ರೈತ ಪರ ಖಡಕ್ ನಿರ್ಧಾರ ತೆಗೆದುಕೊಂಡ ಬೊಮ್ಮಾಯಿ ಸರ್ಕಾರ, ಉತ್ತರ ಕರ್ನಾಟಕದಲ್ಲಿ ಕಚೇರಿಗಳ ಸಮಯ ಬದಲಾವಣೆ ಇಲ್ಲ ಎಂದಿತು!

Basavaraj Bommai: ಸರ್ಕಾರ ಕಚೇರಿಯ ಸಮಯದ ಬದಲಾವಣೆ ಮಾಡಬಾರದು. ನಾವು ದೂರದ ಹಳ್ಳಿಯಿಂದ ಕಲಬುರಗಿ ನಗರಕ್ಕೆ ಬರಲಿಕ್ಕೆ ಮಧ್ಯಾಹ್ನವಾಗುತ್ತದೆ. ಮಧ್ಯಾಹ್ನವಾದಾಗ ಕಚೇರಿಗಳು ಮುಚ್ಚಿದ್ದರೆ ನಮಗೆ ತೊಂದರೆಯಾಗಲಿದೆ ಎಂದು ರೈತ ಚಂದ್ರಪ್ಪ ತಾವು ಪಡುವ ಪಡಿಪಾಟಲಿನ ಬಗ್ಗೆ ಹೇಳಿಕೊಂಡಿದ್ದಾರೆ.

ರೈತ ಪರ ಖಡಕ್ ನಿರ್ಧಾರ ತೆಗೆದುಕೊಂಡ ಬೊಮ್ಮಾಯಿ ಸರ್ಕಾರ, ಉತ್ತರ ಕರ್ನಾಟಕದಲ್ಲಿ ಕಚೇರಿಗಳ  ಸಮಯ ಬದಲಾವಣೆ ಇಲ್ಲ ಎಂದಿತು!
ಬೇಸಿಗೆಯ ದಗೆ: ದೆಹಲಿ ಮಾನದಂಡ- ಉತ್ತರ ಕರ್ನಾಟಕ ಭಾಗದ ಸರ್ಕಾರಿ ಕಚೇರಿಗಳಲ್ಲಿ ಈ ಬಾರಿ ಸಮಯ ಬದಲಾವಣೆ ಇಲ್ಲ ಎಂದ ಬೊಮ್ಮಾಯಿ ಸರ್ಕಾರ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Apr 02, 2022 | 3:13 PM

ಕಲಬುರಗಿ: ಬೇಸಿಗೆ ದಗೆಯ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ರಾಜ್ಯದ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಮತ್ತು ಕಿತ್ತೂರು ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಪ್ರತಿ ವರ್ಷ ಸರ್ಕಾರಿ ಕಚೇರಿಗಳ ಸಮಯವನ್ನು ಸರ್ಕಾರ ಬದಲಾವಣೆ ಮಾಡುತ್ತಿತ್ತು. ಕಳೆದ ಎರಡು ವರ್ಷ ಕೊರೊನಾ ಕಾರಣದಿಂದ ಸಮಯದ ಬದಲಾವಣೆ ಮಾಡಿರಲಿಲ್ಲ. ಆದರೆ ಈ ಬಾರಿ ಸಮಯ ಬದಲಾವಣೆಗೆ ಸರ್ಕಾರಿ ನೌಕರರು ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ನೌಕರರ ಆಸೆಗೆ ಸರ್ಕಾರ ತಣ್ಣೀರೆರಚಿದೆ (Basavaraj Bommai).

ಹೌದು ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಮತ್ತು ಕಿತ್ತೂರು ಕರ್ನಾಟಕ ಭಾಗದ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪ್ರತಿ ಬೇಸಿಗೆಯ ಸಮಯದಲ್ಲಿ ಅನಿವಾರ್ಯವಾಗಿ ಸಮಯದ ಬದಲಾವಣೆ ಮಾಡಲಾಗುತ್ತಿತ್ತು. ಸರ್ಕಾರಿ ಕಚೇರಿಗಳ ಸಮಯ ಮುಂಜಾನೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಇದೆ. ಆದರೆ ಬೇಸಿಗೆಯ ಸಮಯದಲ್ಲಿ ಈ ಜಿಲ್ಲೆಗಳಲ್ಲಿ ಕಚೇರಿಗಳ ಸಮಯವನ್ನು ಮುಂಜಾನೆ 8 ಗಂಟೆಯಿಂದಲೇ ಆರಂಭಿಸಿ, ಮಧ್ಯಾಹ್ನ 1.30 ರವರೆಗೆ ಬದಲಾಯಿಸಲಾಗುತ್ತಿತ್ತು. ಆದರೆ ಈ ಬಾರಿ ಸರ್ಕಾರ ಬೇಸಿಗೆಯ ಸಮಯದಲ್ಲಿ ಕಚೇರಿಗಳ ಸಮಯವನ್ನು ಬದಲಾವಣೆ ಮಾಡೋದಿಲ್ಲಾ ಅಂತ ತಿಳಿಸಿದೆ. ಈ ಬಗ್ಗೆ ಆದೇಶ ಹೊರಡಿಸಿರುವ ಸರ್ಕಾರದ ಅಧೀನ ಕಾರ್ಯದರ್ಶಿ ರಮೇಶ್, ದೆಹಲಿಯಲ್ಲಿ ಕಲಬುರಗಿ ಜಿಲ್ಲೆಗಿಂತ ಹೆಚ್ಚಿನ ತಾಪಮಾನವಿದ್ದರು ಕೂಡಾ ಸರ್ಕಾರಿ ಕಚೇರಿಗಳ ಸಮಯದ ಬದಲಾವಣೆ ಮಾಡೋದಿಲ್ಲಾ. ಹೀಗಾಗಿ ಈ ಜಿಲ್ಲೆಗಳಲ್ಲಿ ಕೂಡಾ ಕಚೇರಿಗಳ ಸಮಯವನ್ನು ಬದಲಾವಣೆ ಮಾಡುವ ಅಗತ್ಯವಿಲ್ಲಾ ಅಂತ ಹೇಳಿದ್ದಾರೆ.

ಕಚೇರಿ ಸಮಯದ ಬದಲಾವಣೆಗೆ ನೌಕರರ ಆಗ್ರಹ ಕಲಬುರಗಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಬೇಸಿಗೆಯ ಬಿಸಿಲಿನ ತಾಪಮಾನ ಹೆಚ್ಚಾಗಿರುತ್ತದೆ. ಕಲಬುರಗಿಯಲ್ಲಿ ಏಪ್ರೀಲ್ ಮತ್ತು ಮೇ ತಿಂಗಳಲ್ಲಿ ನಲವತ್ತರಿಂದ ನಲವತ್ನಾಲ್ಕು ಡಿಗ್ರಿವರಗೆ ಬಿಸಿಲಿನ ತಾಪಮಾನ ಇರುತ್ತದೆ. ಹೀಗಾಗಿ ಅನೇಕ ವರ್ಷಗಳಿಂದ ಈ ಎರಡು ತಿಂಗಳಲ್ಲಿ ಸಮಯದ ಬದಲಾವಣೆ ಮಾಡೋದು ಸಂಪ್ರದಾಯವಂತೆ ನಡೆದಿತ್ತು. ಆದರೆ ಕೊರೊನಾದ ಕಳೆದ ಎರಡು ವರ್ಷಗಳು ಕೂಡಾ ಸಮಯದ ಬದಲಾವಣೆಯನ್ನು ಸರ್ಕಾರ ಮಾಡಿರಲಿಲ್ಲಾ. ಆದರೆ ಈ ಬಾರಿ ಕೊರೊನಾದ ಕಾಟವಿಲ್ಲದೇ ಇದ್ದಿದ್ದರಿಂದ ಸರ್ಕಾರಿ ನೌಕರರು ಸಮಯದ ಬದಲಾವಣೆಗೆ ಮನವಿ ಮಾಡಿದ್ದರು.

ಯಾಕಾಗಿ ಸಮಯದ ಬದಲಾವಣೆ? ಸುಡುವ ಬಿಸಿಲಿನಲ್ಲಿ ಕೆಲಸ ಮಾಡುವದು ಕಷ್ಟವಾಗುತ್ತದೆ. ನೌಕರರು ತಮ್ಮ ಸಾಮರ್ಥಕ್ಕೆ ತಕ್ಕಂತೆ ಕೆಲಸ ಮಾಡಲು ಆಗೋದಿಲ್ಲಾ. ಪ್ಯಾನ್ ಗಳಿದ್ದರು ಕೂಡಾ ಕಚೇರಿಯೊಳೆಗ ಕುಳಿತು ಕೆಲಸ ಮಾಡಲು ಆಗೋದಿಲ್ಲಾ. ಹೀಗಾಗಿ ಬೇಸಿಗೆಯಲ್ಲಿ ಮುಂಜಾನೆಯಿಂದ ಮದ್ಯಾಹ್ನದವರಗೆ ಮಾತ್ರ ಕಚೇರಿಯ ಸಮಯ ಬದಲಾವಣೆ ಮಾಡಬೇಕು ಅನ್ನೋದು ಸರ್ಕಾರಿ ನೌಕರರ ಆಗ್ರಹವಾಗಿದೆ. ಪ್ರತಿ ವರ್ಷ ನೌಕರರು ತಮ್ಮ ನೌಕರರ ಸಂಘಟನೆಗಳ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಿ, ಕಚೇರಿಯ ಸಮಯವನ್ನು ಬದಲಾವಣೆ ಮಾಡಿಸಿಕೊಳ್ಳುತ್ತಿದ್ದರು.

ಎಲ್ಲರಿಗೂ ಅನ್ವಯವಾಗದ ನಿಯಮ ಸರ್ಕಾರಿ ಕಚೇರಿಗಳ ಸಮಯದ ಬದಲಾವಣೆಯನ್ನು ಪ್ರತಿ ವರ್ಷ ಸರ್ಕಾರ ಮಾಡುತ್ತಿತ್ತು. ಆದರೆ ಇದು ಎಲ್ಲರಿಗೂ ಅನ್ವಯವಾಗುತ್ತಿರಲಿಲ್ಲಾ. ಪೊಲೀಸರು, ಸಾರಿಗೆ ಇಲಾಖೆ ಸಿಬ್ಬಂಧಿ ಸೇರಿದಂತೆ ಕೆಲ ತುರ್ತು ಕೆಲಸದ ಮೇಲೆ ಇದ್ದ ನೌಕರರು ಪ್ರತಿನಿತ್ಯ ದೈನಂದಿನಂತೆ ಕೆಲಸ ಮಾಡುತ್ತಿದ್ದರು. ಇವರಿಗೆ ಸಮಯದ ಬದಲಾವಣೆ ಅನ್ವಯವಾಗುತ್ತಿರಲಿಲ್ಲಾ. ಕಂದಾಯ ಇಲಾಖೆ ಸೇರಿದಂತೆ ಕೆಲ ಇಲಾಖೆಯ ನೌಕರರಿಗೆ ಮಾತ್ರ ಇದು ಜಾರಿಯಾಗುತ್ತಿತ್ತು.

ಸಮಯದ ಬದಲಾವಣೆಗೆ ಅನೇಕರ ವಿರೋಧ ಸರ್ಕಾರಿ ನೌಕರರು ಸರ್ಕಾರಿ ಕಚೇರಿಯ ಸಮಯದ ಬದಲಾವಣೆ ಮಾಡಬೇಕು ಅಂತ ಆಗ್ರಹಿಸುತ್ತಿದ್ದರೆ, ಅನೇಕರು ಕಚೇರಿಗಳ ಸಮಯದ ಬದಲಾವಣೆಗೆ ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದ ಜನರು ತಮ್ಮ ಕೆಲಸಕ್ಕೆ ನಗರಕ್ಕೆ ಬರಲು ಸಮಯಬೇಕು. ಕೃಷಿ ಕೆಲಸ ಮುಗಿಸಿಕೊಂಡು ಬರೋದಕ್ಕೆ ಸಮಯಬೇಕಾಗುತ್ತದೆ. ಅಧಿಕಾರಿಗಳು ಮಧ್ಯಾಹ್ನವಾದರೆ ಮನೆಗೆ ಹೋದರೆ ನಮಗೆ ಅನಾನುಕೂಲವಾಗುತ್ತದೆ. ಹೀಗಾಗಿ ಸಮಯದ ಬದಲಾವಣೆ ಮಾಡಬಾರದು ಅಂತ ಆಗ್ರಹಿಸುತ್ತಲೇ ಇದ್ದರು ಎಂಬುದು ಗಮನಾರ್ಹ.

ಕಲಬುರಗಿ ಸೇರಿದಂತೆ ಅನೇಕ ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲು ಹೆಚ್ಚಾಗಿರುವದರಿಂದ ಸಮಯದ ಬದಲಾವಣೆಗೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದ್ರೆ ಸಮಯದ ಬದಲಾವಣೆ ಮಾಡೋದಿಲ್ಲಾ ಅಂತ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಸಿಎಂರನ್ನು ಭೇಟಿ ಮಾಡಿ, ಸಮಯದ ಬದಲಾವಣೆ ಬಗ್ಗೆ ಮನವರಿಕೆ ಮಾಡಿಕೊಡಲಾಗುವದು ಎಂದು ಕಲಬುರಗಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜು ಲೆಂಗಟಿ ಹೇಳಿದ್ದಾರೆ.

ಮಧ್ಯಾಹ್ನ ಕಚೇರಿಗಳು ಮುಚ್ಚಿದ್ದರೆ ನಮಗೆ ತೊಂದರೆಯಾಗಲಿದೆ- ರೈತ ಚಂದ್ರಪ್ಪ ಸರ್ಕಾರ ಕಚೇರಿಯ ಸಮಯದ ಬದಲಾವಣೆ ಮಾಡಬಾರದು. ನಾವು ದೂರದ ಹಳ್ಳಿಯಿಂದ ಕಲಬುರಗಿ ನಗರಕ್ಕೆ ಬರಲಿಕ್ಕೆ ಮಧ್ಯಾಹ್ನವಾಗುತ್ತದೆ. ಮಧ್ಯಾಹ್ನವಾದಾಗ ಕಚೇರಿಗಳು ಮುಚ್ಚಿದ್ದರೆ ನಮಗೆ ತೊಂದರೆಯಾಗಲಿದೆ ಎಂದು ರೈತ ಚಂದ್ರಪ್ಪ ತಾವು ಪಡುವ ಪಡಿಪಾಟಲಿನ ಬಗ್ಗೆ ಹೇಳಿಕೊಂಡಿದ್ದಾರೆ.