ಬಿಜೆಪಿ ಜತೆ ಮೈತ್ರಿಗೆ ಮುನಿಸು.. ಕೋಪ ತಣಿಸಲು ಕುಮಾರಸ್ವಾಮಿ ಸರ್ಕಸ್: ಆದ್ರೂ ಕೆಲವರು ಪಕ್ಷದಲ್ಲಿ ಉಳಿಯುವುದು ಡೌಟ್

| Updated By: ರಮೇಶ್ ಬಿ. ಜವಳಗೇರಾ

Updated on: Oct 02, 2023 | 7:21 AM

ಬಿಜೆಪಿ ಜೊತೆಗೆ ಮೈತ್ರಿ.. ದಳ ಮನೆಯಲ್ಲಿ ಫಜೀತಿ.. ಕಮಲ ದೋಸ್ತಿಯಿಂದ ದಳ ಮನೆಯಲ್ಲಿ ತಳಮಳ ಸೃಷ್ಟಿಯಾಗಿದ್ದು, ಅಸಮಾಧಾನದ ಬೆಂಕಿ ಎದ್ದಿದೆ. ಈ ಬೆಂಕಿಯನ್ನ ನಂದಿಸಲು ಅಖಾಡಕ್ಕಿಳಿದಿದ್ದ ಹೆಚ್‌ಡಿಕೆ, ನಾಯಕರಿಗೆ ನೀತಿ ಪಾಠ ಬೋಧನೆ ಮಾಡಿದ್ದಾರೆ. ಆದರೂ ಕೆಲ ನಾಯಕರು ಜೆಡಿಎಸ್​ ತೊರೆಯುವ ಚಿಂತನೆಯಲ್ಲಿದ್ದಾರೆ.

ಬಿಜೆಪಿ ಜತೆ ಮೈತ್ರಿಗೆ ಮುನಿಸು.. ಕೋಪ ತಣಿಸಲು ಕುಮಾರಸ್ವಾಮಿ ಸರ್ಕಸ್: ಆದ್ರೂ ಕೆಲವರು ಪಕ್ಷದಲ್ಲಿ ಉಳಿಯುವುದು ಡೌಟ್
ಜೆಡಿಎಸ್​ ಸಭೆ
Follow us on

ಬೆಂಗಳೂರು, (ಅಕ್ಟೋಬರ್ 02): ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನ ಗೆಲ್ಲದೇ ಹತಾಶೆಯಲ್ಲಿರುವ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (HD Kumaraswamy), ಲೋಕಸಭಾ ಚುನಾವಣೆಗೆ (Loksabha Elections 2024) ಬಿಜೆಪಿ ಜೊತೆ ಮೈತ್ರಿ(JDS And BJP alliance) ಮಾಡಿಕೊಂಡಿದ್ದಾರೆ. ಅತ್ತ ಮೈತ್ರಿ ಫೈನಲ್​​ ಆಗುತ್ತಿದ್ದಂತೆಯೇ ಜೆಡಿಎಸ್​ನ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ವರಿಷ್ಠರ ವಿರುದ್ಧವೇ ಮುನಿಸಿಕೊಂಡಿದ್ದಾರೆ. ಅದರಲ್ಲೂ ಮುಸ್ಲಿಮರನ್ನು ನಂಬಿಯೇ ನಾನು ಕುಳತಿಲ್ಲ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಅಲ್ಪಸಂಖ್ಯಾತ ಮುಖಂಡರ ಸಿಟ್ಟಿಗೆ ತುಪ್ಪ ಸುರಿದಿದೆ

ಬಿಜೆಪಿ ಜತೆ ಮೈತ್ರಿಗೆ ಮುನಿಸು.. ಕೋಪ ತಣಿಸಲು ಹೆಚ್‌ಡಿಕೆ ಸರ್ಕಸ್

ಕಮಲ-ದಳ ದೋಸ್ತಿ ಬೆನ್ನಲ್ಲೆ JDSನಲ್ಲಿ ಅಸಮಾಧಾನದ ಹೊಗೆ ದಿನೇ ದಿನೇ ತೀವ್ರಗೊಳ್ಳುತ್ತಿದೆ. ಅತೃಪ್ತಿಯ ಕಿಚ್ಚನ್ನ ತಣಿಸಲು ಖುದ್ದು ಹೆಚ್‌ಡಿಕೆ ಅಖಾಡಕ್ಕಿಳಿದ್ದಾರೆ. ನಿನ್ನೆ ಬಿಡದಿಯ ತಮ್ಮ ತೋಟದ ಮನೆಯಲ್ಲಿ ಸಭೆ ನಡೆಸಿದ್ರು. ಅತೃಪ್ತ ನಾಯಕರು ಗೈರಾಗಿದ್ದರೂ ಇದ್ದ ನಾಯಕರಿಗೇ ಹೆಚ್‌ಡಿಕೆ ನೀತಿ ಪಾಠ ಮಾಡಿದ್ದಾರೆ. ಪಕ್ಷಬಿಟ್ಟು ಹೋಗದಂತೆ ಪ್ರಮಾಣ ಮಾಡಿಸಿದ್ದಾರೆ. JDS ಮುಖಂಡರಿಗೆ ಜಿ.ಟಿ.ದೇವೇಗೌಡ ಪ್ರಮಾಣ ಬೋಧನೆ ಮಾಡಿದ್ರು. ಬಳಿಕ ಮಾತನಾಡಿದ ಹೆಚ್‌.ಡಿ ಕುಮಾರಸ್ವಾಮಿ, ಯಾವ ಶಾಸಕರು ಬಿಟ್ಟು ಹೋಗಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ: ಜೆಡಿಎಸ್- ಬಿಜೆಪಿ ಮೈತ್ರಿ ಉದ್ದೇಶವನ್ನ ಕೊನೆಗೂ ಬಾಯ್ಬಿಟ್ಟ ಹೆಚ್​ಡಿ ಕುಮಾರಸ್ವಾಮಿ; ಇಲ್ಲಿದೆ ವಿಡಿಯೋ

ಸಭೆಯಿಂದ ದೂರ ಉಳಿದ ಸಿಎಂ ಇಬ್ರಾಹಿಂ, ಶರಣಗೌಡ!

ಈ ಸಭೆಗೆ, ಮೈತ್ರಿ ಬಗ್ಗೆ ಅಸಮಾಧಾನ ಹೊರಹಾಕಿದ್ದ ದೇವದುರ್ಗ ಶಾಸಕ ಕರೆಮ್ಮ ಭಾಗವಹಿಸಿದ್ದರು. ಇನ್ನೂ ಗುರುಮಿಟ್ಕಲ್ ಶಾಸಕ ಶರಣಗೌಡ ಕಂದಕೂರ್, ಹನೂರು ಶಾಸಕ ಮಂಜುನಾಥ್ ಸೇರಿದಂತೆ ಅನೇಕ ಮುಸ್ಲಿಂ ಮುಖಂಡರು ಸಭೆಯಿಂದ ದೂರ ಉಳಿದಿದ್ದಾರೆ. ಹೀಗಾಗಿ ಇಬ್ರಾಹಿಂಗೆ ಖುದ್ದು ದೇವೇಗೌಡರೇ ಕರೆ ಮಾಡಿ ಸಭೆಗೆ ಆಹ್ವಾನಿಸಿದ್ರು. ಆದ್ರೆ, ಒಂದು ಕಾಲು ಆಚೆ ಇಟ್ಟಿರೋ ಇಬ್ರಾಹಿಂ, ಅಕ್ಟೋಬರ್​​ 16 ರಂದು ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದಿದ್ದಾರೆ.

ಅ.8 ರಂದು ಜೆಡಿಎಸ್​​ಗೆ ಗುಡ್​​​ಬೈ ಹೇಳಲು ನಿರ್ಧಾರ

ಇತ್ತ ಬಿಡದಿಯಲ್ಲಿ ಹೆಚ್‌ಡಿಕೆ ಅತೃಪ್ತ ಸಂಧಾನ ಮಾಡ್ತಿದ್ರೆ, ಅತ್ತ ಕಲಬುರಗಿಯಲ್ಲೂ ಅಲ್ಪಸಂಖ್ಯಾತ ನಾಯಕರ ಅಸಮಾಧಾನ ಸ್ಫೋಟಗೊಂಡಿದೆ. ನಿನ್ನೆ ಕಲಬುರಗಿ ನಗರದ ರಾಯಲ್ ಪ್ಯಾಲೇಸ್ ಸಭಾಂಗಣದಲ್ಲಿ ಸಭೆ ನಡೆಯಿತ್ತು. ಮಾಜಿ ಸಚಿವ ಎಂ.ಬಿ.ನಬಿ ಹಾಗೂ JDS ರಾಜ್ಯ ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ನಾಸೀರ್ ಹುಸೇನ್ ಸೇರಿದಂತೆ ಮುಖಂಡರು ಭಾಗಿಯಾಗಿದ್ದರು. ಅಕ್ಟೋಬರ್ 8ರಂದು ಬೆಂಗಳೂರಿನಲ್ಲಿ ರಾಜ್ಯದ JDS ಅಲ್ಪಸಂಖ್ಯಾತ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಿ, ಪಕ್ಷದಿಂದ ಹೊರನಡೆಯುವ ಬಗ್ಗೆ ನಿರ್ಧಾರ ಪ್ರಕಟಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಜೆಡಿಎಸ್​​​ ವರಿಷ್ಠರು ನಡೆಸಿದ ನಿನ್ನೆಯ ಸಭೆ ಅಷ್ಟರ ಮಟ್ಟಕ್ಕೆ ಸಕ್ಸಸ್ ಆಗಿಲ್ಲ. ಹಾಗಿದ್ರೆ ಸಭೆಗೆ ಗೈರಾಗಿದ್ದವರು, ಪಕ್ಷ ಬಿಟ್ಟು ಹೋಗ್ತಾರಾ? ಎನ್ನುವುದೇ ಕುತೂಹಲ ಮೂಡಿಸಿದೆ.

ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ