ಪಠ್ಯದಿಂದ ಅಂಬೇಡ್ಕರ್ ಹೆಸರು ಅಳಿಸಲು ಸಂಚು, ಗೋಡ್ಸೆ ಹೆಸರು ರಸ್ತೆಗೆ ಇರಿಸಿದ್ದು ಸರಿಯೇ: ಪ್ರಿಯಾಂಕ್ ಖರ್ಗೆ ಪ್ರಶ್ನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 06, 2022 | 3:21 PM

ಬಿಜೆಪಿ ನಾಯಕರು ಮುಸ್ಲಿಮರ ವಿರುದ್ಧ ನಿರಂತರ ಹರಿಹಾಯ್ದ ಪರಿಣಾಮ ದೇಶದ ವಿಶ್ವಾಸಕ್ಕೆ ಧಕ್ಕೆ ಬಂದಿದೆ. ಇದರಿಂದ ಭಾರತದ ಕಂಪನಿಗಳಿಗೆ ನಷ್ಟವಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹೇಳಿದರು.

ಪಠ್ಯದಿಂದ ಅಂಬೇಡ್ಕರ್ ಹೆಸರು ಅಳಿಸಲು ಸಂಚು, ಗೋಡ್ಸೆ ಹೆಸರು ರಸ್ತೆಗೆ ಇರಿಸಿದ್ದು ಸರಿಯೇ: ಪ್ರಿಯಾಂಕ್ ಖರ್ಗೆ ಪ್ರಶ್ನೆ
ಶಾಸಕ ಪ್ರಿಯಾಂಕ್ ಖರ್ಗೆ
Follow us on

ಬೆಂಗಳೂರು: ಬಿಜೆಪಿ ನಾಯಕರು ಮುಸ್ಲಿಮರ ವಿರುದ್ಧ ನಿರಂತರ ಹರಿಹಾಯ್ದ ಪರಿಣಾಮ ದೇಶದ ವಿಶ್ವಾಸಕ್ಕೆ ಧಕ್ಕೆ ಬಂದಿದೆ. ಕಳೆದ 48 ಗಂಟೆಗಳಿಂದ ಬಾಯ್ಕಾಟ್ ಇಂಡಿಯಾ ಪ್ರಾಡಕ್ಟ್ಸ್ (#BoycottIndiaProducts) ಹ್ಯಾಷ್​ಟ್ಯಾಗ್ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಥ ಅಭಿಯಾನದಿಂದಾಗಿ ಭಾರತದ ಕಂಪನಿಗಳಿಗೆ ನಷ್ಟವಾಗುತ್ತದೆ. ನಮ್ಮ ರಾಷ್ಟ್ರದ ಜೊತೆ ವ್ಯಾಪಾರ ಮಾಡಲು ಹಲವು ಕಂಪನಿಗಳು ಹಿಂಜರಿಯುತ್ತಿದೆ. ಕೆಲ ದೇಶಗಳಲ್ಲಿ ವಿದ್ಯಾರ್ಥಿಗಳನ್ನು ಕಾಲೇಜಿಗೆ ಬರಬೇಡಿ ಎನ್ನುತ್ತಿದ್ದಾರೆ. ಕಾರ್ಮಿಕರನ್ನು ಕೆಲಸದಿಂದ ತೆಗೆಯುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹರಿಹಾಯ್ದರು.

ಇಲ್ಲಿ ಕೆಲವರು ಮುಸ್ಲಿಮರ ಅಂಗಡಿಗಳಲ್ಲಿ ಖರೀದಿಸಬಾರದು ಎಂದು ಕರೆನೀಡಿದ್ದರ ಪರಿಣಾಮ ಇದು. ಬಾರ್​ಕೋಡ್ 890 ಇರುವ ಉತ್ಪನ್ನಗಳನ್ನು ಕೊಳ್ಳಬೇಡಿ. ಅದು ಭಾರತದ ಉತ್ಪನ್ನಗಳು (Barcode 890 is not should be purchased because it is made in india products) ಎಂದು ಕರೆ ನೀಡಲಾಗುತ್ತಿದೆ. ಹಲವು ದೇಶಗಳ ಸರ್ಕಾರಗಳು ಭಾರತದ ರಾಯಭಾರಿಗಳನ್ನು ಕರೆದು ಛೀಮಾರಿ ಹಾಕುತ್ತಿದ್ದಾರೆ. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಕ್ಷಮೆ ಯಾಚಿಸಬೇಕು ಎಂದು ಭಾರತ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ. ಇವರು ಆತ್ಮ ನಿರ್ಭರ ಭಾರತ ರೂಪಿಸಿದ್ದನ್ನು ನಾವು ನೋಡಿದ್ದೇವೆ. ಭಾರತದಿಂದ 8.5 ಲಕ್ಷ ಜನರು ಹೊರಗೆ ಹೋಗಿದ್ದಾರೆ. ವ್ಯಾಪಾರ-ವ್ಯವಹಾರಗಳಿಗೆ ಪೂರಕವಾದ ಉತ್ತಮ ವಾತಾವರಣ ನಿರ್ಮಿಸಬೇಕೆಂದು ನಾನು ವಿನಂತಿಸಿಕೊಳ್ಳುತ್ತೇನೆ ಎಂದು ಅವರು ಕೋರಿದರು.

ಬಿಜೆಪಿಯವರಿಗೆ ಮೊದಲಿನಿಂದಲೂ ಅಂಬೇಡ್ಕರ್​​ ಅಂದರೆ ಅಲರ್ಜಿ. ಇತಿಹಾಸದ ಪುಟಗಳಿಂದಲೂ ಅಂಬೇಡ್ಕರ್​ ಹೆಸರು ಅಳಿಸಲು ಸಂಚು ಮಾಡಿದ್ದಾರೆ. ಪಠ್ಯದಲ್ಲಿ ಅಂಬೇಡ್ಕರ್ ಅವರ ತಂದೆ, ತಾಯಿಯ ಹೆಸರು ತೆಗೆದಿದ್ದಾರೆ. ಸಂವಿಧಾನ ಶಿಲ್ಪಿ ಅನ್ನೋ ಪದವನ್ನು ಯಾಕೆ ತೆಗೆಯಬೇಕಿತ್ತು? ಬಿ.ಎನ್.ರಾವ್ ಅವರನ್ನು ಸಂವಿಧಾನ ಶಿಲ್ಪಿ ಎಂಬಂತೆ ಬಿಂಬಿಸುತ್ತಿದ್ದಾರೆ. ಬಿ.ಆರ್.ಅಂಬೇಡ್ಕರ್ ಅವರಿ​ಗೆ ಅವಮಾನ ಆಗಿದೆ. ಈಗ ಪಿ.ರಾಜೀವ್, ಎನ್.ಮಹೇಶ್, ಗೋವಿಂದ ಕಾರಜೋಳ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು. ಈ ಮೊದಲು ಎನ್.ಮಹೇಶ್ ಅವರು ಅಂಬೇಡ್ಕರ್ ಪುಸ್ತಕ ಕೈಲಿ ಇರಿಸಿಕೊಂಡೇ ಓಡಾಡುತ್ತಿದ್ದರು. ಈಗ ಅವರು ಸಾವರ್ಕರ್ ಪುಸ್ತಕ ಇರಿಸಿಕೊಂಡು ಓಡಾಡುತ್ತಿದ್ದಾರೆ. 6ನೇ ತರಗತಿ ಪುಸ್ತಕದಲ್ಲಿ ತಾಯಿ ಭುವನೇಶ್ವರಿ ಫೋಟೊ ತೆಗೆಯಲಾಗಿದೆ. ಅದರ ಬದಲು ಭಗವಾ ಧ್ವಜದ ಮೆರವಣಿಗೆಯ ಫೋಟೋ ಹಾಕಲಾಗಿದೆ. ತಾಯಿ ಭುವನೇಶ್ವರಿಗಿಂತ ದೊಡ್ಡವರಾ ಇವರು ಎಂದು ಹರಿಹಾಯ್ದರು.

ಬಿಜೆಪಿಯವರಿಗೆ ಶ್ರೀರಾಮುಲುಗೆ ರಾಮ ಬೇಕು, ವಾಲ್ಮಿಕಿ ಬೇಡವಾ? ಬೌದ್ಧ ಮತ್ತು ಜೈನ ಧರ್ಮಗಳನ್ನು ಧರ್ಮಗಳೇ ಅಲ್ಲ ಎಂದು ಪಠ್ಯಪುಸ್ತಕಗಳಲ್ಲಿ ಹೇಳಿದ್ದಾರೆ. ಅವು ಕೇವಲ ಮತಗಳು ಎಂದು ಬಿಂಬಿಸುವ ಮೂಲಕ ಎರಡೂ ಧರ್ಮಗಳಿಗೆ ಅವಮಾನ ಮಾಡಿದ್ದಾರೆ. ತೀರ್ಥಂಕರರಿಗೆ ಏಕವಚನ ಪದ ಪ್ರಯೋಗ ಮಾಡಿದ್ದಾರೆ. ಶಂಕರಾಚಾರ್ಯರು ಮಧ್ವಾಚಾರ್ಯರಿಗೆ ಬಹುವಚನ ಪದ ಬಳಸಿದ್ದಾರೆ. ಆದರೆ ತೀರ್ಥಂಕರರಿಗೆ ಮರ್ಯಾದೆ ಕೊಟ್ಟಿಲ್ಲ. ಅವರಿಗೆ ಗೌರವ ನೀಡಲು ನಿಮಗೆ ದುಡ್ಡುಕೊಡಬೇಕೆ ಎಂದು ಪ್ರಶ್ನಿಸಿದರು. ಪಠ್ಯಗಳಲ್ಲಿ ಆರ್​ಎಸ್​ಎಸ್ ಐಡಿಯಾಲಜಿ ತುಂಬಲು ಹೊರಟಿದ್ದೀರಿ. ಎಲ್ಲಿದ್ದೀರಾ ಎನ್.ಮಹೇಶ್ ಅವರೇ ಇದು ಕರ್ನಾಟಕದ ಅಸ್ಮಿತೆಯ ಹೋರಾಟ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್​ ನನ್ನ ಬಗ್ಗೆ ವೈಯಕ್ತಿಕವಾಗಿ ಮಾತಾಡಿದ್ದಾರೆ. ನನ್ನನ್ನು ಕಾನ್ವೆಂಟ್ ದಲಿತ ಎಂದು ಹೀನಾಯವಾಗಿ ಬೈದಿದ್ದಾರೆ. ಇಂಥ ಹೇಳಿಕೆಗಳನ್ನು ಕೊಡುವಂತೆ ಸಚಿವ ಸುನಿಲ್‌ ಕುಮಾರ್‌ಗೆ ಬಿಜೆಪಿ ಐಟಿ ಸೆಲ್ ಹೇಳಿಕೊಡುತ್ತಾ? ದಲಿತರು ಬೆಂಗಳೂರಿನಲ್ಲಿ ಹುಟ್ಟಬಾರದಾ? ಮೈಸೂರು ದಲಿತರು ಬೇರೆ, ಬೆಂಗಳೂರು ದಲಿತರು ಬೇರೇನಾ? ಬಿಜೆಪಿಯವರಿಗೆ ಕಾನ್ವೆಂಟ್‌ನಲ್ಲಿ ಓದುವ ದಲಿತರು ಇಷ್ಟ ಇಲ್ಲವೇ ಎಂದು ಪ್ರಶ್ನಿಸಿದರು.

ನಾನು ಕಾನ್ವೆಂಟ್‌ ದಲಿತನೋ, ಅಮೆರಿಕದ ದಲಿತನೋ ಏನು ಬೇಕಾದರೂ ಹೇಳಿಕೊಳ್ಳಿ. ಆದರೆ ನಾನು ಮಾತ್ರ ಪ್ರಜ್ಞಾವಂತ ದಲಿತ ಎನ್ನುವುದು ನಿಜ ಎಂದು ಸಚಿವ ಸುನಿಲ್ ಕುಮಾರ್​ ಹೇಳಿಕೆಗೆ ಪ್ರಿಯಾಂಕ್​ ತಿರುಗೇಟು ನೀಡಿದರು.

ಕಾರ್ಕಳ ತಾಲ್ಲೂಕಿ ಗೋಳ‌ ಗ್ರಾಮದಲ್ಲಿ ರಸ್ತೆಗೆ ಗೋಡ್ಸೆ ಹೆಸರು ಇಟ್ಟ ವಿಚಾರ ಪ್ರಸ್ತಾಪಿಸಿದ ಅವರು ಗಾಂಧಿ ಕೊಂದವರ ಹೆಸರನ್ನು ರಸ್ತೆ ಇರಿಸುತ್ತಾರೆ ಎಂದರೆ ಹೇಗೆ? ಇಂಥದಕ್ಕೆ ಏನೆಂದು ಹೇಳಬೇಕು? ಮಹಾತ್ಮ ಗಾಂಧಿ ದೇಶದ್ರೋಹಿಯೇ?ಗೋಡ್ಸೆ ದೇಶಭಕ್ತರೇ? ಕುರ್ಚಿ ಉಳಿಸಿಕೊಳ್ಳೋಕೆ ಇವರು ಏನು ಬೇಕಾದರೂ ಮಾಡುತ್ತಾರೆ. ಈ ನಡೆಯನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:21 pm, Mon, 6 June 22