ಮೈಸೂರಿನಲ್ಲೇ ‘ಗೃಹಲಕ್ಷ್ಮೀ’ಗೆ ಚಾಲನೆ ಹಿಂದೆ ‘ಕೈ’ ತಂತ್ರ: ಬಿಜೆಪಿ-ಜೆಡಿಎಸ್​ಗೆ ಮೂಗುದಾರ ಹಾಕಲು ಭಾರಿ ಸ್ಕೆಚ್

| Updated By: ರಮೇಶ್ ಬಿ. ಜವಳಗೇರಾ

Updated on: Aug 28, 2023 | 10:58 PM

ಆಪರೇಷನ್ ಹಸ್ತದ ಜೊತೆ ಜೊತೆಗೆ ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಸರ್ಕಾರದ ಮಟ್ಟದಲ್ಲೂ ತಯಾರಿ ನಡೆಸಿದೆ. ಗ್ಯಾರಂಟಿ ಯೋಜನೆಗಳನ್ನು ಅದರಲ್ಲೂ ಗೃಹಲಕ್ಷ್ಮೀ ಯೋಜನೆಯನ್ನು ಲೋಕಸಭಾ ಚುನಾವಣೆಗೆ ಮಾಸ್ಟರ್ ಸ್ಟ್ರೋಕ್ ಆಗಿ ಬಳಸಿಕೊಳ್ಳುವುದಕ್ಕೆ ಕಾಂಗ್ರೆಸ್​ ಮುಂದಾಗಿದೆ. ಹಾಗಾದ್ರೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್​ ಪ್ಲ್ಯಾನ್ ಏನು ಎನ್ನುವುದನ್ನು ನೋಡಿ.

ಮೈಸೂರಿನಲ್ಲೇ ‘ಗೃಹಲಕ್ಷ್ಮೀ’ಗೆ ಚಾಲನೆ ಹಿಂದೆ ‘ಕೈ’ ತಂತ್ರ: ಬಿಜೆಪಿ-ಜೆಡಿಎಸ್​ಗೆ ಮೂಗುದಾರ ಹಾಕಲು ಭಾರಿ ಸ್ಕೆಚ್
ಗೃಹಲಕ್ಷ್ಮೀ ಯೋಜನೆ
Follow us on

ಬೆಂಗಳೂರು.ಮೈಸೂರು, (ಆಗಸ್ಟ್ 28): ಮೈಸೂರಿನಲ್ಲೇ ಗೃಹಲಕ್ಷ್ಮೀ ಯೋಜನೆಗೆ(gruha lakshmi scheme) ಚಾಲನೆ ನೀಡಲು ಮುಂದಾಗಿರುವುದರ ಹಿಂದೆ ಲೋಕಾಸಭಾ ಚುನಾವಣೆಯ (Loksabha Elections 2024) ಮಾಸ್ಟರ್ ಪ್ಲ್ಯಾನ್ ಇದೆ. ಇದೇ ಬುಧವಾರ ಅಂದ್ರೆ, ಆಗಸ್ಟ್ 30ರಂದು ಗೃಹಲಕ್ಷ್ಮೀ ಯೋಜನೆಗೆ ಮೈಸೂರಿನಲ್ಲಿ ಅದ್ಧೂರಿ ಚಾಲನೆ ನೀಡಲಾಗುತ್ತಿದೆ. ಇದಕ್ಕಾಗಿ ಜಿಲ್ಲೆ ಜಿಲ್ಲೆಯಲ್ಲೂ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿಷಯ ಅಂದ್ರೆ, ಲೋಕಸಭೆ ಚುನಾವಣೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ 4 ಜಿಲ್ಲೆಗಳನ್ನು ಟಾರ್ಗೆಟ್ ಮಾಡಿದೆ. ಮಹಿಳೆಯರ ಮತ ಕ್ರೋಢೀಕರಿಸಲು ಸಿಎಂ ಮತ್ತು ಡಿಸಿಎಂ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.

ಬಿಜೆಪಿ ಜೆಡಿಎಸ್​ಗೆ ಮೂಗುದಾರ ಹಾಕಲು ಭಾರಿ ಕೈ ಸ್ಕೆಚ್

ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡುವ ಮೂಲಕ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ಮುನ್ನುಡಿ ಬರೆಯಲಿದೆ. ಮೈಸೂರಲ್ಲಿ ಯೋಜನೆಗೆ ಚಾಲನೆ ನೀಡುವುದರ ಮೂಲಕ ಸಿಎಂ ಹಾಗೂ ಡಿಸಿಎಂ ರಣತಂತ್ರ ರೂಪಿಸಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಶಕ್ತಿವರ್ಧನೆಗೆ. ಮೈಸೂರು-ಕೊಡಗು, ಮಂಡ್ಯ, ಹಾಸನ, ಚಾಮರಾಜನಗರ ಗೆಲ್ಲುವುದಕ್ಕೆ ಕೈ ಪಡೆ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಬಿಜೆಪಿ ಜೆಡಿಎಸ್​ಗೆ ಮೂಗುದಾರ ಹಾಕಲು ಕಾಂಗ್ರೆಸ್ ಸ್ಕೆಚ್ ಹಾಕಿದೆ. ಸದ್ಯ ಈ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಂಸದರು ಇಲ್ಲ. ಚಾಮರಾಜನಗರ ಮತ್ತು ಮೈಸೂರಿನಲ್ಲಿ ಬಿಜೆಪಿ ಸಂಸದರಿದ್ದಾರೆ. ಮಂಡ್ಯದಲ್ಲಿ ಪಕ್ಷೇತರ, ಹಾಸನದಲ್ಲಿ ಜೆಡಿಎಸ್ ಸಂಸದರಿದ್ದಾರೆ. 4 ಕ್ಷೇತ್ರ ಗೆಲ್ಲುವ ಟಾರ್ಗೆಟ್ ಮಾಡಿರುವ ಕಾಂಗ್ರೆಸ್ ಗೃಹಲಕ್ಷ್ಮೀ ಯೋಜನೆಯನ್ನು ವೇದಿಕೆ ಮಾಡಿಕೊಂಡಿದೆ.

ವಿಶೇಷ ಅಂದ್ರೆ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಉಪಸ್ಥಿತರಿರಲಿದ್ದಾರೆ.

‘ಗೃಹಲಕ್ಷ್ಮೀ’ ಅದೃಷ್ಟವಂತರು!

ಅಷ್ಟಕ್ಕೂ ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಫಲಾನುಭವಿಗಳು ಇದ್ದಾರೆ ಅನ್ನುವುದನ್ನ ನೋಡುವುದಾದ್ರೆ, ಫಲಾನುಭವಿಗಳ ಸಂಖ್ಯೆಯಲ್ಲಿ ಹೆಬ್ಬಾಳ್ಕರ್‌ ತವರು ಜಿಲ್ಲೆ ಬೆಳಗಾವಿ ಮೊದಲ ಸ್ಥಾನದಲ್ಲಿದೆ. ಬರೋಬ್ಬರಿ 9 ಲಕ್ಷ95 ಸಾವಿರ ಮಹಿಳೆಯರ ಅಕೌಂಟ್‌ಗೆ ಇಲ್ಲಿ ಎರಡು ಸಾವಿರ ಹಣ ಬರಲಿದೆ. ನಂತರದಲ್ಲಿ ಬೆಂಗಳೂರು ಗ್ರಾಮಾಂತರ ಇದ್ದು, ಇಲ್ಲಿ 9 ಲಕ್ಷ60 ಸಾವಿರ ಫಲಾನುಭವಿಗಳಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 6 ಲಕ್ಷ29 ಸಾವಿರ ಮನೆ ಒಡತಿಯರ ಅಕೌಂಟ್‌ಗೆ ಹಣ ಸೇರಿದ್ರೆ, ತುಮಕೂರು ಜಿಲ್ಲೆಯ 5 ಲಕ್ಷ78 ಸಾವಿರ ಮಹಿಳೆಯರು ಲಿಸ್ಟ್‌ನಲ್ಲಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಫಲಾನುಭವಿಗಳಿದ್ದು, ಇಲ್ಲಿ 1 ಲಕ್ಷ5 ಸಾವಿರ ಮಹಿಳೆಯರ ಅಕೌಂಟ್‌ಗೆ ಮಾತ್ರ ಗೃಹಲಕ್ಷ್ಮಿ ಹಣ ಸೇರಲಿದೆ.

ಇನ್ನು BBMP ವ್ಯಾಪ್ತಿಯಲ್ಲೂ ಗೃಹಲಕ್ಷ್ಮೀ ಯೋಜನೆಗೆ ಅದ್ಧೂರಿ ಚಾಲನೆ ನೀಡಲು ತಯಾರಿ ನಡೆದಿದೆ. ಪ್ರತಿ ವಾರ್ಡ್​ನಲ್ಲಿ ದೊಡ್ಡ LED ಸ್ಕ್ರೀನ್ ಆಳವಡಿಸಿ ಗೃಹಲಕ್ಷ್ಮೀ ಚಾಲನೆ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಮೂಲಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಿಳಾ ಮತದಾರರನ್ನ ಸೆಳೆಯೋದಕ್ಕೆ ಕಾಂಗ್ರೆಸ್ ತಂತ್ರ ರೂಪಿಸಿದೆ. ಇಂಟ್ರಸ್ಟಿಂಗ್ ಅಂದ್ರೆ, ಗೃಹಲಕ್ಷ್ಮೀ ಯೋಜನೆ ಜಾರಿಗೆ ಯಶವಂತಪುರ ಬಿಜೆಪಿ ಶಾಸಕ ಎಸ್‌.ಟಿ ಸೋಮಶೇಖರ್‌ ಇನ್ನಿಲ್ಲದ ಉತ್ಸಾಹ ತೋರುತ್ತಿದ್ದಾರೆ. ಕಾಂಗ್ರೆಸ್ ಸೇರ್ಪಡೆಯಾಗ್ತಾರೆ ಎನ್ನುವ ಸುದ್ದಿಯ ನಡುವೆ ಸೋಮಶೇಖರ್, ಗೃಹಲಕ್ಷ್ಮಿ ಯೋಜನೆ ಜಾರಿ ಸಂಬಂಧ ತಮ್ಮ ಕ್ಷೇತ್ರದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಸಿದ್ದಾರೆ. ಇದು ಭಾರೀ ಕುತೂಹಲ ಕೆರಳಿಸಿದೆ.

ಒಟ್ಟಾರೆ ಲೋಕಸಭೆ ಚುನಾವಣೆಯಲ್ಲಿ ಮಿಷನ್ 20 ಗುರಿ ಸಾಧನೆಗಾಗಿ ಕರ್ನಾಟಕ ಕಾಂಗ್ರೆಸ್ ಪಾಳಯ ಸರ್ವ ಪ್ರಯತ್ನ ನಡೆಸುತ್ತಿದೆ.