ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ: ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಗರಿಗೆದರಿದ ಆಸೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿನಿಂದ (ಏಪ್ರಿಲ್ 5) ಎರಡು ದಿನಗಳ ಕಾಲ ದೆಹಲಿ ಪ್ರವಾಸದಲ್ಲಿರುತ್ತಾರೆ. ಬೊಮ್ಮಾಯಿ ಅವರೊಂದಿಗೆ ಸಚಿವ ಗೋವಿಂದ ಕಾರಜೋಳ ಸಹ ಇರುತ್ತಾರೆ.

ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ: ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಗರಿಗೆದರಿದ ಆಸೆ
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 05, 2022 | 8:05 AM

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿನಿಂದ (ಏಪ್ರಿಲ್ 5) ಎರಡು ದಿನಗಳ ಕಾಲ ದೆಹಲಿ ಪ್ರವಾಸದಲ್ಲಿರುತ್ತಾರೆ. ಮಧ್ಯಾಹ್ನ 1.55ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರೊಂದಿಗೆ ಸಚಿವ ಗೋವಿಂದ ಕಾರಜೋಳ ಸಹ ಇರುತ್ತಾರೆ. ಸಂಜೆ 7 ಗಂಟೆಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಭೇಟಿಗೆ ಸಮಯ ನಿಗದಿಯಾಗಿದೆ. ಈ ಸಂದರ್ಭದಲ್ಲಿ ರಾಜ್ಯದ ನೀರಾವರಿ ಸಮಸ್ಯೆಗಳ ಬಗ್ಗೆ ಸಚಿವರ ಜೊತೆ ಮುಖ್ಯಮಂತ್ರಿ ಚರ್ಚೆ ನಡೆಸಲಿದ್ದಾರೆ. ಮೇಕೆದಾಟು ಯೋಜನೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆ ಬಗ್ಗೆಯೂ ಸಚಿವರ ಜೊತೆ ಚರ್ಚೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಮುಖ್ಯಮಂತ್ರಿ ದೆಹಲಿ ಭೇಟಿ ನಿಗದಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಚಿವಾಕಾಂಕ್ಷಿಗಳಲ್ಲಿ ನಿರೀಕ್ಷೆ ಗರಿಗೆದರಿದೆ. ದೆಹಲಿಯಲ್ಲಿ ಬೊಮ್ಮಾಯಿ ಅವರು ರಾಷ್ಟ್ರೀಯ ನಾಯಕರನ್ನು ಭೇಟಿಯಾಗುವ ಸಾಧ್ಯತೆಯಿದೆ. ಹೀಗಾಗಿ ಸಂಪುಟ ಸೇರಲು ತುದಿಗಾಲಲ್ಲಿ ನಿಂತಿರುವ ಹಲವು ನಾಯಕರು ಕೊನೆ ಕ್ಷಣದ ಪ್ರಯತ್ನ ಮುಂದುವರಿಸಿದ್ದಾರೆ. ಸಂಪುಟ ಪುನರ್ ರಚನೆಗೆ ಮುಖ್ಯಮಂತ್ರಿಗೆ ಹೈಕಮಾಂಡ್ ಸಿಎಂಗೆ ಗ್ರೀನ್ ಸಿಗ್ನಲ್ ನೀಡಲಿದೆಯೇ ಎನ್ನುವುದು ಈವರೆಗೆ ಸ್ಪಷ್ಟವಾಗಿಲ್ಲ. ಈಗಾಗಲೇ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಕೆಲ ಆಕಾಂಕ್ಷಿಗಳು ಸಹ ದೆಹಲಿಗೆ ತೆರಳುವ ಸಾಧ್ಯತೆಯಿದೆ.

ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಜಯೇಂದ್ರ, ವೈಯಕ್ತಿಕ ಕೆಲಸಕ್ಕಾಗಿ ನಾನು ದೆಹಲಿಗೆ ಬಂದಿದ್ದೇನೆ. ನನಗೆ ಬಿಜೆಪಿ ವರಿಷ್ಠರಿಂದ ಯಾವುದೇ ಕರೆ ಬಂದಿಲ್ಲ. ನಾನು ಯಾವ ನಾಯಕರನ್ನೂ ಭೇಟಿಯಾಗುತ್ತಿಲ್ಲ ಎಂದು ಹೇಳಿದರು.

ಬಿಜೆಪಿಯ ಆಂತರಿಕ ವಲಯದಲ್ಲಿ ಪ್ರಸ್ತುತ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಸಚಿವ ಸಂಪುಟಕ್ಕೆ ಸೇರುವ ಸಾಧ್ಯತೆಯಿರುವ ಶಾಸಕರು ಇವರು; ಬಸನಗೌಡ ಪಾಟೀಲ್ ಯತ್ನಾಳ್, ರಮೇಶ ಜಾರಕಿಹೊಳಿ, ಎಂ.ಪಿ.ರೇಣುಕಾಚಾರ್ಯ, ದತ್ತಾತ್ರೇಯಾ ಪಾಟೀಲ್ ರೇವುರ್, ಪಿ.ರಾಜೀವ್, ಎಸ್.ಎ.ರಾಮದಾಸ್, ಪೂರ್ಣಿಮಾ, ಬಿ.ವೈ.ವಿಜಯೆಂದ್ರ, ತಿಪ್ಪಾರೆಡ್ಡಿ ಮತ್ತು ರಾಜೂಗೌಡ.

ಸಂಪುಟದಿಂದ ಹೊರಹೋಗುವ ಸಾಧ್ಯತೆಯಿರುವವರು; ಈಶ್ವರಪ್ಪ, ಮುರುಗೇಶ್ ನಿರಾಣಿ ಅಥವಾ ಸಿ.ಸಿ.ಪಾಟೀಲ್ (ಇಬ್ಬರಲ್ಲಿ ಒಬ್ಬರು), ಪ್ರಭು ಚವ್ಹಾಣ, ಕೋಟ ಶ್ರೀನಿವಾಸ್ ಪೂಜಾರಿ.

ಇದನ್ನೂ ಓದಿ: ರೈತ ಪರ ಖಡಕ್ ನಿರ್ಧಾರ ತೆಗೆದುಕೊಂಡ ಬೊಮ್ಮಾಯಿ ಸರ್ಕಾರ, ಉತ್ತರ ಕರ್ನಾಟಕದಲ್ಲಿ ಕಚೇರಿಗಳ ಸಮಯ ಬದಲಾವಣೆ ಇಲ್ಲ

ಇದನ್ನೂ ಓದಿ: 21 ಸಚಿವರನ್ನು ಉಳಿಸಿ 22 ಸಚಿವರನ್ನು ಕೈ ಬಿಟ್ಟ ಯೋಗಿ ಆದಿತ್ಯನಾಥ; ಸಚಿವ ಸಂಪುಟದಲ್ಲಿ 31 ಹೊಸಬರು, ಐವರು ಮಹಿಳೆಯರು