ಬಿಜೆಪಿಯಲ್ಲಿ ಬಣ ಕಿತ್ತಾಟ.. ವಿಜಯೇಂದ್ರ ಪರ ಸೋತವರ ಬ್ಯಾಟಿಂಗ್, ಸಭೆಯಲ್ಲಿ ಏನೇನಾಯ್ತು?
ಬಿಜೆಪಿಯಲ್ಲಿ ಬಣ ಬಡಿದಾಟ ತಾರಕಕ್ಕೇರಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಎಷ್ಟೇ ಎಚ್ಚರಿಕೆ ಏನೇ ಕೊಟ್ಟರೂ ಪಟ್ಟು ಮಾತ್ರ ಸಡಿಲಿಸುತ್ತಿಲ್ಲ. ಬದಲಾಗಿ 3ನೇ ಹಂತದ ಹೋರಾಟಕ್ಕೂ ಸಜ್ಜಾಗಿದ್ದಾರೆ. ಹೀಗಾಗಿ ಸದಾ ಯತ್ನಾಳ್ರನ್ನ ಟೀಸಿಸೋ ಬದಲು, ಪಕ್ಷ ಸಂಘಟನೆ ನನಗೆ ಮುಖ್ಯ ಎಂದು ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪಕ್ಷವನ್ನ ಮತ್ತಷ್ಟು ಗಟ್ಟಿಗೊಳಿಸೋ ನಿಟ್ಟಿನಲ್ಲಿ ಕೆಲಸ ಶುರು ಮಾಡಿದ್ದಾರೆ. ಇದರ ಮೊದಲ ಭಾಗವೇ ಚುನಾವಣೆಯಲ್ಲಿ ಸೋತಿರುವ ಪರಾಜಿತ ಅಭ್ಯರ್ಥಿಗಳ ಸಭೆ ಮಾಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಸಂದೇಶ ರವಾನಿಸಿದ್ದಾರೆ.
ಬೆಂಗಳೂರು, (ಜನವರಿ 10): ಬಿಜೆಪಿಯಲ್ಲೂ ಬಣ ಕಿಚ್ಚು ಬೂದಿ ಮುಚ್ಚಿದ ಕೆಂಡದಂತಿದೆ. ಎದುರಾಳಿಗೆ ಡೋಂಟ್‌ಕೇರ್ ಎಂದಿರೋ ಬಿ.ವೈ ವಿಜಯೇಂದ್ರ, ಪಕ್ಷ ಸಂಘಟನೆಗೆ ಒತ್ತು ನೀಡಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದ ಬಿ.ವೈ ವಿಜಯೇಂದ್ರ ಸೋತವರ ವಿಶ್ವಾಸಗಳಿಸೋ ಪ್ರಯತ್ನ ಮಾಡಿದ್ದಾರೆ. ಇದೇ ಸಭೆಯಲ್ಲಿ ವಿಜಯೇಂದ್ರ ಪರ ಬ್ಯಾಟ್ ಬೀಸಿದ ಸೋತ ನಾಯಕರು, ಯತ್ನಾಳ್ ವಿರುದ್ಧ ಬೆಂಕಿಯುಗುಳಿದ್ದಾರೆ. ಅದರಲ್ಲೂ ಮಾಜಿ ಸಚಿವ ರೇಣುಕಾಚಾರ್ಯ, ಯಡಿಯೂರಪ್ಪೋತ್ಸವವನ್ನ ಮಾಡೇ ಮಾಡ್ತೀವಿ ಅಂತಾ ಕಡ್ಡಿ ಮುರಿದಂತೆ ಹೇಳಿದ್ದಾರೆ. ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಾಗಿಲ್ಲ. ನಾವೇ ಹಣ ಹಾಕ್ತೀವಿ ಎಂದಿದ್ದಾರೆ. ಪರ್ಯಾಯ ನಾಯಕತ್ವವಿಲ್ಲ. ವಿಜಯೇಂದ್ರ ನೇತೃತ್ವದಲ್ಲೇ ಚುನಾವಣೆಗೆ ಹೋಗ್ಬೇಕು ಅಂತೇಳೋ ಮೂಲಕ ಯತ್ನಾಳ್ ಬಣಕ್ಕೆ ಸಂದೇಶ ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಬಿ.ವೈ. ವಿಜಯೇಂದ್ರ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣಾ ಸಿದ್ಧತೆ ಹೆಸರಿನಲ್ಲಿ ಪಕ್ಷದ ಪರಾಜಿತ ಅಭ್ಯರ್ಥಿಗಳ ಸಭೆ ನಡೆಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಕಾಲ ಕಾಲಕ್ಕೆ ಸಭೆಗಳನ್ನು ನಡೆಸಬೇಕು ಎಂದು ರಾಜ್ಯಾಧ್ಯಕ್ಷರಿಗೆ ಪರಾಜಿತರು ಆಗ್ರಹಿಸಿದ್ರು. ಮೂರು ತಿಂಗಳಿಗೊಂದು ಸಭೆ ನಡೆಸುವ ಭರವಸೆಯನ್ನು ಬಿ.ವೈ.ವಿಜಯೇಂದ್ರ ನೀಡಿದ್ದಾರೆ.
ಇನ್ನು ಹಲವು ಸಮಯದ ಬಳಿಕ ಇಂದು ಬಿಜೆಪಿ ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪರಾಜಿತರನ್ನು ಉದ್ದೇಶಿಸಿ ಮಾತನಾಡಿ ಪರೋಕ್ಷವಾಗಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ವಿಜಯೇಂದ್ರ ಪೂರ್ಣಾವಧಿಗೆ ಮುಂದುವರಿಕೆ ಮತ್ತು ಭಿನ್ನ ಸ್ವರ ಎತ್ತಿರುವವರ ವಿರುದ್ಧ ಹೈಕಮಾಂಡ್ ಶೀಘ್ರ ಕ್ರಮ ಕೈಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಂವಿಧಾನ ವಿಚಾರದಲ್ಲಾದ ಡ್ಯಾಮೇಜ್ ಕಂಟ್ರೋಲ್‌ಗೆ ಸರ್ಕಸ್: ಬಿಜೆಪಿಯಿಂದ ‘ಭೀಮ ಸಂಗಮ’ ಅಭಿಯಾನ
ಯತ್ನಾಳ್ ಬಣದ ವಿರುದ್ಧ ಬಿಜೆಪಿ ಸಭೆಯಲ್ಲಿ ಪರೋಕ್ಷ ಕಿಡಿ
ರೇಣುಕಾಚಾರ್ಯರಂತೆಯೇ ಕಟ್ಟಾ ಸುಬ್ರಹ್ಮಣ್ಯನಾಯ್ಡು, ಅಪ್ಪು ಪಟ್ಟಣಶೆಟ್ಟಿ ಸೇರಿದಂತೆ ಕೆಲವರು ಯತ್ನಾಳ್ ಹೆಸರೇಳದೇ ಕಿಡಿಕಾರಿದ್ದಾರೆ. ಛಲವಾದಿ ನಾರಾಯಣ ಸ್ವಾಮಿ ಕೂಡಾ ಯಾರಿಗೆ ಬಿನ್ನಭಿಪ್ರಾಯವಿದೆಯೋ ಅವರು ಹೈಕಮಾಂಡ್‌ನಲ್ಲಿ ಮಾತನಾಡ್ಲಿ ಅಂತಾ ಸಭೆಯಲ್ಲಿ ಹೇಳಿದ್ದಾರೆ. ಕಾಂಗ್ರೆಸ್ ವಿರುದ್ದದ ಹೋರಾಟದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಬೇಕು ಎಂದಿದ್ದಾರೆ. ಹಾಗೆಯೇ ಭೀಮ ಸಂಗಮ ಕಾರ್ಯಕ್ರಮವನ್ನು ನಡೆಸುವ ಅಗತ್ಯತೆ ಬಗ್ಗೆ ಹೇಳಿದ್ದಾರೆ.
‘ಭೀಮ ಸಂಗಮ’ ಅಭಿಯಾನಕ್ಕೆ ಮಹಾ ಪ್ಲ್ಯಾನ್!
ಸಂವಿಧಾನ ವಿಚಾರದಲ್ಲಿ ಆಗಿರುವ ಡ್ಯಾಮೇಜ್ ಅನ್ನು ಕಂಟ್ರೋಲ್ ಮಾಡಲು ಪ್ರಯತ್ನಿಸುತ್ತಲೇ ಇರುವ ಬಿಜೆಪಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇದೆ. ಇದೀಗ ಸಂವಿಧಾನ ಗೌರವ ಅಭಿಯಾನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭೀಮ ಸಂಗಮ ಅಭಿಯಾನಕ್ಕೆ ಬಿಜೆಪಿ ಮುಂದಾಗಿದೆ. ಈ ಮೂಲಕ ಸಂವಿಧಾನ ವಿಚಾರದಲ್ಲಿ ಆಗಿರುವ ಚುನಾವಣಾ ಹಿನ್ನೆಡೆಯನ್ನು ಭರ್ತಿ ಮಾಡಿಕೊಳ್ಳಲು ಭೀಮ ಸಂಗಮ ಕಾರ್ಯಕ್ರಮಕ್ಕೆ ತೀರ್ಮಾನಿಸಿದೆ. ಜನವರಿ 25 ರೊಳಗೆ ರಾಜ್ಯ ವ್ಯಾಪಿ ಭೀಮ ಸಂಗಮ ಕಾರ್ಯಕ್ರಮ ಮಾಡಲು ತೀರ್ಮಾನ ಮಾಡಲಾಗಿದ್ದು, ಶಾಸಕರು ಮತ್ತು ಸಂಸದರಿಗೆ ಜವಾಬ್ದಾರಿ ಹೊರಿಸಲಾಗಿದೆ.
ಇನ್ನು ಸಭೆಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ದಾವಣಗೆರೆ ಸಮಾವೇಶದ ಬಗ್ಗೆ ಪ್ರಸ್ತಾಪಿಸಿ ನೀವು ಒಪ್ಪದೇ ಇದ್ದರೂ ನಾವೇ ಹಣ ಹಾಕಿ ಸಮಾವೇಶ ಮಾಡುತ್ತೇವೆ ಎಂದು ಹೇಳಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮದಲ್ಲಿನ ವಿಳಂಬದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಸಭೆಯ ಬಳಿಕ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಬ್ಬರೂ ಪರಾಜಿತ ಅಭ್ಯರ್ಥಿಗಳ ಜೊತೆ ಕುಳಿತು ಆತ್ಮೀಯ ಮಾತುಕತೆಯಲ್ಲಿ ತೊಡಗಿದ್ದು ಪಕ್ಷದಲ್ಲಿನ ಪ್ರಸಕ್ತ ಸನ್ನಿವೇಶಗಳ ಹಿನ್ನೆಲೆಯಲ್ಲಿ ಗಮನ ಸೆಳೆಯಿತು. ಮತ್ತೊಂದು ವಿಚಾರ ಅಂದ್ರೆ, ಇದೇ ಸಭೆಗೆ ಶ್ರೀರಾಮುಲು, ಕುಮಾರಬಂಗಾರಪ್ಪ, ಸೋಮಶೇಖರ ರೆಡ್ಡಿ, ಮಾಧುಸ್ವಾಮಿ ಗೈರು ಹಲವು ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:30 pm, Fri, 10 January 25