ಬೆಂಗಳೂರು, (ಜನವರಿ 10): ಮುಂದಿನ ಲೋಕಸಭಾ ಚುನಾವಣೆಗೆ (Lok Sabha Election 2024) ಆಡಳಿತಾರೂಢ ಕಾಂಗ್ರೆಸ್ (Congress) ಸಿದ್ಧತೆ ನಡೆಸಿದ್ದು, 28 ಕ್ಷೇತ್ರಗಳಲ್ಲಿ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲಲು ಪಣ ತೊಟ್ಟಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಅಭ್ಯರ್ಥಿಗಳ ಆಯ್ಕೆ ಹಾಗೂ ಚುನಾವಣೆಗೆ ಸಂಬಂಧಿಸಿದ ಕಾರ್ಯತಂತ್ರ ರೂಪಿಸುತ್ತಿದೆ. ಇದಕ್ಕಾಗಿ ಆಯಾ ಕ್ಷೇತ್ರಗಳಿಗೆ ಸಂಯೋಜರನ್ನು ನೇಮಕ ಮಾಡಲಾಗಿದೆ. ಆದ್ರೆ, ಎಐಸಿಸಿ ಹೊರಡಿಸಿದ್ದ ನೇಮಕಾತಿ ಪಟ್ಟಿಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕಿಮಾರ್ ಬದಲಾವಣೆ ಮಾಡಿದ್ದು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಸ್ಥಾನ ಕಲ್ಪಿಸಲಾಗಿದೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೆಳಗಾವಿ ಜಿಲ್ಲೆಯವರಾಗಿರುವ ಕಾರಣ ಅವರನ್ನು ಚಿಕ್ಕೋಡಿ ಕ್ಷೇತ್ರದ ಸಂಯೋಜಕರನ್ನಾಗಿ ನೇಮಿಸಿ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಚಿಕ್ಕೋಡಿ ಕ್ಷೇತ್ರಕ್ಕೆ ಈ ಹಿಂದೆ ಎಚ್.ಕೆ ಪಾಟೀಲ್ ಅವರನ್ನು ಸಂಯೋಜಕರನ್ನಾಗಿ ಎಐಸಿಸಿ ನೇಮಕ ಮಾಡಿತ್ತು. ಈಗ ಅವರ ಬದಲಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ನೇಮಕ ಮಾಡಲಾಗಿದೆ. ಇನ್ನು ಎಚ್.ಕೆ. ಪಾಟೀಲ್ ಅವರನ್ನು ಹಾವೇರಿ ಜಿಲ್ಲೆಗೆ ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ.
ಇನ್ನು ಮೈಸೂರು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಯೋಜಕರನ್ನು ಅದಲು-ಬದಲು ಮಾಡಲಾಗಿದೆ. ಸಚಿವ ವೆಂಕಟೇಶ್ ಅವರನ್ನು ಈ ಹಿಂದೆ ಮೈಸೂರು ಸಂಯೋಜಕರನ್ನಾಗಿ ನೇಮಕ ಮಾಡಲಾಗಿತ್ತು. ಈಗ ಅವರನ್ನು ಚಾಮರಾಜನಗರಕ್ಕೆ ನಿಯುಕ್ತಿ ಮಾಡಲಾಗಿದೆ.ಹಾಗೇ ಚಾಮರಾಜನಗರದಲ್ಲಿ ಸಂಯೋಜಕರಾಗಿ ನೇಮಕಗೊಂಡಿದ್ದ ಡಾ. ಎಚ್.ಸಿ. ಮಹದೇವಪ್ಪ ಅವರನ್ನು ಚಾಮರಾಜನಗರ ಬದಲು ಮೈಸೂರಿಗೆ ಸಂಯೋಜಕರನ್ನಾಗಿ ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶವನ್ನು ಹೊರಡಿಸಿದ್ದಾರೆ.
ಇನ್ನು ಶಿವಾನಂದ್ ಪಾಟೀಲ್ ಅವರನ್ನು ಹಾವೇರಿಯಿಂದ ತೆಗೆದು ಎಐಸಿಸಿ ಜೊತೆ ಸಂಯೋಜಕರಾಗಿ ನೇಮಿಸಲಾಗಿದೆ. ಬೆಂಗಳೂರು ಗ್ರಾಮಾಂತರಕ್ಕೆ ಬೈರತಿ ಸುರೇಶ್ ಬದಲು ಎಂ.ಸಿ ಸುಧಾಕರ್ ಹಾಗೂ ಕೋಲಾರಕ್ಕೆ ಸುಧಾಕರ್ ಬದಲು ಬೈರತಿ ಸುರೇಶ್ ಅವರನ್ನ ಸಂಯೋಜಕರಾಗಿ ನೇಮಿಸಲಾಗಿದೆ
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:50 pm, Wed, 10 January 24