ಬಿಜೆಪಿ ಅವಧಿಯಲ್ಲಿನ ಯೋಜನೆಗಳಿಗೆ ಅನುದಾನ ಕಡಿತಗೊಳಿಸದಂತೆ ಸಿಎಂ ಸಿದ್ಧರಾಮಯ್ಯಗೆ ಪತ್ರ ಬರೆದ ಮಾಜಿ ಸಿಎಂ ಬೊಮ್ಮಾಯಿ
ಬಿಜೆಪಿ ಅವಧಿಯಲ್ಲಿನ ಯೋಜನೆ ಮೊಟಕುಗೊಳಿಸದಂತೆ, ಅನುದಾನ ಕಡಿತಗೊಳಿಸದಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಿಎಂ ಸಿದ್ದರಾಮಯ್ಯ ಮೂಲಕ ಆಗ್ರಹಿಸಿದ್ದಾರೆ.
ಬೆಂಗಳೂರು: ಬಿಜೆಪಿ ಅವಧಿಯಲ್ಲಿನ ಯೋಜನೆ ಮೊಟಕುಗೊಳಿಸದಂತೆ, ಅನುದಾನ ಕಡಿತಗೊಳಿಸದಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಿಎಂ ಸಿದ್ದರಾಮಯ್ಯ (Cm Siddaramaiah) ಮೂಲಕ ಆಗ್ರಹಿಸಿದ್ದಾರೆ. ರೈತರಿಗೆ ನೀಡಲಾಗುವ ಬಡ್ಡಿ ರಹಿತ ಅಲ್ಪಾವಧಿ ಸಾಲದ ಮಿತಿ ಮೂರು ಲಕ್ಷದಿಂದ ಐದು ಲಕ್ಷಕ್ಕೆ ಏರಿಸಿದ್ದೇವೆ. ವಿವೇಕ ಯೋಜನೆ ಅಡಿಯಲ್ಲಿ 7601 ಶಾಲಾಕೊಠಡಿಗಳು ಹಾಗೂ ಇತರ ಯೋಜನೆ ಅಡಿಯಲ್ಲಿ ಸೇರಿ ಒಟ್ಟು 9556 ಶಾಲಾ ಕೊಠಡಿಗಳ ನಿರ್ಮಾಣವನ್ನು ಪ್ರಸ್ತುತ ವರ್ಷ ಪೂರ್ಣಗೊಳಿಸುವ ಉದ್ದೇಶವಿದೆ. ಜೊತೆಗೆ ಇತರೆ ಅನೇಕ ಯೋಜನೆಗಳ ಅನುದಾನ ಕಡಿತಗೊಳಿಸದಂತೆ ಮಾಜಿ ಸಿಎಂ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬರೆದ ಪತ್ರದಲ್ಲಿ ಏನಿದೆ?
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿದ್ಧರಾಮಯ್ಯ ಅವರಿಗೆ ಅಭಿನಂದನೆಗಳು ಸಲ್ಲಿಸುವ ಮೂಲಕ ಪತ್ರ ಆರಂಭಿಸಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ತಾವೇ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುವಂತೆ ಎಲ್ಲ ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲು ಸುಮಾರು ಐವತ್ತು ಸಾವಿರ ಕೋಟಿ ರೂಪಾಯಿ ಬೇಕೆಂದು ರಾಜ್ಯದ ಜನತೆಗೆ ತಿಳಿಸಿದ್ದೀರಿ. ಈ ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ಕೆಲವು ಎಚ್ಚರಿಕೆ ವಹಿಸುವುದು ರಾಜ್ಯದ ಪ್ರಮುಖ ಕ್ಷೇತ್ರಗಳಾದ ಹಣಕಾಸು, ಶಿಕ್ಷಣ, ಆರೋಗ್ಯ, ಮಹಿಳಾ ಅಭಿವೃದ್ಧಿ, ಮೂಲಭೂತ ಸೌಕರ್ಯ, ರೈತರ ದೀನ ದಲಿತರ ಹಾಗೂ ಹಿಂದುಳಿದ ವರ್ಗಗಳ ಹಿತ ಕಾಪಾಡುವುದು ಅವಶ್ಯಕತೆ ಇದೆ ಎನ್ನುವ ಮಾತು ಜನರಲ್ಲಿ ಕೇಳಿ ಬರುತ್ತಿದೆ. ಅದನ್ನು ತಮ್ಮ ಗಮನಕ್ಕೆ ತರಲು ಬಯಸಿರುತ್ತೇನೆ.
ಇದನ್ನೂ ಓದಿ: ಸರ್ಕಾರದ ಕಾವೇರಿ ನಿವಾಸ ಖಾಲಿ ಮಾಡಿದ ಯಡಿಯೂರಪ್ಪ, ಈಗ ಮಾಜಿ ಸಿಎಂ ವಾಸ್ತವ್ಯ ಎಲ್ಲಿ?
- ರೈತರಿಗೆ ನೀಡಲಾಗುವ ಬಡ್ಡಿ ರಹಿತ ಅಲ್ಪಾವಧಿ ಸಾಲದ ಮಿತಿ ಮೂರು ಲಕ್ಷದಿಂದ ಐದು ಲಕ್ಷಕ್ಕೆ ಏರಿಸಿರುವುದು ಯಾವುದೇ ಹಣಕಾಸಿನ ಕಡಿತ ಮಾಡುವುದು ಸೂಕ್ತವಲ್ಲ.
- ವಿವೇಕ ಯೋಜನೆ ಅಡಿಯಲ್ಲಿ 7601 ಶಾಲಾಕೊಠಡಿಗಳು ಹಾಗೂ ಇತರ ಯೋಜನೆ ಅಡಿಯಲ್ಲಿ ಸೇರಿ ಒಟ್ಟು 9556 ಶಾಲಾ ಕೊಠಡಿಗಳ ನಿರ್ಮಾಣವನ್ನು ಪ್ರಸ್ತುತ ವರ್ಷ ಪೂರ್ಣಗೊಳಿಸುವ ಉದ್ದೇಶವಿದ್ದು ಇದರಲ್ಲಿ ಅನುದಾನದ ಕಡಿತ ಮಾಡಬಾರದು.
- ರೈತರು, ಕಾರ್ಮಿಕರು, ಮೀನುಗಾರರು, ನೇಕಾರರು ಇತರರಿಗೆ ರೈತ ವಿದ್ಯಾನಿಧಿ ಕಾರ್ಯಕ್ರಮ ಮುಂದುವರೆಸುವುದು ಅತ್ಯಂತ ಅವಶ್ಯವಿದ್ದು, ಸೂಕ್ತ ಅನುದಾನ, ಆಯವ್ಯಯದಲ್ಲಿ ಒದಗಿಸಿದ್ದು ಇದನ್ನು ಮುಂದುವರಿಸಬೇಕು ಎಂದಿದ್ದಾರೆ.
- ಮಹಿಳೆಯರಿಗೆ ಸ್ತ್ರೀ ಸಾಮರ್ಥ್ಯ ಯೋಜನೆ, ಮಹಿಳಾ ಮತ್ತು ಮಕ್ಕಳ ಪೌಷ್ಟಿಕ ಕಾರ್ಯಕ್ರಮಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭಿವೃದ್ಧಿಗೆ ಎಸ್ಸಿಪಿ, ಟಿಎಸ್ ಪಿ ಅನುದಾನವನ್ನು ಕಡಿತಗೊಳಿಸಬಾರದು, ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ನೀಡಿದ ಹಾಸ್ಟೆಲ್ ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಅದಕ್ಕೆ ಅನುದಾನ ಕಡಿತಗೊಳಿಸಬಾರದು.
- ರಾಜ್ಯ, ಜಿಲ್ಲಾ ರಸ್ತೆಗಳ ನಿರ್ಮಾಣ: ಪ್ರಗತಿ ಮೊಟಕುಗೊಳಿಸಬಾರದು ಹಾಗೂ ಕೇಂದ್ರ ರಾಜ್ಯ ಸಹಭಾಗಿತ್ವದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೆ ಹಣಕಾಸು ಒದಗಿಸುವುದು, ರಾಜ್ಯದ ಹಿತದೃಷ್ಟಿಯಿಂದ ಅತ್ಯಂತ ಅವಶ್ಯವಿದೆ. ನಗರ ಪ್ರದೇಶಗಳಲ್ಲಿ ನಗರೋತ್ಥಾನ ಸ್ಮಾರ್ಟ್ ಸಿಟಿ ಯೊಜನೆ ಮೆಟ್ರೊ ಸಬರಬನ್ ಯೋಜನೆಗಳನ್ನು ಮುಂದುವರೆಸುವುದು ಬೆಂಗಳೂರಿನ ಅಭಿವೃದ್ಧಿಗೆ ಅತಿ ಅವಶ್ಯವಿರುತ್ತದೆ.
- ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಅವಶ್ಯಕತೆ ಇದೆ ಇದು ರಾಜ್ಯ ಸರ್ಕಾರದ ಜವಾಬ್ದಾರಿ. ಈ ಬಗ್ಗೆ ಅನುದಾನವನ್ನು ಖಚಿತ ಪಡಿಸುದು ಹಾಗೂ ಸಮಗ್ರ ಮಾಹಿತಿಯನ್ನು ರಾಜ್ಯದ ಜನತೆಗೆ ಕೊಡಬೇಕಾಗಿ ನಾನು ಆಗ್ರಹ ಮಾಡುತ್ತೇನೆ, ತಾವು ಕೊಡುತ್ತಿರುವ ಗ್ಯಾರೆಂಟಿ ಯೋಜನೆಗಳಿಗೆ 50 ಸಾವಿರ ಕೋಟಿ ರೂ. ಅಗತ್ಯವಿರುವ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಬಾರದು ಹಾಗೂ ರಾಜ್ಯದ ಜನತೆಯ ಮೇಲೆ ಅಪರೊಕ್ಷವಾಗಿ ಹೆಚ್ಚಿನ ಭಾರ ಬೀಳಬಾರದೆಂದು ಈ ಪತ್ರ ಬರೆಯುತ್ತಿದ್ದೇನೆ, ತಾವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಿರಿ ಎಂಬ ನಂಬಿಕೆ ಇದೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.