ಕಲಬುರಗಿ: ವಿವಾದಿತ ಜಾಗ ದತ್ತಪೀಠ(Dattapeeta)ದಲ್ಲಿ ಕೋರ್ಟ್ ಆದೇಶ ಉಲ್ಲಂಘನೆಯಾಗಿದ್ದು, ಹೋಮ-ಹವನ ನಡೆಯುವ ಸ್ಥಳದಲ್ಲಿ ಮಾಂಸಹಾರ ಸೇವನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಅಗುತ್ತಿದೆ. ದತ್ತಪೀಠದಲ್ಲಿ ಮಾಂಸಹಾರ(Meat) ಸೇವನೆಯನ್ನು ಖಂಡಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(C.T.Ravi), ಮಾಂಸಹಾರ ಸೇವನೆ ಬಗ್ಗೆ ನಿನ್ನೆ ರಾತ್ರಿ ನನ್ನ ಗಮನಕ್ಕೆ ಬಂದಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಅಗ್ರಹಿಸಿದರು.
ಚಿಕ್ಕಮಗಳೂರು ತಾಲೂಕಿನಲ್ಲಿರುವ ವಿವಾದಿತ ಸ್ಥಳ ದತ್ತಪೀಠದಲ್ಲಿ, ಮತ್ತೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಹೋಮ ಹವನ ನಡೆಯುವ ಸ್ಥಳದಲ್ಲಿ ಮಾಂಸಹಾರ ಸೇವನೆ ನಡೆದಿದೆ. ಗೋರಿ ಪೂಜೆ ಮಾಡಿರುವ ಆರೋಪವೂ ಕೇಳಿಬಂದಿದೆ. ಈ ಸಂಬಂಧ ಹಿಂದೂಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮಾಂಸಾಹಾರ ಮಾಡಿದ ವಿಚಾರ ಸಂಬಂಧ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ದತ್ತಪೀಠದಲ್ಲಿ ಮಾಂಸಹಾರ ಸೇವನೆ ವಿಚಾರ ನಿನ್ನೆ ರಾತ್ರಿ ನನ್ನ ಗಮನಕ್ಕೆ ಬಂದಿದೆ. ಇದು ಅಕ್ಷಮ್ಯ ಅಪರಾಧವಾಗಿದೆ. ಯಾರ ಕುಮ್ಮಕ್ಕು ಇದ್ದರು ಕೂಡ ಅಲ್ಲಿ ಆ ರೀತಿ ಆಗದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ. ಇದನ್ನು ನಿಯಂತ್ರಿಸಬೇಕಾಗಿದ್ದವರು ಉತ್ತರಿಸಬೇಕಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಜಿಲ್ಲಾಧಿಕಾರಿಯವರು ಘಟನೆ ಸಂಬಂಧ ತನಿಖೆ ನಡೆಸಲು ಸೂಚಿಸಿದ್ದಾರೆ. ಅಲ್ಲಿನ ಜವಾಬ್ದಾರಿ ಯಾರಿಗೆ ನೀಡಲಾಗಿತ್ತೋ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದರು.
ದತ್ತಪೀಠದ ಮುನ್ನೂರು ಮೀಟರ್ ವ್ಯಾಪ್ತಿಯಲ್ಲಿ ಮಾಂಸಹಾರ, ಪ್ರಾಣಿ ಬಲಿಗೆ ನಿಷೇಧ ಹೇರಲಾಗಿದೆ. ಆದರು ಕೂಡ ಅಲ್ಲಿ ಪ್ರಾಣಿಬಲಿ ನಡೆದಿದೆ. ಅಲ್ಲಿ ಹೇಗೆ ಮಾಂಸಹಾರ ಸೇವನೆ ಮಾಡಿದ್ದಾರೆ ಎಂಬ ವಿಚಾರ ತನಿಖೆಯಾಗಬೇಕು. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕಾಂಗ್ರೆಸ್ ನಲ್ಲಿ ಆಂತರಿಕೆ ಪ್ರಜಾಪ್ರಭುತ್ವ ಇಲ್ಲಾ
ಭಯೋತ್ಪಾದಕರಿಗೂ ಬಿರಿಯಾನಿ ತಿನ್ನಿಸುವ ಕಾಲವೊಂದು ಒತ್ತು. ಆದರೆ ಈಗ ಭಯೋತ್ಪಾದಕರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಅವರನ್ನು ನಾಶ ಮಾಡುವ ಕೆಲಸವಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ದೇಶವನ್ನು ದುರ್ಬಲಗೊಳಿಸುವ ಸಂಚನ್ನು ಭಯೋತ್ಪಾದಕರು ಮಾಡುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲಾ. ಈ ಪಕ್ಷದಲ್ಲಿ ಮಾತ್ರವಲ್ಲ, ಎನ್.ಸಿ.ಪಿ, ಆರ್ಜೆಡಿ, ಜೆಡಿಎಸ್, ಸಮಾಜವಾದಿ ಯಾವುದೇ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲಾ ಎಂದರು.
ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರ ಕುಟುಂಬದವರು ನಮ್ಮ ನೇತಾರರಾಗಲು ಸಾಧ್ಯವಿಲ್ಲ. ಇಲ್ಲಿ ಸಾಮಾನ್ಯ ಕಾರ್ಯಕರ್ತ ದೇಶದ ಪ್ರಧಾನಿ ಆಗಲು ಸಾಧ್ಯ. ಕಾರ್ಯಕರ್ತರೇ ಮಾಲೀಕರಾಗಿರುವ ಪಕ್ಷ ಬಿಜೆಪಿ ಎಂದರು.
ಚುನಾವಣೆ ಸಂಬಂಧ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಕರ್ನಾಟಕದಲ್ಲಿ ಬಿಜೆಪಿ 150 ಸ್ಥಾನ ಗೆಲ್ಲಲಿದೆ. ಸದ್ಯದ ಸರ್ಕಾರದಲ್ಲಿ ಹೊರಗಿನಿಂದ ಬಂದವರನ್ನು ಮಂತ್ರಿ ಮಾಡುವ ಅನಿವಾರ್ಯತೆ ಇತ್ತು. ನಮ್ಮ ಪಕ್ಷಕ್ಕೆ ಪೂರ್ಣ ಬಹುಮತ ಬಂದರೆ ಕಲಬುರಗಿಗೆ ಇಬ್ಬರಿಗೆ ಮಂತ್ರಿ ಸ್ಥಾನ ನೀಡಲಾಗುತ್ತದೆ. ಪಕ್ಷಕ್ಕೆ ಪೂರ್ಣ ಬಹುಮತ ಬಂದರೆ ಯಾರ ಹಂಗು ಇರುವುದಿಲ್ಲ. ಕಾಂಗ್ರೆಸ್ನವರು ಕಂಬಿ ಇಲ್ಲದೆ ರೈಲು ಬಿಡುತ್ತಿದ್ದರು. ಬಿಜೆಪಿ ಕಂಬಿ ಮೇಲೆ ರೈಲು ಬಿಡುವ ಕೆಲಸ ಮಾಡುತ್ತಿದೆ ಎಂದರು.
Published On - 3:21 pm, Mon, 16 May 22