ಮನೆಯಿಂದ ಕರೆದುಕೊಂಡು ಬಂದು ಕಾರ್ಯಕ್ರಮದ ಬಳಿಕ ಕೈಬಿಟ್ರಾ ಸಿದ್ದರಾಮಯ್ಯ? ಮುನಿಯಪ್ಪ ಏಕಾಂಗಿಯಾಗಿ ಹೋಗುತ್ತಿರುವ ಫೋಟೋ ವೈರಲ್
ಕೋಲಾರದಲ್ಲಿ ಸಿದ್ದರಾಮಯ್ಯನವರ ಕಾರ್ಯಕ್ರಮ ಮುಗಿದ ಬಳಿಕ ಕಾಂಗ್ರೆಸ್ ಹಿರಿಯ ನಾಯಕ ಕೆ.ಹೆಚ್ ಮುನಿಯಪ್ಪ ಅವರು ಏಕಾಂಗಿಯಾಗಿ ಹೋಗುತ್ತಿರುವ ಫೋಟೋಗಳು ವೈರಲ್ ಆಗಿವೆ. ಅಲ್ಲದೇ ಕಾರ್ಯಕ್ರಮಕ್ಕೆ ಮನೆಯಿಂದ ಕರೆದುಕೊಂಡು ಬಂದು ಬಳಿಕ ಅರ್ಧಕ್ಕೆ ಕೈಬಿಟ್ರಾ ಸಿದ್ದರಾಮಯ್ಯ? ಎನ್ನುವ ಮಾತುಗಳು ಕೇಳಿಬಂದಿವೆ.
ಕೋಲಾರ: ಕಾಂಗ್ರೆಸ್ ಹಿರಿಯ ಮುಖಂಡ ಕೆ.ಹೆಚ್.ಮುನಿಯಪ್ಪ ಅವರ ಮನೆವರೆಗೂ ಹೋಗಿ ಕೆರೆದುಕೊಂಡು ಬಂದ ಸಿದ್ದರಾಮಯ್ಯ, ತಮ್ಮ ಕಾರ್ಯಕ್ರಮ ಮುಗಿದ ಮೇಲೆ ತಮ್ಮ ಪಾಡಿಗೆ ತಾವು ಹೋಗಿದ್ದಾರೆ. ಈ ಮೂಲಕ ಕೆ.ಹೆಚ್.ಮುನಿಯಪ್ಪರನ್ನು ಏಕಾಂಗಿ ಮಾಡಿಬಿಟ್ಟರಾ ಎನ್ನುವ ಪ್ರಶ್ನೆ ಜೊತೆಗೆ ಬೇಸರ ಅವರ ಆಪ್ತವಲಯದಲ್ಲಿ ಹಾಗೂ ಅವರ ಬೆಂಬಲಿಗರಲ್ಲಿ ಮೂಡಿಸಿದೆ. ಅದಕ್ಕೆ ಸಾಕ್ಷಿಯಾಗಿ ಎಂಬಂತೆ ಕೋಲಾರದಲ್ಲಿ ಸಿದ್ದರಾಮಯ್ಯನವರ ಕಾರ್ಯಕ್ರಮ ಮುಗಿದ ನಂತರ ಮುನಿಯಪ್ಪರ ಏಕಾಂಗಿಯಾಗಿ ಖಾಲಿ ಕುರ್ಚಿಗಳ ಮಧ್ಯದಲ್ಲಿ ನಡೆದು ಹೋಗುತ್ತಿರುವ ಫೋಟೋಗಳು ವೈರಲ್ ಆಗಿವೆ.
ಇದನ್ನೂ ಓದಿ: Siddaramaiah: ನಾನು ಕೋಲಾರದಿಂದ ಸ್ಪರ್ಧಿಸಲು ಸಿದ್ಧ, ಆದರೆ ಹೈಕಮಾಂಡ್ ತೀರ್ಮಾನಿಸಬೇಕು: ಸಿದ್ಧರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ, ಇದಕ್ಕೂ ಮೊದಲು ಸಿದ್ದರಾಮಯ್ಯ ಕೋಲಾರ ಜಿಲ್ಲೆಯಲ್ಲಿಲ್ಲಿ ಭಿನ್ನಮತ ಶಮನ ಮಾಡಲು ಯತ್ನಿಸಿದ್ದರು. ಸಿದ್ದರಾಮಯ್ಯ ನಿನ್ನೆ (ಜನವರಿ-9) ರಂದು ಕೋಲಾರದಲ್ಲಿ ಕಾರ್ಯಕರ್ತರ ಸಮಾವೇಶಕ್ಕೂ ಬರುವ ಮೊದಲು ಬೆಂಗಳೂರಿನ ಕೆ.ಹೆಚ್. ಮುನಿಯಪ್ಪ ಅವರ ಸಂಜಯ್ ನಗರ ನಿವಾಸಕ್ಕೆ ತೆರಳಿ ಅಲ್ಲಿಂದ ಕೆ.ಹೆಚ್ ಮುನಿಯಪ್ಪ ಅವರನ್ನು ತಮ್ಮದೇ ಕಾರ್ನಲ್ಲಿ ಕೂರಿಸಿಕೊಂಡು ಬಂದಿದ್ದರು. ತಾವು ಕಾರ್ಯಕರ್ತರ ಸಮಾವೇಶದಲ್ಲಿ ಕೋಲಾರ ಅಭ್ಯರ್ಥಿಯಾಗುತ್ತೇನೆ ಎನ್ನುವುದನ್ನ ಘೋಷಣೆ ಮಾಡುವ ವೇಳೆ ಎರಡೂ ಗುಂಪಿನ ಮುಖಂಡರು ಇರಬೇಕು, ಒಂದು ವೇಳೆ ಒಂದು ಗುಂಪಿನ ನಾಯಕರು ಇಲ್ಲವಾದರೂ ಅದು ಬೇರೆಯದೇ ಸಂದೇಶ ಹೋಗುತ್ತದೆ ಎನ್ನುವ ಕಾರಣಕ್ಕೆ ತಾವೇ ಖುದ್ದು ಸಿದ್ದರಾಮಯ್ಯ ಅವರೇ ಕರೆ ತಂದಿದ್ದರು.
ಕಾರ್ಯಕ್ರಮ ಮುಗಿದ ಮೇಲೆ ಒಂಟಿಯಾಗಿಸಿದ್ದೇಕೆ?
ಇನ್ನು ಸಿದ್ದರಾಮಯ್ಯ ಕೆ.ಹೆಚ್ ಮುನಿಯಪ್ಪ ಅವರನ್ನು ಅವರ ನಿವಾಸದಿಂದ ತಮ್ಮದೇ ಕಾರಿನಲ್ಲಿ ಕೂರಿಸಿಕೊಂಡು ಕೋಲಾರಕ್ಕೆ ಕರೆತಂದರು, ಕೋಲಾರದ ಗಡಿಯಲ್ಲಿ ಅದ್ದೂರಿ ಸ್ವಾಗತ ಕೋರಿ ನಂತರ ಕೋಲಾರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಹೋದ ಸಿದ್ದರಾಮಯ್ಯ, ಅವರ ಜೊತೆಗೆ ಕೆಹೆಚ್ ಮುನಿಯಪ್ಪರನ್ನು ಕರೆದುಕೊಂಡೇ ಹೋಗಿದ್ದರು. ಇದಾದ ನಂತರ ವೇದಿಕೆ ಕಾರ್ಯಕ್ರಮದಲ್ಲೂ ಕೂಡಾ ಸಿದ್ದರಾಮಯ್ಯ ಅವರ ಪಕ್ಕದಲ್ಲೇ ಮುನಿಯಪ್ಪರನ್ನು ಕೂರಿಸಿಕೊಂಡಿದ್ದರು. ಈ ವೇಳೆ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡಿದ್ದೇ ಆದರೆ ನಾವು ಹೃದಯಪೂರ್ವಕವಾಗಿ ಸ್ವಾಗತ ಮಾಡುತ್ತೇವೆ ಎಂದು ಕೆಹೆಚ್ ಮುನಿಯಪ್ಪ ಭಾಷಣವನ್ನೂ ಮಾಡಿದ್ದರು.
ಅಂದುಕೊಂಡಂತೆ ಕೋಲಾರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಸಿದ್ದರಾಮಯ್ಯ ತಾವೇ ಅಭ್ಯರ್ಥಿಯಾಗುವುದಾಗಿ ಘೋಷಣೆ ಮಾಡಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿ ಹರ್ಷೋದ್ಘಾರ ಮನೆ ಮಾಡಿತ್ತು, ಅದಾದ ನಂತರ ಕಾರ್ಯಕ್ರಮದ ವೇದಿಕೆಯಿಂದ ಸಿದ್ದರಾಮಯ್ಯ, ಶಾಸಕ ಶ್ರೀನಿವಾಸಗೌಡರ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಹಾಗಾಗಿ ಸಿದ್ದರಾಮಯ್ಯ ಹಾಗೂ ಎಲ್ಲಾ ನಾಯಕರು ಶ್ರೀನಿವಾಸಗೌಡರ ಮನೆಗೆ ತೆರಳಿದರು. ಆದರೆ ಊಟಕ್ಕೆ ಶ್ರೀನಿವಾಸಗೌಡರು ಕೆ.ಹೆಚ್. ಮುನಿಯಪ್ಪರಿಗೆ ಸ್ವಾಗತಿಸಿರಲಿಲ್ಲವೇ, ಆ ಕಾರಣದಿಂದಲೇ ಕೆ.ಹೆಚ್. ಮುನಿಯಪ್ಪ ಅವರು ವೇದಿಕೆಯಿಂದ ಇಳಿದು ಜನರು ಕುಳಿತಿದ್ದ ಗ್ಯಾಲರಿಕಡೆಯಿಂದ ಏಕಾಂಗಿಯಾಗಿ ನಡೆದುಕೊಂಡು ಹೋಗಿದ್ದಾರೆ. ಇದೀಗ ಅವರ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿವೆ. ಜೊತೆಗೆ ಬೇರೆ ಬೇರೆ ರೀತಿಯ ಅಭಿಪ್ರಾಯ ಕೂಡಾ ವ್ಯಕ್ತವಾಗುತ್ತಿವೆ.
ಕೆ.ಹೆಚ್. ಮುನಿಯಪ್ಪ ತಂಡ ಕಡೆಗಣನೆ
ಇನ್ನು ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೆಂದೇ ಬಂದಿದ್ದ ಕೆ.ಹೆಚ್.ಮುನಿಯಪ್ಪ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕಿದ್ದ ಸಿದ್ದರಾಮಯ್ಯ ಅವರು, ಕೇವಲ ಒಂದು ಗುಂಪಿನವರ ಮಾಡಿದ್ದ ವ್ಯವಸ್ಥೆಗಳಿಗೇ ಒತ್ತು ಕೊಟ್ಟು, ನಂತರ ಕೆ.ಹೆಚ್. ಮುನಿಯಪ್ಪ ಅವರ ಗುಂಪಿನವರನ್ನು ಕಡೆಗಣಿಸಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ.
ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ರಮೇಶ್ ಕುಮಾರ್ ಅಂಡ್ ಟೀಂ, ಕೆ.ಹೆಚ್.ಮುನಿಯಪ್ಪ ಅವರ ಗುಂಪಿನ ಎಲ್ಲಾ ನಾಯಕರನ್ನೂ ದೂರವೇ ಇಟ್ಟಿತ್ತು. ಈ ನಡುವೆ ವೇದಿಕೆಯಲ್ಲೂ ಯಾರೊಬ್ಬರೂ ಯಾರ ಹೆಸರೂ ಹೇಳದ ರೀತಿಯಲ್ಲಿ ಭಾಷಣ ಮಾಡಿ ಮುಗಿಸಿದ್ದರು. ಆದರೂ ಸಿದ್ದರಾಮಯ್ಯ ಕೋಲಾರ ಜಿಲ್ಲಾ ಕಾಂಗ್ರೆಸ್ನಲ್ಲಿನ ಗುಂಪುಗಾರಿಕೆ ಶಮನ ಮಾಡಿದ್ದೇವೆ ಯಾವುದೇ ಗುಂಪುಗಾರಿಕೆ ಇಲ್ಲ ಎನ್ನುವ ಸಂದೇಶ ರವಾನೆ ಮಾಡಿ ಹೋದರು. ಕಾರ್ಯಕ್ರಮ ಮುಗಿದ ಮೇಲೆ ಎಲ್ಲರೂ ಸಂಭ್ರಮಿಸುತ್ತಿರುವಾಗ ಹಿರಿಯ ಕಾಂಗ್ರೆಸ್ ಮುಖಂಡ ಏಕಾಂಗಿಯಾಗಿದ್ದೇಕೆ ಎನ್ನುವ ಪ್ರಶ್ನೆ ಮೂಡಿದೆ.
ಎಚ್ಚರಿಕೆಯನ್ನು ಕಡೆಗಣಿಸಿದ್ರಾ ಸಿದ್ದರಾಮಯ್ಯ?
ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುತ್ತೇನೆ ಎಂದಾಗ ಇಲ್ಲಿರುವ ಗುಂಪುಗಾರಿಕೆ ಶಮನ ಮಾಡಿಕೊಳ್ಳಿ ಎಂದು ಎಚ್ಚರಿಕೆಯನ್ನು ಕೊಟ್ಟಿದ್ದ ಕೆ.ಹೆಚ್.ಮುನಿಯಪ್ಪ, ಜಿಲ್ಲೆಯ ಕಾಂಗ್ರೆಸ್ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ತಿಳಿಸಿದ್ದರು, ಆದರೆ ಅದ್ಯಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಸಿದ್ದರಾಮಯ್ಯ ಕೇವಲ ಒಂದು ಗುಂಪಿನ ಮಾತನ್ನು ಕೇಳಿ ಘೋಷಣೆ ಮಾಡಿಕೊಂಡು ಹೋಗಿದ್ದಾರೆ. ಇದು ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರಿಗೆ ಹಿನ್ನೆಡೆ ತಂದುಕೊಟ್ಟರು ಆಶ್ಚರ್ಯ ಪಡುವಂತಿಲ್ಲ.
ವರದಿ : ರಾಜೇಂದ್ರ ಸಿಂಹ ಟಿವಿ9 ಕೋಲಾರ
Published On - 7:04 pm, Tue, 10 January 23