ಮಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಕಳೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಇಲ್ಲದೆ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ ಇದೀಗ ಮತ್ತೆ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಶತಾಯಗತಾಯವಾಗಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಹೊದಲ್ಲಿ ಬಂದಲ್ಲಿ ಮತದಾರರನ್ನು ಸೆಳೆಯಲು ವಿವಿಧ ಆಫರ್ಗಳನ್ನು ಘೋಷಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಅವರು 200 ಯುನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿದರೆ, ಸಿದ್ದರಾಮಯ್ಯ (Siddaramaiah) ಅವರು 10 ಕೆಜಿ ಉಚಿತ ಅಕ್ಕಿಯ ಆಫರ್ ನೀಡಿದ್ದಾರೆ. ನಾ ನಾಯಕಿ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬಜೆಟ್ ಬಗ್ಗೆ ಘೋಷಣೆ ಮಾಡಲಾಗಿದೆ. ಇದೀಗ ಕೋಮು ಸಂಘರ್ಷದಿಂದಲೇ ಅಪಕೀರ್ತಿಗೆ ಒಳಗಾಗಿರುವ ಕರಾವಳಿ ಕರ್ನಾಟಕ (Coastal Karnataka) ಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆ (Congress manifesto) ಬಿಡುಗಡೆ ಮಾಡುವುದಾಗಿ ಮಾಜಿ ಸಚಿವ ಡಾ.ಜಿ.ಪರಮೇಶ್ವರ (Dr.G.Parameshwar) ಘೋಷಣೆ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದರು. ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಕರಾವಳಿ ಕರ್ನಾಟಕಕ್ಕೆ ವಿಶೇಷವಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ಕಾಂಗ್ರೆಸ್ ಪ್ರಾಣಾಳಿಕ ಸಮಿತಿ ಪ್ರಥಮವಾಗಿ ಭೇಟಿ ಕೊಟ್ಟು ಹಲವು ಗುಂಪುಗಳ ಅಭಿಪ್ರಾಯ ಸಂಗ್ರಹಿಸಿದ್ದೇವೆ ಎಂದರು.
ಇದನ್ನೂ ಓದಿ: ‘ನಾ ನಾಯಕಿ’ ಕಾಂಗ್ರೆಸ್ ಸಮಾವೇಶಕ್ಕೆ ಬರುವವರಿಗೆ ಹಣ ಹಂಚಿಕೆ ಆರೋಪ; ವಿಡಿಯೋ ಬಿಡುಗಡೆ ಮಾಡಿದ ಬಿಜೆಪಿ
ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಕೆಲವು ದಿನಗಳ ಬಾಕಿ ಇವೆ. ಹೀಗಾಗಿ ಈಗ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ ಅನಿಸಬಹುದು. ಇತ್ತೀಚಿಗೆ ಉದಯ್ ಪುರದಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಅದೇ ರೀತಿ ಈಗ ಕರ್ನಾಟಕದಲ್ಲಿ ಸಂಗ್ರಹಿಸುತ್ತಿದ್ದೇವೆ. ಕಳೆದ ಮೂರು ತಿಂಗಳಿಂದ ಸಂಘಸಂಸ್ಥೆಗಳ ಜೊತೆ ವಿವಿಧ ಸಮೂಹಗಳ ಜೊತೆ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಈ ಭಾಗದ ಸಮಸ್ಯೆಗಳ ಬಗ್ಗೆಯೂ ಅಭಿಪ್ರಾಯ ಸಂಗ್ರಹಿಸಿದ್ದೇವೆ ಎಂದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಮನೆಯ ಮಹಿಳೆಯರಿಗೆ ಬೇಷರತ್ತಾಗಿ 2,000 ರೂ. ನೀಡಲಾಗುವುದು. ಇದಕ್ಕಾಗಿ ಗೃಹಲಕ್ಷ್ಮೀ ಯೋಜನೆ ರೂಪಿಸಲಾಗುವುದು ಎಂದು ‘ನಾ ನಾಯಕಿ’ ಸಮಾವೇಶದಲ್ಲಿ ಘೋಷಿಸಲಾಗಿತ್ತು. ಜತೆಗೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಮೀಸಲಾತಿ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು.
ಕಾಂಗ್ರೆಸ್ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಉದ್ಯೋಗದಲ್ಲಿ ಮಹಿಳೆಯರಿಗೆ ಇರುವ ಮೀಸಲಾತಿಯನ್ನು ಶೇ 30ರಿಂದ 33 ಹೆಚ್ಚಳ ಮಾಡಿದ್ದೇವೆ. ಮತ್ತೆ ನಾವು ಅಧಿಕಾರಕ್ಕೆ ಬಂದರೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುತ್ತೇವೆ. ಮಹಿಳೆಯರಿಗೆ ರಾಜಕೀಯದಲ್ಲಿ ಶೇ 33 ಮೀಸಲಾತಿ ನೀಡುತ್ತೇವೆ ಎಂದು ನಾ ನಾಯಕಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹೇಳಿದ್ದರು.
ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ನಾ ನಾಯಕಿ ಸಮಾವೇಶ ಬೆನ್ನಲ್ಲೆ ಮಹಿಳಾ ಯೋಜನೆಗಳ ಬಗ್ಗೆ ಜಾಹಿರಾತು ಪ್ರಕಟಿಸಿದ ಬಿಜೆಪಿ ಸರ್ಕಾರ
ಬಾಗಲಕೋಟೆಯಲ್ಲಿ ನಡೆದ ಕಾಂಗ್ರೆಸ್ನ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಬಿಪಿಎಲ್ ಕುಟುಂಬಗಳಿಗೆ ಈವರೆಗೆ ನೀಡುತ್ತಿದ್ದ ಅಕ್ಕಿಯನ್ನು ಬೊಮ್ಮಾಯಿ ಸರ್ಕಾರ ಕಡಿಮೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬಕ್ಕೆ 10 ಕೆ.ಜಿ. ಉಚಿತ ಅಕ್ಕಿ ನೀಡುವುದಾಗಿ ಆಫರ್ ನೀಡಿದ್ದರು. ಇದರ ಜೊತೆಗೆ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವುದಾಗಿಯೂ ಭರವಸೆ ನೀಡಿದ್ದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಮನೆಯ ಮಹಿಳೆಯರಿಗೆ ಬೇಷರತ್ತಾಗಿ 2,000 ರೂ. ನೀಡಲಾಗುವುದು. ಇದಕ್ಕಾಗಿ ಗೃಹಲಕ್ಷ್ಮೀ ಯೋಜನೆ ರೂಪಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಘೋಷಣೆ ಮಾಡಿದ್ದರು. ನಾ ನಾಯಕಿ ಕಾರ್ಯಕ್ರಮದಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದರು.
ರಾಜಕೀಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:48 pm, Sat, 21 January 23