ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರ ಮಧ್ಯೆ ಆಣೆ, ಪ್ರಮಾಣದ ವಾಗ್ಯುದ್ಧ ಶುರುವಾಗಿದೆ. ಹಾಲಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ (Congress MLA TD Rajegowda) ವಿರುದ್ಧ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆಂದು ಮಾಜಿ ಬಿಜೆಪಿ ಶಾಸಕ ಡಿ.ಎನ್.ಜೀವರಾಜ್ಗೆ (BJP MLA DN Jeevraj) ಆರೋಪ ಮಾಡಿದ್ದಾರೆ. ಈ ಆರೋಪ ಮಿತ್ಯವೆಂದಿರುವ ಟಿ.ಡಿ.ರಾಜೇಗೌಡ, ಡಿ.ಎನ್.ಜೀವರಾಜ್ಗೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡುವಂತೆ ಚಿಕ್ಕಮಗಳೂರಿನಲ್ಲಿ (Chikkamagaluru) ಸವಾಲು ಹಾಕಿದ್ದಾರೆ.
ಏನದು ಆರೋಪ?
ಶಾಸಕ ಟಿ.ಡಿ.ರಾಜೇಗೌಡ ದಿ.ಸಿದ್ದಾರ್ಥ್ ಕುಟುಂಬದ ಬಳಿ 211 ಎಕರೆ ಕಾಫಿತೋಟ ಖರೀದಿಸಿದ್ದಾರೆ. ಈ ಆಸ್ತಿ ಖರೀದಿ ವೇಳೆ ಸರ್ಕಾರಕ್ಕೆ ಮೋಸ ಮಾಡಿದ್ದಾರೆಂದು ಡಿ.ಎನ್.ಜೀವರಾಜ್ ಆರೋಪ ಮಾಡಿದ್ದಾರೆ.
ಇದಕ್ಕೆ ತಿರುಗೇಟು ನೀಡಿದ ಟಿ.ಡಿ.ರಾಜೇಗೌಡ ನಾನು ಕಾನೂನು ಪ್ರಕಾರವೇ ಆಸ್ತಿಯನ್ನು ಖರೀದಿ ಮಾಡಿದ್ದೇನೆ. ಆ ತೋಟ ಕೇವಲ 14ರಿಂದ 15 ಕೋಟಿಯಷ್ಟು ಬೆಲೆ ಬಾಳುತ್ತೆ. 270 ಕೋಟಿಯಷ್ಟು ಆಸ್ತಿ ಖರೀದಿಸಿದ್ದಾರೆ ಎಂದು ಆರೋಪಿಸಿದ್ದಾರೆ. 15 ಕೋಟಿಗೂ 270 ಕೋಟಿಗೂ ವ್ಯತ್ಯಾಸ ಗೊತ್ತಿಲ್ವಾ, ಬುದ್ಧಿ ಇಲ್ವಾ? ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜ್ಯ ಸರ್ಕಾರಕ್ಕೆ 80 ಕೋಟಿ ನಷ್ಟ ಮಾಡಿದ್ದೀನಿ ಎಂದು ಹೇಳುತ್ತಿದ್ದೀರಿ. ಈ ವಿಚಾರವನ್ನು ನಾನು ಇಲ್ಲಿಗೆ ಸುಮ್ಮನೆ ಬಿಡಲ್ಲ. ನಾನು ನಂಬುವ ಧರ್ಮಸ್ಥಳಕ್ಕೆ ಹೋಗಿ ಕೈಮುಗಿಯುತ್ತೇನೆ. ನಾನು ಏನಾದರೂ ಅನ್ಯಾಯ ಮಾಡಿದರೇ ನನಗೆ ತೊಂದರೆಯಾಗಲಿ. ಇಲ್ಲದಿದ್ದರೇ ಅಪಪ್ರಚಾರ ಮಾಡಿದವರನ್ನು ದೇವರೇ ನೋಡಿಕೊಳ್ಳಲಿ. ತಾಕತ್ತಿದ್ದರೆ ಶೃಂಗೇರಿ ಶಾರದಾಂಬೆ, ಧರ್ಮಸ್ಥಳದ ಸನ್ನಿಧಿಗೆ ಬನ್ನಿ. ಇಲ್ಲ ನೀವೇ ದಿನಾಂಕ, ಸಮಯ ನಿಗದಿ ಮಾಡಿ ನಾನು ಬರುತ್ತೇನೆ. ನಾನು ಪ್ರಮಾಣ ಮಾಡುತ್ತೇನೆ, ನೀವೂ ಆಣೆ ಪ್ರಮಾಣ ಮಾಡಿ ಎಂದು ಆಹ್ವಾನಿಸಿದ್ದಾರೆ.
ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ