್ತುವಾರಿ ಬೆಂಗಳೂರಿಗೆ ದೌಡು, ಸಚಿವ ಸಂಪುಟಕ್ಕೆ ಸರ್ಜರಿ?

2 ತಿಂಗಳಲ್ಲಿ ನಿಮ್ಮ ಕಾರ್ಯವೈಖರಿ ಸರಿಪಡಿಸಿಕೊಳ್ಳಿ

ರಾಜ್ಯ ಪ್ರವಾಸ ಮಾಡುವುದರ ಜೊತೆಗೆ ಬಿಜೆಪಿ ಅವಧಿಯ ಹಗರಣಗಳ ತನಿಖೆ ಚುರುಕುಗೊಳಿಸಿ ಅಂತಾನೂ ಹೈಕಮಾಂಡ್ ನಾಯಕರು ಹೇಳಿದ್ದಾರೆ. ಅಲ್ಲದೇ, ಸಚಿವರ ಸಭೆಯಲ್ಲಿ ರಾಜ್ಯಪಾಲರ ನೋಟೀಸ್ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ರಾಜ್ಯಪಾಲರ ವಿರುದ್ದ ಕಾನೂನು ಹೋರಾಟ ಮಾಡಿ, ನೀವೆಲ್ಲರೂ ಸಿದ್ದರಾಮಯ್ಯ ಬೆನ್ನಿಗೆ ನಿಲ್ಲಬೇಕು. ಜೆಡಿಎಸ್ ಬಿಜೆಪಿಗೆ ತಿರುಗೇಟು ಕೊಡುವ ಕೆಲಸ ಮಾಡಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ. ನಿಮ್ಮ ಜೊತೆ ಹೈಕಮಾಂಡ್ ನಿಲ್ಲಲಿದೆ ಎಂದು ಅಭಯ ನೀಡಿರುವ ಹೈಕಮಾಂಡ್ ನಾಯಕರು, 2 ತಿಂಗಳಲ್ಲಿ ನಿಮ್ಮ ಕಾರ್ಯವೈಖರಿ ಸರಿಪಡಿಸಿಕೊಳ್ಳಿ, ಇಲ್ಲವಾದರೆ ಖಾತೆ ಕಳೆದುಕೊಳ್ಳಲು ರೆಡಿಯಾಗಿ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್‌ನಲ್ಲಿ ಅಸಮಧಾನ ಇದೆ ಎನ್ನುವ ಚರ್ಚೆಗೆ ಬ್ರೇಕ್ ಹಾಕಲು ಹೈಕಮಾಂಡ್ ಮುಂದಾಗಿದೆ.

ಬಿಜೆಪಿ ಮಾಡುತ್ತಿರುವ ಒಂದೊಂದು ಆರೋಪಕ್ಕೂ ತಿರುಗೇಟು ನೀಡಬೇಕೆಂದು ಕಾಂಗ್ರೆಸ್ ಹೈಕಮಾಂಡ್, ಸಚಿವರ ಪಡೆಯನ್ನ ಸನ್ನದ್ಧಗೊಳಿಸಿದೆ. ಬಿಜೆಪಿ ವಿರುದ್ಧ ಹೋರಾಡದಿದ್ರೆ, ಸರಿಯಾಗಿ ಕೆಲಸ ಮಾಡದಿದ್ರೆ, ಮಂತ್ರಿ ಪಟ್ಟಕ್ಕೆ ಕುತ್ತು ಬರುತ್ತೆ ಅಂತಾನೂ ಎಚ್ಚರಿಕೆ ಕೊಟ್ಟಿದೆ.