ಶೀಘ್ರದಲ್ಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಶಿವರಾಜ್ ಸಿಂಗ್ ಚೌಹಾಣ್

|

Updated on: Jan 18, 2025 | 10:34 AM

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದರು. ಬೂತ್ ಕಮಿಟಿ ಅಧ್ಯಕ್ಷರಿಂದ ರಾಜ್ಯಾಧ್ಯಕ್ಷರವರೆಗೆ ಚುನಾವಣೆ ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ ಅವರ ಹೆಸರುಗಳು ಮುನ್ನಲೆಗೆ ಬಂದಿವೆ. ಈ ಚುನಾವಣೆಯು ಪಕ್ಷದ ಒಳಭಾಗದಲ್ಲಿನ ಅಸಮಾಧಾನವನ್ನು ನಿವಾರಿಸುವ ಉದ್ದೇಶ ಹೊಂದಿದೆ.

ಶೀಘ್ರದಲ್ಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಶಿವರಾಜ್ ಸಿಂಗ್ ಚೌಹಾಣ್
ಸಚಿವ ಶಿವರಾಜ್ ಸಿಂಗ್​ ಚೌಹಾಣ್
Follow us on

ಬೆಂಗಳೂರು, ಜನವರಿ 18: ಶೀಘ್ರದಲ್ಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಶುರುವಾಗಲಿದೆ. ಚುನಾವಣೆ ಮೂಲಕ ರಾಜ್ಯ ಬಿಜೆಪಿ (BJP) ಘಟಕ ಅಧ್ಯಕ್ಷರ ಆಯ್ಕೆ ಮಾಡುತ್ತೇವೆ. ಬೂತ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ರಾಜ್ಯಾಧ್ಯಕ್ಷ ಸ್ಥಾನದವರೆಗೂ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್​​ (Shivraj Singh Chauhan) ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲರೂ ಸೇರಿ ಚರ್ಚಿಸಿ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕರ್ನಾಟಕ ವಿಕಾಸಕ್ಕೆ ಆದ್ಯತೆ ಕೊಡುತ್ತೇವೆ ಎಂದು ಕರ್ನಾಟಕ ಬಿಜೆಪಿ ಚುನಾವಣಾಧಿಕಾರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.

ಇನ್ನು, ಕರ್ನಾಟಕಕ್ಕೆ ಬರಬೇಕಾದ ಅನುದಾನ ಕೇಂದ್ರ ಸರ್ಕಾರದಿಂದ ಸಮರ್ಪಕವಾಗಿ ಬರುತ್ತಿಲ್ಲ ಎಂಬ ರಾಜ್ಯ ಕಾಂಗ್ರೆಸ್​ ಮುಖಂಡರ ಆರೋಪದ ವಿಚಾರವಾಗಿ ಮಾತನಾಡಿದ ಅವರು, ಬಿಡುಗಡೆ ಮಾಡಿರುವ ಅನುದಾನ ಸದ್ಬಳಕೆಯಾಗಲಿ. ಅವರು ಅನುದಾನ ಕೇಳದಿದ್ದರೂ ನಾವೇ ಘೋಷಣೆ ಮಾಡಿದ್ದೇವೆ. ಬಹಳಷ್ಟು ಅನುದಾನ ಕೊಟ್ಟರೂ ಕರ್ನಾಟಕ ಸರ್ಕಾರ ಬಳಕೆ ಮಾಡಿಲ್ಲ ಎಂದು ವಾಗ್ದಾಳಿ ಮಾಡಿದರು.

ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕದ ವಿಚಾರದಲ್ಲಿ ಸ್ವಪಕ್ಷದಲ್ಲೇ ವಿರೋಧ ಕೇಳಿಬಂದಿತ್ತು. ಪಕ್ಷದ ಕೆಲ ಹಿರಿಯ ಮುಖಂಡರು ಬಿವೈ ವಿಜಯೇಂದ್ರ ಆಯ್ಕೆಗೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದರು. ಪಕ್ಷದಲ್ಲಿ ಎದ್ದಿದ್ದ ಅಸಮಾಧನ ಹೈಕಮಾಂಡ್​ ಮಧ್ಯ ಪ್ರವೇಶದಿಂದ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಾಗಿ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಹೈಕಮಾಂಡ್​ ನಿರ್ಧರಿಸಿದೆ.

ಇದನ್ನೂ ಓದಿ: ಬಿಜೆಪಿಯಲ್ಲಿ ಬಣ ಕಿತ್ತಾಟ.. ವಿಜಯೇಂದ್ರ ಪರ ಸೋತವರ ಬ್ಯಾಟಿಂಗ್, ಸಭೆಯಲ್ಲಿ ಏನೇನಾಯ್ತು?

ಇನ್ನು, ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಶತಪ್ರಯತ್ನ ನಡೆಸಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದ ರೇಸಿನಲ್ಲಿ ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ ಅವರ ಹೆಸರು ಕೂಡ ಕೇಳಿಬರುತ್ತಿದೆ.

ಹೊಸ ವರ್ಷದಂದು ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯ ನಿವಾಸದಲ್ಲಿ ಭೇಟಿ ಮಾಡಿದ್ದ ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ 1 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಾತುಕತೆ ನಡೆಸಿದ್ದರು. ಈ ಭೇಟಿಯ ವೇಳೆ ಕರ್ನಾಟಕದ ಭಿನ್ನಮತಕ್ಕೆ‌ ಬ್ರೇಕ್ ಹಾಕುವಂತೆ ಅಮಿತ್ ಶಾ ಅವರಿಗೆ ವಿಜಯೇಂದ್ರ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:33 am, Sat, 18 January 25