ಕಾಂಗ್ರೆಸ್ ಆರಿಸಿ ಬಂದರೆ ಮಾತ್ರ…ಕೂಸು ಹುಟ್ಟುವ ಮೊದಲೇ ಮಹಿಳಾ ಮಂತ್ರಿಗಿರಿಯ ಕುಲಾವಿ..!
ಅಕಸ್ಮಾತ್ ಕಾಂಗ್ರೆಸ್ ಸರ್ಕಾರ ರಚನೆ ಆಗಿಬಿಟ್ಟರೆ ಮಹಿಳಾ ಮಂತ್ರಿ ಯಾರಾಗ್ತಾರೆ ಎನ್ನುವ ಚರ್ಚೆ ಕೂಡ ಕೆಪಿಸಿಸಿ ಕಾರಿಡಾರ್ ನಲ್ಲಿ ಹರಿದಾಡತೊಡಗಿದೆ. ಕೂಸು ಹುಟ್ಟುವ ಮೊದಲೇ ಮಹಿಳಾ ಮಂತ್ರಿಗಿರಿಯ ಕುಲಾವಿ..
ಬೆಂಗಳೂರು: 2023 ರ ಚುನಾವಣೆಯ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ (Karnataka Assembly Election 2023) ಎಲೆಕ್ಷನ್ ಜ್ವರ ಶುರುವಾಗುತ್ತಿದೆ. ಇತ್ತೀಚಿನ ಬೆಳವಣಿಗೆಗಳನ್ನು ನೋಡುತ್ತಿರುವ ವಿರೋಧ ಪಕ್ಷ ಕಾಂಗ್ರೆಸ್ (Congress) ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಬಲೂನ್ ಏರಿ ಕುಳಿತಿದೆ. ಇನ್ನೂ ಚುನಾವಣೆಗೆ ಸಿದ್ದತೆಗಳಾಗಬೇಕು, ಪ್ರಚಾರ ನಡೆಯಬೇಕು, ಯಾತ್ರೆಗಳಾಗಬೇಕು, ಸಮುದಾಯಗಳನ್ನು ಒಗ್ಗೂಡಿಸಬೇಕು, ಕ್ಯಾಂಡಿಡೇಟ್ ಗಳು ಇವರೇ ಅಂತ ದೆಹಲಿಯಿಂದ ಗ್ರೀನ್ ಸಿಗ್ನಲ್ ಸಿಗಬೇಕು, ಕ್ಯಾಂಡಿಡೇಟ್ ಗಳು ಚುನಾವಣೆ ಎದುರಿಸಿ ಗೆದ್ದು ಬರಬೇಕು. ಇಷ್ಟೆಲ್ಲ ಆದಮೇಲೆ ಸರ್ಕಾರ ರಚನೆಯ ಮತ್ತೊಂದು ದೊಡ್ಡ ಕಸರತ್ತು ನಡೆಯುವುದು.
ಆದರೆ ವಿಚಿತ್ರ ಮತ್ತು ವಿಪರ್ಯಾಸವೆಂದರೆ ಕಾಂಗ್ರೆಸ್ ಪಾಳಯದಲ್ಲಿ ಆಗಲೇ ಕೆಲವರು ಸಿಎಂ ಸ್ಥಾನದ ಕನಸು ಕಾಣತೊಡಗಿದ್ದರೆ ಇನ್ನೂ ಕೆಲವರು ತಮಗೆ ಯಾವ ಖಾತೆ ಸೂಕ್ತ ಅಂತ ಈಗಲೇ ಲೆಕ್ಕಾಚಾರ ಹಾಕತೊಡಗಿದ್ದಾರೆ. ಕಾಂಗ್ರೆಸ್ ಪಕ್ಷ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರುವುದೋ ಬಿಡುವುದೋ ಎಂದಷ್ಟೇ ಜೋರಾಗಿ ಮುಂದಿನ ಕಾಂಗ್ರೆಸ್ ಸರ್ಕಾರ ಅಕಸ್ಮಾತ್ ರಚನೆ ಆಗಿಬಿಟ್ಟರೆ ಯಾರಾಗ್ತಾರೆ ಮಹಿಳಾ ಮಂತ್ರಿ ಎನ್ನುವ ಚರ್ಚೆ ಕೂಡ ಕೆಪಿಸಿಸಿ ಕಾರಿಡಾರ್ ನಲ್ಲಿ ಹರಿದಾಡತೊಡಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ವಲಸೆ ಶಾಸಕರ ವಿರುದ್ಧ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪ್ಲ್ಯಾನ್
2018 ರ ಚುನಾವಣೆಯಲ್ಲಿ 6 ಮಹಿಳಾ ಶಾಸಕರು ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದರು. ಅವರೆಲ್ಲಾ ಮೊದಲ ಬಾರಿ ಆಯ್ಕೆಯಾಗಿದ್ದರಿಂದ ಯಾರಿಗೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ವಿಧಾನ ಪರಿಷತ್ ಕೋಟಾದಡಿ ನಟಿ ಜಯಮಾಲಾ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗಿ ಗೂಟದ ಕಾರಿನಲ್ಲಿ ಓಡಾಡಿದ್ದರು. ಈಗ ಮುಂದಿನ ಚುನಾವಣೆಯಲ್ಲಿ ಈಗಿರುವ ಎಲ್ಲಾ ಮಹಿಳಾ ಶಾಸಕಿಯರು ಬಹುತೇಕ ಮತ್ತೆ ಆಯ್ಕೆಯಾಗುತ್ತಾರಾ ಎಂಬ ಪ್ರಶ್ನೆ ಜೊತೆಗೆ ಅಕಸ್ಮಾತ್ ಎಲ್ಲರೂ ಗೆದ್ದರೆ ಇವರಲ್ಲಿ ಯಾರಿಗೆ ಒಲಿಯಲಿದೆ ಸಚಿವ ಸ್ಥಾನ ಎಂಬ ಚರ್ಚೆ ಜೋರಾಗಿದೆ.
ಮಂತ್ರಿ ಸ್ಥಾನದ ಭವಿಷ್ಯದ ರೇಸ್ ನಲ್ಲಿ ಮುಂಚೂಣಿಯಲ್ಲಿರುವ ಹೆಸರು ಪಂಚಮಸಾಲಿ ಲಿಂಗಾಯತ ಸಮುದಾಯದ ಲಕ್ಷ್ಮಿ ಹೆಬ್ಬಾಳ್ಕರ್ ರವರದ್ದು. ಲಕ್ಷ್ಮಿ ಹೆಬ್ಬಾಳ್ಕರ್ ಗೆ ಲಿಂಗಾಯತ ಕೋಟಾದಲ್ಲಿ ಸಚಿವ ಸ್ಥಾನ ಸಿಗಬಹುದು. ಆದರೆ ಬಿಜೆಪಿಯ ರಮೇಶ್ ಜಾರಕಿಹೊಳಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸೋಲಿಸಿಯೇ ತೀರುತ್ತೇನೆ ಎಂದು ಮಾಡಿರುವ ಶಪಥ ಲಕ್ಷ್ಮಿ ಹೆಬ್ಬಾಳ್ಕರ್ ಗೆಲುವು ಅಷ್ಟೇನೂ ಈಸಿ ಟಾಸ್ಕ್ ಅಲ್ಲ ಎಂಬುದನ್ನು ಪದೇ ಪದೇ ನೆನಪಿಸುತ್ತದೆ. ತಮ್ಮದೇ ಜಿಲ್ಲೆಯ ಮೊದಲ ತೊಡಕನ್ನು ಎದುರಿಸಿ ಹೆಬ್ಬಾಳ್ಕರ್ ಹೊರಬಂದರೆ ಮಂತ್ರಿ ಸ್ಥಾನದ ರೇಸ್ ಗೆ ಎಂಟ್ರಿ ಇಲ್ಲದಿದ್ದರೆ ಬೆಳಗಾವಿಗಷ್ಟೇ ಅವರು ಸೀಮಿತ.
ಇನ್ನು ರೂಪ ಶಶಿಧರ್ ಅವರು 2018 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದ ಏಕೈಕ ದಲಿತ ಎಡ ಸಮುದಾಯದ ಶಾಸಕಿ. ಅವರು ಕೂಡ ಮರು ಆಯ್ಕೆ ಬಯಸಿದ್ದಾರೆ ಬಹುಶಃ ಅವರು ಗೆಲ್ಲುವುದನ್ನು ಕ್ಷೇತ್ರದ ಜನ ನಿರ್ಧಾರ ಮಾಡ್ತಾರೆ. ಒಂದು ವೇಳೆ ರೂಪಾ ಶಶಿಧರ್ ಗೆಲುವಿನ ಮಾಲೆ ಹಾಕಿಕೊಂಡು ವಿಧಾನಸೌಧಕ್ಕೆ ಬಂದರೆ ಮಂತ್ರಿ ಸ್ಥಾನದ ರೇಸ್ ನ ಪ್ರಬಲ ಕ್ಯಾಂಡಿಡೇಟ್ ಅವರೂ ಕೂಡ. ರೂಪಾ ಶಶಿಧರ್ ಅವರಿಗೆ ಬಹುಶಃ ಮಂತ್ರಿ ಸ್ಥಾನ ಗ್ಯಾರಂಟಿ ಎಂದರೂ ಈಗಿನ ಬೆಳವಣಿಗೆಗಳ ಪ್ರಕಾರ ಅವರ ತಂದೆ ಮುನಿಯಪ್ಪ ಅವರು ಎಡಗೈ ಸಮುದಾಯದ ಹಿರಿಯ ನಾಯಕ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತ.
ಮುನಿಯಪ್ಪ ಅವರ ಲೋಕಸಭಾ ಸೋಲಿನ ನೋವನ್ನು ದೇವನಹಳ್ಳಿ ಜನ ಗೆಲುವಿನ ಮೂಲಕ ಮರೆಸಿದರೆ ನೇರವಾಗಿ ಮುನಿಯಪ್ಪ ಸಿಎಂ ಸ್ಥಾನದ ಪೈಪೋಟಿಗೇ ಬೀಳುವುದು ಖಚಿತ. ಸಿಎಂ ರೇಸ್ ನಲ್ಲಿ ಹೊರಟವರಿಗೆ ಮಂತ್ರಿ ಸ್ಥಾನವನ್ನೂ ಕೊಡದೆ ಕೂರಿಸಲು ಸಾಧ್ಯವಿಲ್ಲ. ಮುನಿಯಪ್ಪ ಅವರಿಗೆ ಸಚಿವ ಸ್ಥಾನ ನೀಡಲೇಬೇಕಾದ ಅನಿವಾರ್ಯತೆ ಎದುರಾದರೆ ಅವರ ಮಗಳಾದ ರೂಪ ಶಶಿಧರ್ ಅವರಿಗೆ ಸಚಿವ ಸ್ಥಾನ ಸಿಗುವುದು ಸ್ವಲ್ಪ ಕಷ್ಟ ಎನ್ನಲಾಗುತ್ತಿದೆ.
ಇನ್ನು ಬೆಳಗಾವಿ ಜಿಲ್ಲೆ ಖಾನಾಪುರ ಕ್ಷೇತ್ರದ ಶಾಸಕಿ ಶ್ರೀಮತಿ ಅಂಜಲಿ ನಿಂಬಾಳ್ಕರ್ ಮೊದಲ ಮಹಿಳಾ ಮರಾಠಿ ಶಾಸಕಿಯಾಗಿದ್ದಾರೆ. ಇವರ ಪರವಾಗಿ ಕ್ಷೇತ್ರದಲ್ಲಿ ಉತ್ತಮ ಸ್ಪಂದನೆ ಇದ್ದು ಮುಂದಿನ ಸರ್ಕಾರದಲ್ಲಿ ಸಚಿವಾಕಾಂಕ್ಷಿ ಯಾಗಿದ್ದಾರೆ. ಮರಾಠಿ ಕೋಟಾ ಅದರಲ್ಲೂ ಮಹಿಳಾ ಕೋಟಾದಲ್ಲಿ ಹಾಗೂ ಬೆಳಗಾವಿ ಜಿಲ್ಲೆಯ ಕೋಟಾದಲ್ಲಿ ಪ್ರಯತ್ನ ಮಾಡುವ ಸಾಧ್ಯತೆ ಇದ್ದು ಬಹುತೇಕ ಮರಾಠಿ ಕೋಟಾದಲ್ಲಿ ಸಿಗುವ ಸಾಧ್ಯತೆ ಇದೆ. ಆದರೆ ಒಂದೇ ಜಿಲ್ಲೆಯಲ್ಲಿ ಇಬ್ಬರು ಮಹಿಳಾ ಶಾಸಕಿಯರಿಗೆ ಸಚಿವಸ್ಥಾನ ಸಿಗುವುದು ಕಷ್ಟದ ಸಂಗತಿ. ಈ ವಿಚಾರದಲ್ಲಿ ನೋಡುವುದಾದರೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪಂಚಮಸಾಲಿ ಸಮುದಾಯದ ನಾಯಕಿ ಎಂಬ ಹಣೆಪಟ್ಟಿ ಇದ್ದು ಕೆಪಿಸಿಸಿ ಅಧ್ಯಕ್ಷರ ಅಭಯವೂ ಕೂಡ ಸಿಗುತ್ತದೆ ಎನ್ನುವುದು ವಿಶ್ಲೇಷಕರ ಲೆಕ್ಕಾಚಾರ. ಹಾಗಂತ ಅಂಜಲಿ ನಿಂಬಾಳ್ಕರ್ ಪವರ್ ಸೋನಿಯಾ ಗಾಂಧಿ ಬಿರುನಗೆಯ ಮೂಲಕ ಕೈ ಕೈ ಹಿಡಿದು ನಡೆದಾಗಲೇ ಭಾರತ್ ಜೋಡೋದಲ್ಲಿ ಎಲ್ಲರಿಗೂ ಅರ್ಥವಾಗಿತ್ತು. ನೇರವಾಗಿ ಸೋನಿಯಾ ಗಾಂಧಿ ನೀಲಿಗಣ್ಣಿನ ಹುಡುಗಿ ಅಂಜಲಿ ನಿಂಬಾಳ್ಕರ್. ಹೀಗಾಗಿ ಅಂಜಲಿ ಹಾಗೂ ಲಕ್ಷ್ಮಿ ನಡುವೆ ಪೈಪೋಟಿ ಜೋರಾಗಲಿದೆ.
ಇನ್ನೂ ಕುಸುಮ ಶಿವಳ್ಳಿ ಯವರು ತೀರ ಹೊಸಬರು ಹಾಗೂ ಬೇರೆ, ಬೇರೆ ಹಿಂದುಳಿದ ಸಮುದಾಯದ ಪ್ರಬಲ ನಾಯಕರು ಸರತಿಯಲ್ಲಿ ಇರುವುದರಿಂದ ಇವರಿಗೆ ಸಚಿವ ಸ್ಥಾನ ಒಲಿಯುವುದು ನಿಶ್ಚಿತ ಎಂಬ ವಾತಾವರಣ ಇಲ್ಲ. ಇನ್ನೂ ಕಲಬುರಗಿ ಉತ್ತರ ಕ್ಷೇತ್ರದಿಂದ ಕನೀಜ್ ಪಾತಿಮಾ ಅವರು ತಮ್ಮ ಅದೃಷ್ಟ ಪರೀಕ್ಷೆ ನಡೆಸುವ ಸಾಧ್ಯತೆ ಇದ್ದರೂ ಈಗಿನ ಸ್ಥಿತಿಯಲ್ಲಿ ಬಹಳ ಹಿರಿಯ ಶಾಸಕರು ಇರುವುದರಿಂದ ಇವರಿಗೆ ಅದೃಷ್ಟ ಒಲಿಯುವುದು ತೀರ ಕಡಿಮೆ. ಆದರೆ ಮುಸಲ್ಮಾನ ಸಮುದಾಯದಲ್ಲಿ ಬಹಳ ವರ್ಷಗಳಿಂದ ಯಾವುದೇ ಮಹಿಳಾ ಸಚಿವರು ಇಲ್ಲದೆ ಇರುವುದರಿಂದ ಒಮ್ಮೆ ಸಿಕ್ಕರೂ ಸಿಗಬಹುದು.
ಇನ್ನೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಒಕ್ಕಲಿಗ ರೆಡ್ಡಿ ಸಮುದಾಯದ ರಾಮಲಿಂಗಾರೆಡ್ಡಿ ಯವರ ಮಗಳು ಗೆದ್ದರೂ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ಅಕಸ್ಮಾತ್ ರಾಮಲಿಂಗ ರೆಡ್ಡಿ ಯಾವುದೇ ಸಚಿವಗಿರಿ ಅಲಂಕರಿಸದೇ ಹೋದರೆ ಮಾತ್ರ ಸೌಮ್ಯ ರೆಡ್ಡಿ ಮಂತ್ರಿಗಿರಿಗೆ ಲಾಬಿ ಡಿಮ್ಯಾಂಡ್ ಮಾಡಬಹುದು. ಮಾಜಿ ಸಚಿವೆ ಉಮಾಶ್ರೀ ಹಿಂದುಳಿದ ವರ್ಗದ ದೇವಾಂಗ ಸಮುದಾಯದವರಾಗಿದ್ದು ಮೊದಲು ತೇರದಾಳದ ಟಿಕೇಟ್ ಖಚಿತವಾಗಿ ಉಮಾಶ್ರೀ ಗೆದ್ದುಬರಬೇಕು. ಮೊದಲು ಗೆಲುವು ಆನಂತರ ಸಚಿವ ಸ್ಥಾನದ ಚರ್ಚೆ ಖಚಿತ ಎನ್ನುತ್ತಿದ್ದಾರೆ ವಿಶ್ಲೇಷಕರು.
ಇನ್ನೂ ಹಲವಾರು ಮಹಿಳಾ ಶಾಸಕಿಯರು ಗೆದ್ದರೂ ಅವರೆಲ್ಲರಿಗೆ ಸಿಗುವುದು ಅನುಮಾನ. ಕಾಂಗ್ರೆಸ್ ಟಿಕೇಟ್ ಗಾಗಿ ನೂರಾರು ಮಹಿಳೆಯರೂ ಕೂಡ ಅರ್ಜಿ ಹಾಕಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ ಎಷ್ಟು ಮಂದಿಗೆ ಇಲ್ಲಿ ಟಿಕೇಟ್ ಸಿಗಬಹುದು, ಎಷ್ಟು ಮಂದಿ ಗೆಲ್ಲಬಹುದು ಎಲ್ಲವೂ ನಿರ್ಧಾರ ಆದಮೇಲೆ ಕುಲಾವಿ ಹೊಲೆಯುವ ಕೆಲಸ. ರಾಜಕೀಯದಲ್ಲಿ ಏನೇನು ನಡೆಯುತ್ತದೆ ಎನ್ನುವುದು ನೀರಿನಲ್ಲಿ ಮೀನಿನ ಹೆಜ್ಜೆ ಹುಡುಕಿದಷ್ಟು ಜಟಿಲ. ಯಾವ ಕ್ಷಣದಲ್ಲಿ ಏನು ಬೇಕಾದರೂ ಜರುಗಬಹುದು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ