ಬೆಂಗಳೂರು: ರಾಜ್ಯದಲ್ಲಿ ಭಾರಿ ಮಳೆ(Rain)ಯಾಗುತ್ತಿದ್ದು, ವಿವಿಧ ಜಿಲ್ಲೆಗಳಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ರಾಜಧಾನಿ ಬೆಂಗಳೂರಿನಲ್ಲಿ ಅಲ್ಲಲ್ಲಿ ಸಮಸ್ಯೆಗಳು ತಲೆದೋರಿದ್ದು, ಈ ನಿಟ್ಟಿನಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (H.D.Kumaraswami) ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಮಳೆ ಅನಾಹುತದ ಬಗ್ಗೆ ಹವಾಮಾನ ಇಲಾಖೆ (Department of Meteorology) ಮುನ್ಸೂಚನೆ ಇದ್ದರೂ ಸರ್ಕಾರ ಗಮನ ಹರಿಸಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, 1906-07 ರಲ್ಲಿ ಬಂದಂತಹ ರೀತಿಯ ದಾಖಲೆ ಮಳೆ ಆಗುತ್ತಿದೆ. ಈ ಹಿನ್ನೆಲೆ ನಮ್ಮ ಪಕ್ಷದ ಬೆಂಗಳೂರು ಮುಖಂಡರ ಸಭೆ ಕರೆದಿದ್ದೇನೆ. ದೊಡ್ಡ ದೊಡ್ಡ ಮುಖಂಡರು ಇಲ್ಲದೇ ಇದ್ದರೂ ಮಾನವೀಯತೆಯ ಉಳಿಸಿಕೊಂಡ ಮುಖಂಡರು ನಮ್ಮ ಪಕ್ಷದಲ್ಲಿ ಇದ್ದಾರೆ. ಶಾಸಕ ಮಂಜುನಾಥ್ ಅವರು ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೋರಾಟ ಮಾಡುತ್ತಾ ಇದ್ದಾರೆ ಎಂದರು.
ಇದನ್ನು ಓದಿ: ಕುಮಾರಸ್ವಾಮಿ
ಮೈತ್ರಿ ಸರ್ಕಾರದಲ್ಲಿನ ಅನುದಾನದ ಬಗ್ಗೆ ಮಾತನಾಡಿ ಸರ್ಕಾರಕ್ಕೆ ಚಾಟಿ ಬೀಸಿದ ಮಾಜಿ ಸಿಎಂ ಕುಮಾರಸ್ವಾಮಿ, ಮೈತ್ರಿ ಸರ್ಕಾರದಲ್ಲಿ ಕೊಟ್ಟ ಅನುದಾನದಲ್ಲಿ ಒಂದಿಷ್ಟು ಡೈವರ್ಟ್ ಮಾಡುವ ಕೆಲಸ ಮಾಡಿದ್ದರು. ಈ ಸರ್ಕಾರಕ್ಕೆ ಕ್ಷೇತ್ರದ ಜನರಿಗೆ ಅನುದಾನ ಕೊಡುವ ಪ್ರಾಮಾಣಿಕತೆ ಇಲ್ಲದೇ ಹೋಯ್ತು. ಸದ್ಯ ಆಗಿರುವ ಡ್ಯಾಮೇಜ್ ಅನ್ನು ಮುಂದೆ ಹೇಗೆ ಸರಿ ಮಾಡುವುದು ಎಂಬುದನ್ನು ನೋಡಬೇಕು. ಎರಡು ವರ್ಷದಿಂದ ಪಾಲಿಕೆ ಚುನಾವಣೆ ನಡೆಸಿಲ್ಲ. ಮಳೆ ಅನಾಹುತದ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ಇದ್ದರೂ ಸರ್ಕಾರ ಗಮನ ಹರಿಸಿಲ್ಲ. ಬೆಂಗಳೂರು ನಗರದ ಉಸ್ತುವಾರಿ ಸಚಿವರೂ ಸಿಎಂ ಆಗಿದ್ದಾರೆ. ಉಸ್ತುವಾರಿಗಾಗಿ ಇಬ್ಬರು ಸಚಿವರು ಪರಸ್ಪರ ಪೈಪೋಟಿಗಿಳಿದಿದ್ದೂ ನೋಡಿದ್ದೇವೆ ಎಂದರು.
ಸಭೆ ನಡೆಸುವ ಕನಿಷ್ಟ ಸೌಜನ್ಯವೂ ಇಲ್ವಾ?
ಬೆಂಗಳೂರಿನಲ್ಲಿ ಮಳೆ ಬಂತೆಂದರೆ ಸಾಕು. ನಗರವಾಸಿಗಳು ತಲೆಮೇಲೆ ಕೈಯಿಟ್ಟು ಕುಳಿತುಕೊಳ್ಳುವ ಪರಿಸ್ಥಿತಿ. ವಾಹನಸವಾರರ ಪಾಡು ಅಂತೂ ಹೇಳಿ ಪ್ರಯೋಜನವಿಲ್ಲ. ರಸ್ತೆಯಲ್ಲಿ ಮೊಣಕಾಲುದ್ದಕ್ಕು ತುಂಬಿದ ನೀರಿನಲ್ಲಿ ಸಂಚರಿಸುವ ಪರಿಸ್ಥಿತಿ. ಮಹಾನರದಲ್ಲಿ 7 ಮಂತ್ರಿಗಳಿದ್ದರೂ ಇಂಥ ಪರಿಸ್ಥಿತಿ ಬಂದಿದೆ ಎಂದರೆ, ಉಳಿದೆಡೆ ಹೇಗೆ ಎಂದು ಪ್ರಶ್ನಿಸಬೇಕಿದೆ. ಅಲ್ಲದೆ, ಇಲ್ಲಿನ ಮಂತ್ರಿಗಳು ಮಳೆಯಿಂದಾದ ಅವಾಂತರಗಳ ಬಗ್ಗೆ ಅವಲೋಕಿಸಲು ಈವರೆಗೆ ಸಭೆ ಕರೆಯದಿರುವುದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನು ಓದಿ: ಕುಮಾರಸ್ವಾಮಿ
ಮಳೆಯಿಂದ ಸಮಸ್ಯೆಗಳಾದರೂ ಮಹಾನಗರದ 7 ಸಚಿವರು ಇದುವರೆಗೆ ಸಭೆ ಕರೆಯದ ಬಗ್ಗೆ ಪ್ರಶ್ನಿಸಿದ ಕುಮಾರಸ್ವಾಮಿ, ಆರ್.ಆರ್ ನಗರದ ಶಾಸಕರು ಸಚಿವರು ಇಲ್ಲ. ಚಿಕ್ಕಮಗಳೂರಿಗೆ ಹೊಗೊಳಿ ಸರ್ಟಿಫಿಕೇಟ್ ಕೊಡಲು ಹೋಗಿದ್ದಾರೆ. ಒಂದಿಷ್ಟು ಕಡೆ ಕಾಟಾಚಾರಕ್ಕೆ, ಜನರ ಮಾತಿಗೆ ಭಯದಿಂದ ಹೋಗಿ ಬಂದಿದ್ದಾರೆ. ಕಾಲಮಿತಿಯೊಳಗೆ ಬಜೆಟ್ ಅನುಷ್ಠಾನ ಮಾಡಲು ಸಭೆ ಮಾಡಿದ್ದೀರಾ? ಪಕ್ಷದ ದೇಣಿಗೆಗಾಗಿ ಸಭೆಯಾ ಇದು ನನಗೆ ಗೊತ್ತಿಲ್ಲ. ಏಳು ಜನ ಮಂತ್ರಿಗಳು ಇರುವ ಮಹಾನಗರ ಇದು. ನಿನ್ನೆಯಿಂದ ಏನಾದ್ರೂ ಶಾಸಕರು, ಅಧಿಕಾರಿಗಳ ಸಭೆ ಕರೆದಿದ್ದಾರಾ? ಸಭೆ ನಡೆಸುವ ಕನಿಷ್ಟ ಸೌಜನ್ಯವೂ ಇವರಿಗೆ ಇಲ್ವಾ? ಎಂದು ಪ್ರಶ್ನಿಸಿದ್ದಾರೆ.
ನಾಡಿನ ಜನತೆಗೆ ಏನು ಸಂದೇಶ ಕೊಡುತ್ತಾ ಇದ್ದೀರಾ? ಹೇಳುವವರು ಕೇಳುವವರು ಯಾರೂ ಇಲ್ವಾ ನಿಮಗೆ? ಹೊರಮಾವುಗೆ ಸಚಿವರು ಹೋಗಿ ಸಮಸ್ಯೆಗಳನ್ನು ಫೆಬ್ರವರಿಗೆ ಸರಿ ಮಾಡುತ್ತೇವೆ ಅಂತಾರೆ. ಹಾಗಾದರೆ 800 ಕೋಟಿ ದುಡ್ಡು ಏನಾಯ್ತು? ಅನುದಾನ ತೆಗೆದುಕೊಂಡು ಹೋಗಿ ಏನು ಮಾಡಿದ್ದೀರಿ? ರಾಜಕಾಲುವೆ ಕಥೆ ಏನಾಯಿತು? ಎಂದು ಪ್ರಶ್ನಿಸಿದರು. ಅಲ್ಲದೆ, ನಗರ ಪ್ರದಕ್ಷಿಣೆ ಫೋಟೋಗೆ ಸೀಮಿತವಾಗಬಾರದು. ಹಿರಿಯ ಅಧಿಕಾರಿಗಳ ಸಭೆ ಕರೆಯಿರಿ. ಬೆಂಗಳೂರಲ್ಲಿ ಕಮಿಷನರ್ ಆಗಿ ಕೆಲಸ ಮಾಡಿದವರನ್ನು ಕರೆದು ಚರ್ಚೆ ಮಾಡಿ ಎಂದು ಸಲಹೆ ನೀಡಿದರು.
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ