DK Shivakumar: ಮತ್ತೆ ನೊಣವಿನಕೆರೆ ಅಜ್ಜಯ್ಯನ ಮೊರೆ ಹೋದ ಡಿಕೆ ಶಿವಕುಮಾರ್

ಬೆಂಗಳೂರಿನ ವಿಜಯನಗರದಲ್ಲಿರುವ, ನೊಣವಿನಕೆರೆ ಅಜ್ಜಯ್ಯನ ಶಾಖಾ ಮಠಕ್ಕೆ ಭೇಟಿ ನೀಡಿರುವ ಡಿಕೆ ಶಿವಕುಮಾರ್, ಅಜ್ಜಯ್ಯನ ಪಾದುಕೆ ಮುಂದೆ ಸುಮಾರು ಅರ್ಧ ಗಂಟೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಆ ನಂತರ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆಗೆ ತೆರಳಿದ್ದಾರೆ.

DK Shivakumar: ಮತ್ತೆ ನೊಣವಿನಕೆರೆ ಅಜ್ಜಯ್ಯನ ಮೊರೆ ಹೋದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Follow us
|

Updated on: May 15, 2023 | 6:32 PM

ಬೆಂಗಳೂರು: ದೈವ ಭಕ್ತರಾಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ನೊಣವಿನಕೆರೆ ಅಜ್ಜಯ್ಯನನ್ನು ಬಹಳ ಭಕ್ತಿ ಭಾವದಿಂದ ಕಾಣುತ್ತಾರೆ. ಒಂದಲ್ಲ ಒಂದು ಸಂಕಷ್ಟಗಳಿಂದ ಪಾರಾದ ಬಳಿಕ ಮೊದಲು ದೇವರ ಮೊರೆ ಹೋಗುವ ಅವರು, ಹಲವು ಬಾರಿ ನೊಣವಿನಕೆರೆ ಅಜ್ಜಯ್ಯನ ಭೇಟಿ ಮಾಡಿದ್ದೂ ಇದೆ. ಇತ್ತೀಚೆಗಷ್ಟೇ ಹೆಲಿಕಾಪ್ಟರ್ ಅವಘಡದಿಂದ ಪಾರಾದ ನಂತರ ಅವರು ನೊಣವಿನಕೆರೆ ಅಜ್ಜಯ್ಯನ ಮೊರೆ ಹೋಗಿ, ಜ್ಯೋತಿಷಿಯ ಸಲಹೆಯನ್ನೂ ಪಡೆದಿದ್ದರು. ಇದೀಗ ಮುಖ್ಯಮಂತ್ರಿ ಹುದ್ದೆ ಕೈತಪ್ಪುವ ಭೀತಿಯಲ್ಲಿ ಮತ್ತೆ ಅಜ್ಜಯ್ಯನ ಮೊರೆ ಹೋಗಿದ್ದಾರೆ.

ಬೆಂಗಳೂರಿನ ವಿಜಯನಗರದಲ್ಲಿರುವ, ನೊಣವಿನಕೆರೆ ಅಜ್ಜಯ್ಯನ ಶಾಖಾ ಮಠಕ್ಕೆ ಭೇಟಿ ನೀಡಿರುವ ಡಿಕೆ ಶಿವಕುಮಾರ್, ಅಜ್ಜಯ್ಯನ ಪಾದುಕೆ ಮುಂದೆ ಸುಮಾರು ಅರ್ಧ ಗಂಟೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಆ ನಂತರ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆಗೆ ತೆರಳಿದ್ದಾರೆ. ಕುಟುಂಬ ಸಮೇತ ಅಜ್ಜಯ್ಯನ ಪೀಠಕ್ಕೆ ತೆರಳುತ್ತಿರುವ ಡಿಕೆಶಿ, ಅಲ್ಲಿ ಅಜ್ಜಯ್ಯನ ದರ್ಶನ ಪಡೆದು ಬಳಿಕ ದೆಹಲಿಗೆ ತೆರಳಲಿದ್ದಾರೆ.

ಈ ಮಧ್ಯೆ, ಎಐಸಿಸಿ ವೀಕ್ಷಕರಾದ ಶಿಂಧೆ, ಜಿತೇಂದ್ರ ಸಿಂಗ್, ಬಬಾರಿಯಾ ಎಐಸಿಸಿ ಅಧ್ಯಕ್ಷ ಖರ್ಗೆ ನಿವಾಸಕ್ಕೆ ಭೇಟಿ ನೀಡಿದ್ದು, ಕೆಲವೇ ಕ್ಷಣಗಳಲ್ಲಿ ಶಾಸಕರ ಅಭಿಪ್ರಾಯದ ವರದಿ ಸಲ್ಲಿಸಲಿದ್ದಾರೆ.

ಡಿಕೆ ಶಿವಕುಮಾರ್ ಮುಂದಿನ ಸಿಎಂ; ಅಭಿಮಾನಿಗಳ ಘೋಷಣೆ

ಈ ಮಧ್ಯೆ ಬೆಂಗಳೂರಿನ ಟೌನ್​ಹಾಲ್ ಬಳಿ ಡಿಕೆ ಶಿವಕುಮಾರ್ ಬೆಂಬಲಿಗರು ಜಮಾಯಿಸಿದ್ದು, ಡಿಕೆಶಿ ಮುಂದಿನ ಸಿಎಂ ಎಂದು ಘೋಷಣೆ ಕೂಗುತ್ತಿದ್ದಾರೆ. ನಮ್ಮ ಬೆಂಬಲ ಡಿಕೆ ಶಿವಕುಮಾರ್ ಅವರಿಗೆ ಎಂದು ಘೋಷಣೆ ಕೂಗಿದ ಅವರು, ಕೇಕ್ ಕತ್ತರಿಸುವ ಮೂಲಕ ಡಿಕೆಶಿ ಹುಟ್ಟು ಹಬ್ಬ ಆಚರಣೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ