ಈರೋಡ್ ಪೂರ್ವ ವಿಧಾನಸಭಾ ಕ್ಷೇತ್ರ ಉಪಚುನಾವಣೆ: ಎಐಎಡಿಎಂಕೆ ಪೋಸ್ಟರ್ನಲ್ಲಿಲ್ಲ ಮೋದಿ ಸೇರಿದಂತೆ ಬಿಜೆಪಿ ನಾಯಕರ ಚಿತ್ರ
ಬುಧವಾರ ಬೆಳಗ್ಗೆ ಪಕ್ಷದ ಕಚೇರಿಯಲ್ಲಿ ಹಾಕಲಾದ ಪೋಸ್ಟರ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರ ಯಾವುದೇ ಚಿತ್ರಗಳಿಲ್ಲ. ಮೈತ್ರಿಕೂಟದ ಹೆಸರನ್ನು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದ (NDA) 'ನ್ಯಾಷನಲ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಅಲೈಯನ್ಸ್' ಎಂದು ಬದಲಾಯಿಸಲಾಗಿದೆ.
ಚೆನ್ನೈ: ತಮಿಳುನಾಡಿನ ಪ್ರಮುಖ ವಿರೋಧ ಪಕ್ಷವಾದ ಎಡಪ್ಪಾಡಿ ಕೆ ಪಳನಿಸಾಮಿ (EPS) ನೇತೃತ್ವದ ಎಐಎಡಿಎಂಕೆ (AIADMK) ಮತ್ತು ಅದರ ಮಿತ್ರಪಕ್ಷ ಬಿಜೆಪಿ (BJP) ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಗೊತ್ತಾಗುತ್ತಿದೆ. ಈರೋಡ್ ಪೂರ್ವ ವಿಧಾನಸಭೆಗೆ ಉಪಚುನಾವಣೆ ಫೆಬ್ರುವರಿ 27ರಂದು ನಡೆಯಲಿದ್ದು, ಎಐಎಡಿಎಂಕೆ ಮಿತ್ರ ಪಕ್ಷವಾದ ಬಿಜೆಪಿಯನ್ನು ಸದ್ದಿಲ್ಲದೆ ದೂರವಿಟ್ಟಿದೆ. ಬುಧವಾರ ಬೆಳಗ್ಗೆ ಪಕ್ಷದ ಕಚೇರಿಯಲ್ಲಿ ಹಾಕಲಾದ ಪೋಸ್ಟರ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರ ಯಾವುದೇ ಚಿತ್ರಗಳಿಲ್ಲ. ಮೈತ್ರಿಕೂಟದ ಹೆಸರನ್ನು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದ (NDA) ‘ನ್ಯಾಷನಲ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಅಲೈಯನ್ಸ್’ ಎಂದು ಬದಲಾಯಿಸಲಾಗಿದೆ. ಇದಕ್ಕೆ”ತಕ್ಕ ಪ್ರತ್ಯುತ್ತರ ನೀಡಲಾಗುವುದು” ಎಂದು ಬಿಜೆಪಿ ರಾಜ್ಯ ಮುಖ್ಯಸ್ಥ ಕೆ.ಅಣ್ಣಾಮಲೈ ಹೇಳಿದ ಕೆಲವೇ ಗಂಟೆಗಳ ನಂತರ ಮೈತ್ರಿಯ ಹೆಸರನ್ನು ಮರುಸ್ಥಾಪಿಸಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇಪಿಎಸ್ ಅವರು ಬಿಜೆಪಿಗೆ ಸ್ಪಷ್ಟ ಸಂದೇಶವನ್ನು ಕಳುಹಿಸಿದ್ದಾರೆ, ಅವರು ತಮಿಳುನಾಡಿನಲ್ಲಿ ತಮ್ಮ ಸ್ಥಾನವನ್ನು ತಿಳಿದುಕೊಳ್ಳಬೇಕು” ಎಂದು ಹೆಸರು ಹೇಳಲಿಚ್ಛಿಸದ ಎಐಎಡಿಎಂಕೆ ನಾಯಕರೊಬ್ಬರು ಎನ್‌ಡಿಟಿವಿಗೆ ಹೇಳಿದ್ದಾರೆ.
ಜಯಲಲಿತಾ ನಿಧನದ ನಂತರ ಇಪಿಎಸ್ ಮತ್ತು ಒಪಿಎಸ್ ನಡುವೆ ನಾಯಕತ್ವದ ಕಿತ್ತಾಟವಾದಾಗ 234 ಸದಸ್ಯ ಬಲದ ವಿಧಾನಸಭೆಯಲ್ಲಿ ನಾಲ್ವರು ಶಾಸಕರೊಂದಿಗೆ ರಾಜ್ಯದಲ್ಲಿ ಅಸ್ತಿತ್ವವನ್ನು ಹೊಂದಿರುವ ಬಿಜೆಪಿ, ಕಳೆದ ಒಂದೂವರೆ ವರ್ಷದಿಂದ ರಾಜ್ಯದಲ್ಲಿ ಪ್ರಮುಖ ಪ್ರತಿಪಕ್ಷ ಎಂದು ಬಿಂಬಿಸಿಕೊಳ್ಳಲು ನೋಡುತ್ತಿದೆ.
2021 ರಲ್ಲಿ ಮತ್ತೊಂದು ಮಿತ್ರಪಕ್ಷವಾದ ಜಿಕೆ ವಾಸನ್ ಅವರ ತಮಿಳು ಮಾನಿಲ ಕಾಂಗ್ರೆಸ್ ಈ ಸ್ಥಾನದಲ್ಲಿ ಸ್ಪರ್ಧಿಸಿದ್ದರೂ, ಚುನಾವಣಾ ಆಯೋಗವು ಚುನಾವಣೆಗೆ ಕರೆದ ಕೂಡಲೇ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ತೀವ್ರ ಇಚ್ಛೆ ಪ್ರಕಟಿಸಿತ್ತು. ಆ ಹೊತ್ತಲ್ಲಿ ಇಪಿಎಸ್ ತಮಿಳು ಮಾನಿಲ ಕಾಂಗ್ರೆಸ್ ನಿಂದ ಸ್ಥಾನ ಪಡೆದು ಎಐಎಡಿಎಂಕೆ ಸ್ಪರ್ಧಿಸುವುದಾಗಿ ಘೋಷಿಸಿದರು.
ದಿವಂಗತ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಬಿಜೆಪಿಯೊಂದಿಗೆ ಎಂದಿಗೂ ಮೈತ್ರಿ ಮಾಡಿಕೊಳ್ಳದಿದ್ದರೂ, ಓ ಪನ್ನೀರಸೆಲ್ವಂ (ಒಪಿಎಸ್) ಮತ್ತು ಇಪಿಎಸ್, ಜಯಲಲಿತಾ ನಿಧನರಾದ ನಂತರ ಜಂಟಿಯಾಗಿ ಪಕ್ಷದ ನೇತೃತ್ವ ವಹಿಸಿದ್ದರು. ಇವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರು. ಈ ಮೈತ್ರಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತಿದೆ.
ಬಿಜೆಪಿಯ ರಾಜ್ಯ ಉಪಾಧ್ಯಕ್ಷ ನಾರಾಯಣನ್ ತಿರುಪತಿ, ಹೆಸರಿನ ಸಮಸ್ಯೆ ಅದು ಅಕಸ್ಮಾತ್ ಆಗಿ ಆದ ತಪ್ಪು. ಅದು ಅವರ ಗಮನಕ್ಕೆ ಬಂದ ಕೂಡಲೇ ತಿದ್ದಿದ್ದಾರೆ.ನಮ್ಮ ನಡುವೆ ಯಾವುದೇ ಮುನಿಸು ಅಥವಾ ಘರ್ಷಣೆ ಇಲ್ಲ” ಎಂದು ಹೇಳಿದರು. ಈ ಬದಲಾದ ಸನ್ನಿವೇಶದಲ್ಲಿ ರಾಷ್ಟ್ರೀಯ ಪಕ್ಷ ಇಂದು ತನ್ನ ನಿಲುವನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ.
ಎಐಎಡಿಎಂಕೆಯ ಏಕೈಕ ನಾಯಕರಾದ ನಂತರ ಇಪಿಎಸ್ ಅವರ ಮೊದಲ ಚುನಾವಣೆ ಇದಾಗಿದೆ. 2024 ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅವರು ತಮ್ಮ ರಾಜಕೀಯ ಬಲವನ್ನು ತೋರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಎಐಎಡಿಎಂಕೆ ಅಭ್ಯರ್ಥಿಯಾಗಿ ಮಾಜಿ ಶಾಸಕ ತೆನ್ನರಸು ಇದ್ದರೆ, ಒಪಿಎಸ್ ಸೆಂಥಿಲ್ ಮುರುಗನ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಇವಿಕೆಎಸ್ ಇಳಂಗೋವನ್ ಅವರು ಡಿಎಂಕೆ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದಾರೆ. ಇಳಂಗೋವನ್ ಅವರ ಪುತ್ರ ತಿರುಮಹನ್ ಎವೆರಾ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ