ದೆಹಲಿ: ಆಮ್ ಆದ್ಮಿ ಪಕ್ಷದ ಸಾಧನೆಗೆ ದೇಶದೆಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಕರ್ನಾಟಕದಲ್ಲಿರುವ 3 ಪಕ್ಷಗಳ ಬಗ್ಗೆ ಜನ ಬೇಸರಗೊಂಡಿದ್ದಾರೆ. ಅರವಿಂದ ಕೇಜ್ರಿವಾಲ್ ಬಗ್ಗೆ ವಿದೇಶಗಳಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಕರ್ನಾಟಕ ರಾಜ್ಯದಲ್ಲಿ ಎಲ್ಲಾ ರೀತಿಯ ಸಂಪನ್ಮೂಲ ಇದೆ. ಆದರೆ ಕರ್ನಾಟಕದಲ್ಲಿ ಸ್ವಚ್ಛ ನಾಯಕತ್ವದ ಕೊರತೆ ಇದೆ. ಇಲ್ಲಿ ಭ್ರಷ್ಟಾಚಾರ ಬಹಳ ಹೆಚ್ಚಾಗಿದೆ. ಇದನ್ನು ನೋಡಿ ರಾಜ್ಯದ ಮೂರು ಪಕ್ಷಗಳ ಬಗ್ಗೆ ಬೇಸರವಾಗಿದೆ. ರಾಜ್ಯದ ಮೂರೂ ಪಕ್ಷಗಳು ಅಂದರ್ ಬಾಹರ್ ಆಡುತ್ತಿವೆ. ಕರ್ನಾಟಕದಲ್ಲಿ ಬದಲಾವಣೆ ಆಗಬೇಕಿದೆ. ದೆಹಲಿ, ಪಂಜಾಬ್ ರೀತಿ ಕರ್ನಾಟಕದಲ್ಲೂ ಬದಲಾಗಬೇಕಿದೆ ಎಂದು ದೆಹಲಿಯಲ್ಲಿ AAP ಸೇರ್ಪಡೆ ಬಳಿಕ ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿಕೆ ನೀಡಿದ್ದಾರೆ.
ಆಮ್ ಆದ್ಮಿ ಪಕ್ಷದ ಬಗ್ಗೆ ದಕ್ಷಿಣದ ರಾಜ್ಯಗಳಲ್ಲಿ ಚರ್ಚೆ ನಡೆಯುತ್ತಿದೆ. IPS ಹುದ್ದೆ ತೊರೆದು ಭಾಸ್ಕರ್ ರಾವ್ ಎಎಪಿ ಸೇರಿದ್ದಾರೆ. ದೆಹಲಿ ಸರ್ಕಾರದ ಕೆಲಸಗಳನ್ನು ನೋಡಿ ಪಕ್ಷ ಸೇರಿದ್ದಾರೆ. ಶಾಲೆಗಳಲ್ಲಿ ಆಗಿರುವ ಬದಲಾವಣೆ ನೋಡಿ ಪಕ್ಷ ಸೇರಿದ್ದಾರೆ. ಕಮಿಷನರ್ ಆಗಿದ್ದ ಭಾಸ್ಕರ್ ರಾವ್ ರಾಜಕೀಯ ಆರಂಭ ಮಾಡಿದ್ದಾರೆ ಎಂದು ದೆಹಲಿಯಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ ಹೇಳಿಕೆ ನೀಡಿದ್ದಾರೆ.
ಅರ್ಥಶಾಸ್ತ್ರ ವಿಷಯದಲ್ಲಿ ಎಂ.ಎ ಪದವಿ ಪಡೆದಿರುವ ಭಾಸ್ಕರ್ ರಾವ್, 1990 ನೇ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಆಗಿದ್ದಾರೆ. ಬೆಂಗಳೂರು ಪೊಲೀಸ್ ಕಮಿಷನರ್ ಆಗಿಯೂ ಅವರು ಕೆಲಸ ಮಾಡಿದ್ದಾರೆ. ರೈಲ್ವೇ ಪೊಲೀಸ್ ವಿಭಾಗದ ಎಡಿಜಿಪಿ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಪೊಲೀಸ್ ಅಧಿಕಾರಿ ಆಗಿ ವೃತ್ತಿಜೀವನ ಅಂತ್ಯಗೊಂಡಿರುವ ಬಗ್ಗೆ, ಹೊಸಪಯಣದ ಕುರಿತು ನಿನ್ನೆಯಷ್ಟೇ ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದರು. 32 ವರ್ಷಗಳ ಐಪಿಎಸ್ ಜೀವನಕ್ಕೆ ತೆರೆ ಎಳೆಯುತ್ತಿದ್ದೇನೆ. ನನ್ನ ಕುಟುಂಬಕ್ಕೆ, ಗೆಳೆಯರಿಗೆ, ಸಹೋದ್ಯೋಗಿಗಳಿಗೆ, ಹಿರಿ, ಕಿರಿಯರಿಗೆ, ಪಕ್ಷಾತೀತವಾಗಿ ಕರ್ನಾಟಕದ ಸರ್ಕಾರಗಳಿಗೆ ಧನ್ಯವಾದಗಳು ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದರು.
ಇದನ್ನೂ ಓದಿ: ಸ್ವಯಂ ನಿವೃತ್ತಿ ಪಡೆದಿದ್ದ IPS ಭಾಸ್ಕರ್ ರಾವ್ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಆಪ್ಗೆ ಸೇರ್ಪಡೆ; ಫೋಟೊ ನೋಡಿ
ಇದನ್ನೂ ಓದಿ: ಗುಜರಾತ್ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿರುವ ಆಮ್ ಆದ್ಮಿ ಪಕ್ಷ; ರಾಜ್ಯ ತಲುಪಿದ ಇಬ್ಬರು ಮುಖ್ಯಮಂತ್ರಿಗಳು
Published On - 3:06 pm, Mon, 4 April 22