ರಾಜ್ಯ ಬಿಜೆಪಿಯಿಂದ ಎಡವಟ್ಟು, ಕೊನೆಗೂ ಯಡಿಯೂರಪ್ಪ ಮುನಿಸು ಶಮನಗೊಳಿಸಿದ ಹೈಕಮಾಂಡ್
ರಾಜ್ಯ ಬಿಜೆಪಿಯ ಎಡವಟ್ಟಿನಿಂದ ಮುನಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಸಮಾಧಾನಪಡಿಸುವಲ್ಲಿ ಹೈಕಮಾಂಡ್ ಯಶಸ್ವಿಯಾಗಿದೆ. ದೆಹಲಿಯಿಂದ ಬಂದ ಕರೆಗೆ ಬಿಎಸ್ವೈ ಕೋಪ ಶಮನವಾಗಿದೆ.
ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ. ನಡ್ಡಾ (JP Nadda) ಅವರ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಮುನಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿಯನ್ನು ಬಿ.ಎಸ್.ಯಡಿಯೂರಪ್ಪನವರನ್ನು (BS Yediyurappa) ಕೊನೆಗೂ ಬಿಜೆಪಿ ನಾಯಕರು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೆಹಲಿ ನಾಯಕರ ಕರೆ ಮೇರೆಗೆ ಯಡಿಯೂರಪ್ಪನವರ ಕೋಪ ಶಮನವಾಗಿದ್ದು, ನಾಳೆ(ಡಿ.15) ಕೊಪ್ಪಳ (Koppal) ಕಾರ್ಯಕ್ರಮದಲ್ಲಿ ಭಾಗಿಯಾಗಲು ಒಪ್ಪಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಒಟ್ಟು 10 ಬಿಜೆಪಿ ಜಿಲ್ಲಾ ಕಚೇರಿಗಳ ಉದ್ಘಾಟನೆ ನಿಮಿತ್ತ ನಾಳೆ(ಡಿ.15) ಕೊಪ್ಪಳಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ. ನಡ್ಡಾ ಆಗಮಿಸುತ್ತಿದ್ದಾರೆ. ಆದ್ರೆ, ಈ ಕಾರ್ಯಕ್ರಮಕ್ಕೆ ಬಿಜೆಪಿ ಬಿಎಸ್ ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಿಲ್ಲ. ಇದರಿಂದ ಯಡಿಯೂರಪ್ಪ ಅಸಮಾಧಾನಗೊಂಡಿದ್ದರು. ಕೊಪ್ಪಳಕ್ಕೆ BSY ಬರುವುದಿಲ್ಲವೆಂದು ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಹೇಳಿದ್ದರು. ಇದು ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಗೊಂದಲ ಉಂಟಾಗಿತ್ತು. ಬಿಎಸ್ವೈರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಮಾತು ಕೇಳಿಬಂದಿತ್ತು.ಇದನ್ನು ಅರಿತ ಸ್ಥಳೀಯ ಮುಖಂಡರು ರಾಜ್ಯದ ನಾಯಕರ ಗಮನಕ್ಕೆ ತಂದಿದ್ದಾರೆ.
ಈ ಬಗ್ಗೆ ಸಾಮಾಜಿ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಬಿಜೆಪಿ ನಾಯಕರಾದ ರವಿಕುಮಾರ್ ಹಾಗೂ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್, ಬಿಎಸ್ವೈ ನಿವಾಸಕ್ಕೆ ಭೇಟಿ ನೀಡಿ ಕೊಪ್ಪಳದ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಿದರು. ಆದರೂ ಇದಕ್ಕೆ ಒಪ್ಪದ ಯಡಿಯೂರಪ್ಪ ಬೇರೆ ಕಾರ್ಯಕ್ರಮಗಳು ನಿಗದಿಯಾಗಿವೆ ಎಂದು ಹೇಳಿ ಕಳುಹಿಸಿದ್ದಾರೆ. ಇದು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಈ ಬಗ್ಗೆ ದೆಹಲಿ ನಾಯಕರ ಗಮನಕ್ಕೆ ತಂದಿದ್ದಾರೆ.
ಬಳಿಕ ದೆಹಲಿ ನಾಯಕರಿಂದಲೇ ಕೊಪ್ಪಳ ಕಾರ್ಯಕ್ರಮಕ್ಕೆ ಬರುವಂತೆ ಫೋನ್ ಕರೆ ಮೂಲಕ ಆಹ್ವಾನ ಬಂದಿದೆ. ದೆಹಲಿ ನಾಯಕರ ಕರೆ ಹಿನ್ಬಲೆ ಯಡಿಯೂರಪ್ಪ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿಯಾಲು ಒಪ್ಪಿಕೊಂಡರು. ಈ ಮೂಲಕ ದೆಹಲಿ ನಾಯಕರು ಬಿಎಸ್ವೈ ಮುನಿಸು ಶಮನ ಮಾಡುವಲ್ಲಿ ಯಶಸ್ವಿಯಾಗಿದೆ.
ಹೆಲಿಕಾಪ್ಟರ್ ಮೂಲಕ ಕೊಪ್ಪಳಕ್ಕೆ
ಇಂದು(ಡಿ.14) ಸಂಜೆವರೆಗೂ BSY ಕೊಪ್ಪಳ ಪ್ರವಾಸ ನಿರ್ಧಾರವಾಗಿರಲಿಲ್ಲ. ದೆಹಲಿ ನಾಯಕರ ಕರೆ ಹಿನ್ನೆಲೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಒಪ್ಪಿಕೊಂಡಿರುವ ಯಡಿಯೂರಪ್ಪ, ಕೊನೆ ಕ್ಷಣದಲ್ಲಿ ಕೊಪ್ಪಳಕ್ಕೆ ತೆರಳುವುದು ಖಚಿತವಾಗಿದ್ದು, ಹೆಚ್ಎಎಲ್ ಏರ್ಪೋರ್ಟ್ನಿಂದ ಹೆಲಿಕಾಪ್ಟರ್ ಮೂಲಕ ಕೊಪ್ಪಳಕ್ಕೆ ತೆರಳಲಿದ್ದಾರೆ.
ಯಡಿಯೂರಪ್ಪ ಅವರನ್ನು ಕಡೆಗಣಿಸುತ್ತಿರುವುದು ಇದೊಂದೇ ಕಾರ್ಯಕವಲ್ಲ. ಈ ಹಿಂದೆ ಪಕ್ಷದ ಕಾರ್ಯಚಟುವಟಿಕೆಗಳ ಬ್ಯಾನರ್ಗಳಲ್ಲೂ ಸಹ ಯಡಿಯೂರಪ್ಪನವರ ಫೋಟೋ ಹಾಕಿಲ್ಲದಿರುವ ಉದಾಹರಣೆಗಳು ಇವೆ. ಅಲ್ಲದೇ ಈ ಬಗ್ಗೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು ಉಂಟು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 10:54 pm, Wed, 14 December 22