ಬಿಜೆಪಿಯ ಲಿಂಗಾಯತ ಮತ ಬ್ಯಾಂಕ್ ಮೇಲೆ ಕಾಂಗ್ರೆಸ್ ಕಣ್ಣು: ವೀರಶೈವ ಸಮುದಾಯವನ್ನು ಸೆಳೆಯಲು ತಂತ್ರಗಾರಿಕೆ
ದಲಿತ ಮತ ಬ್ಯಾಂಕ್ಗೂ ಕಾಂಗ್ರೆಸ್ ಕೈ ಹಾಕಿದೆ. ವಾರದ ಹಿಂದಷ್ಟೇ ಹಿಂದುಳಿದ ವರ್ಗಗಳು ಬಿಜೆಪಿ ಜೊತೆಗೆ ಕೈ ಜೋಡಿಸುವಂತೆ ಸ್ವಾಮೀಜಿಗಳು ಕರೆ ನೀಡಿದ್ದರು.
ಬೆಂಗಳೂರು: ಬಿಜೆಪಿಯ ಲಿಂಗಾಯತ ಮತ ಬ್ಯಾಂಕ್ ಮೇಲೆ ಕಾಂಗ್ರೆಸ್ (Congress) ಕಣ್ಣಿಟ್ಟಿದೆ. ಹಳೆ ತಪ್ಪು ಸರಿಪಡಿಸಿ ಒಗ್ಗಟ್ಟಿನ ಮಂತ್ರ ಪಠಿಸಲು ಸಜ್ಜಾಗಿದೆ. ವೀರಶೈವ ಸಮುದಾಯವನ್ನು ಸೆಳೆಯಲು ತಂತ್ರಗಾರಿಕೆ ರೂಪಿಸಲಾಗುತ್ತಿದೆ. ಮೂರು ಪ್ರಮುಖ ಅಂಶಗಳನ್ನು ಹೈಕಮಾಂಡ್ ಗಮನಕ್ಕೆ ತರಲು ಲಿಂಗಾಯತ ಶಾಸಕರ ನಿರ್ಧಾರ ಮಾಡಿದ್ದು, ಕಾಂಗ್ರೆಸ್ನಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಮತ್ತಷ್ಟು ಪ್ರಾತಿನಿಧ್ಯ ನೀಡಲು ಪ್ಲ್ಯಾನ್ ಮಾಡಲಾಗುತ್ತಿದೆ. ಲಿಂಗಾಯತ ಸಮಯದಾಯದ ಎಲ್ಲ ಒಳಪಂಗಡಗಳ ಶಾಸಕರು ಒಗ್ಗೂಡಲು ಸೂಚಿಸಲಾಗಿದೆ. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಿಂದ ಕಾಂಗ್ರೆಸ್ ಲಿಂಗಾಯತ ಶಾಸಕರಲ್ಲಿ ಒಡಕು ಮೂಡಿದೆ. ಆದರೆ ಇದೀಗ 2018ರ ತಪ್ಪನ್ನು ಮರುಕಳಿಸದಂತೆ ನೋಡಿಕೊಳ್ಳಲು ತೀರ್ಮಾನ ಮಾಡಲಾಗಿದೆ. ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದ ಬಳಿಕ ಲಿಂಗಾಯತ ನಾಯಕತ್ವಕ್ಕೆ ಪೈಪೋಟಿ ನಡೆಯುತ್ತಿದೆ.
ಈ ಸ್ಥಾನವನ್ನು ಕಾಂಗ್ರೆಸ್ ಲಿಂಗಾಯತ ಶಾಸಕರು ಒಗ್ಗೂಡಿ ಭರ್ತಿ ಮಾಡಲು ತೀರ್ಮಾನ ಮಾಡಲಾಗಿದೆ. ಎಲ್ಲ ಒಳಪಂಗಡಗಳ ಶಾಸಕರು ಸೇರಿ ಓಬಿಸಿ ಪಟ್ಟಿಗೆ ಸೇರಿಸಲು ಹೋರಾಟಕ್ಕೆ ನಿರ್ಧರಿಸಲಾಗಿದೆ. ವೀರಶೈವ ಲಿಂಗಾಯತ ಶಾಸಕರಿಗೆ ಹೆಚ್ಚಿನ ಸ್ಥಾನ ಮಾನ ನೀಡುವಂತೆ ಹೈಕಮಾಂಡ್ಗೆ ಒತ್ತಡ ಹೇರಲು ತೀರ್ಮಾನ ಮಾಡಲಾಗುತ್ತಿದೆ. ಎಂಬಿ ಪಾಟೀಲ್, ಈಶ್ವರ್ ಖಂಡ್ರೆ ಸೆರಿ ಹಲವರು ಒಗ್ಗೂಡಿ ಕೆಲಸ ಮಾಡಬೇಕು ಎಂದು ನಿರ್ಧಾರ ಮಾಡಲಾಗಿದೆ. ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಅಲ್ಲ ಎಂಬ ಸಂದೇಶ ರವಾನಿಸಲು ಸೂಚಿಸಲಾಗಿದೆ. ವೀರಶೈವ ಮತ್ತು ಲಿಂಗಾಯತ ಸಮುದಾಯ ಒಂದೇ ಎಂದು ರಾಜ್ಯಾದ್ಯಂತ ಜಾಗೃತಿ ಕಾರ್ಯಕ್ರಮ ಆಯೋಜನೆಗೆ ನಿರ್ಧರಿಸಲಾಗಿದೆ. ವಿಜಯೇಂದ್ರ ರಾಜಕೀಯ ಎಂಟ್ರಿಯಿಂದಲೂ ಅಂತ ಬದಲಾವಣೆ ಸಾಧ್ಯವಿಲ್ಲ ಎಂಬ ವಿಶ್ವಾಸದಲ್ಲಿರುವ ಕೈ ಶಾಸಕರಿದ್ದಾರೆ. ಯಡಿಯೂರಪ್ಪಗೆ ಇರುವ ಇಮೇಜ್ ವಿಜಯೇಂದ್ರಗೆ ಮುಂದುವರಿಯುವುದಿಲ್ಲ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರಗೆ ಮಂತ್ರಿ ಸ್ಥಾನ ನೀಡಿದರೆ ತಂತ್ರಗಾರಿಕೆ ಬದಲಾವಣೆ ಬಗ್ಗೆಯೂ ಲಿಂಗಾಯತ ಕಾಂಗ್ರೆಸ್ ಶಾಸಕರು ಚರ್ಚೆ ಮಾಡಿದ್ದಾರೆ.
ದಲಿತ ಮತ ಬ್ಯಾಂಕ್ಗೂ ಕಾಂಗ್ರೆಸ್ ಕೈ ಹಾಕಿದೆ. ವಾರದ ಹಿಂದಷ್ಟೇ ಹಿಂದುಳಿದ ವರ್ಗಗಳು ಬಿಜೆಪಿ ಜೊತೆಗೆ ಕೈ ಜೋಡಿಸುವಂತೆ ಸ್ವಾಮೀಜಿಗಳು ಕರೆ ನೀಡಿದ್ದರು. ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿಯಿಂದ ದಲಿತರು ಹಿಂದುಳಿದ ವರ್ಗ ಬಿಜೆಪಿ ಜೊತೆಗಿರುವಂತೆ ಕರೆ ನೀಡಲಾಗಿತ್ತು. ಇದರ ಬೆನ್ನಲ್ಲೇ ದಲಿತ ಕೇಂದ್ರಿತ ಕಾರ್ಯಕ್ರಮಗಳ ಆಯೋಜನೆಗೆ ಎಐಸಿಸಿ ಸೂಚನೆ ನೀಡಲಾಗಿತ್ತು. ಎಐಸಿಸಿ ಸೂಚನೆ ಮೇರೆಗೆ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಹೆಸರಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಧರ್ಮಸೇನಾ ಹೇಳಿಕೆ ನೀಡಿದ್ದಾರೆ. ಡಾ.ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಸ್ಮರಣೆ ಕಾರ್ಯಕ್ರಮ ಮಾಡುವಂತೆ ಕೆಪಿಸಿಸಿ ಸೂಚಿಸಿದೆ. ಹಾಲಿ ಶಾಸಕರು ಹಾಗು ಮಾಜಿ ಶಾಸಕರು ಹಾಗು ಹಿರಿಯ ಮುಖಂಡರುಗಳಿಗೆ ಸಭೆಗೆ ಆಹ್ವಾನಿಸಲಾಗಿದೆ. ಸಭೆಯನ್ನ ಯಾವ ಮಟ್ಟದಲ್ಲಿ ನಡೆಯಬೇಕು ಅನ್ನೋ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡ್ತೇವೆ. 18 ತಾರೀಖು ನಡೆಯಲಿರುವ ಸಭೆಗೆ ಆಗಮಿಸಬೇಕು. ರಾಜ್ಯದಲ್ಲಿ ದಲಿತರು ಅತಿಹೆಚ್ಚು ಮತದಾರರಿದ್ದಾರೆ. ಕಾಂಗ್ರೆಸ್ ದಲಿತರಿಗೆ ಅನ್ಯಾಯ ಮಾಡ್ತಿದೆ ಎಂದು ಬಿಜೆಪಿ ಆರೋಪ ಮಾಡ್ತಿದೆ. ಅದನ್ನ ನಾವು ದಲಿತರಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಹೇಳಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.