ನನ್ನ ಸಲಹೆ ಕೇಳುತ್ತಿದ್ದರೆ ಕುಮಾರಸ್ವಾಮಿ ಈಗಲೂ ಮುಖ್ಯಮಂತ್ರಿ ಆಗಿರುತ್ತಿದ್ದರು: ಶಾಸಕ ರಾಮಸ್ವಾಮಿ ಹೇಳಿಕೆ
ನನ್ನ ಸಲಹೆಯನ್ನು ಅಂದು ಕೇಳಿದ್ದಿದ್ದರೆ ಇಂದಿಗೂ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿ ಇರುತ್ತಿದ್ದರು. ನನ್ನ ಸಲಹೆಗಳನ್ನು ನೀವು ಯಾಕೆ ಕೇಳಲಿಲ್ಲವೋ ಗೊತ್ತಿಲ್ಲ. ಹಾಸನದಲ್ಲಿ ಜೆಡಿಎಸ್ ಶಾಸಕ ರಾಮಸ್ವಾಮಿ ಹೇಳಿಕೆ.
ಹಾಸನ: ಜೆಡಿಎಸ್(JDS) ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿದ್ದ, ಪಕ್ಷದೊಂದಿಗೆ ಕಾಣಿಕೊಳ್ಳದ ಶಾಸಕ ಎ.ಟಿ.ರಾಮಸ್ವಾಮಿ(A.T.Ramaswami), ಇಂದು ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(H.D.Kumaraswami) ಅವರೊಂದಿಗೆ ವೇದಿಕೆ ಹಂಚಿಕೊಂಡು ಅಚ್ಚರಿ ಮೂಡಿಸಿದರು. ಅಲ್ಲದೆ, ಕುಮಾರಸ್ವಾಮಿ ನಡೆಯ ಬಗ್ಗೆ ರಾಮಸ್ವಾಮಿ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಲ್ಲಿತಮ್ಮನಹಳ್ಳಿಯಲ್ಲಿ ನಡೆದ ದೇಗುಲ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಸಲಹೆಯನ್ನು ಅಂದು ಕೇಳಿದ್ದಿದ್ದರೆ ಇಂದಿಗೂ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿ ಇರುತ್ತಿದ್ದರು. ನನ್ನ ಸಲಹೆಗಳನ್ನು ನೀವು ಯಾಕೆ ಕೇಳಲಿಲ್ಲವೋ ಗೊತ್ತಿಲ್ಲ. ಬಹುಶಃ ನಿಮ್ಮ ಸಹೋದರ ರೇವಣ್ಣನ ಮಾತು ಕೇಳಿದ್ರೋ ಏನೋ ಎಂದು ಕುಟುಕಿದರು.
ಇದ್ದನ್ನು ಓದಿ: ಹೆಚ್.ಡಿ. ಕುಮಾರಸ್ವಾಮಿ
ಈ ವೇಳೆ ಎದ್ದು ನಿಂತು ಮಾತನಾಡಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, ಅಭಿವೃದ್ಧಿಯಲ್ಲಿ ನಾನು ಎಂದೂ ರಾಮಸ್ವಾಮಿ ಅವರನ್ನು ಮೀರಿಸಲು ಸಾಧ್ಯ ಇಲ್ಲ. ನನ್ನ ರಾಜಕೀಯ ಜೀವನದಲ್ಲಿ 25 ವರ್ಷ ಶಾಸಕನಾಗಿದ್ದೇನೆ. ಸಚಿವನೂ ಆಗಿದ್ದೇನೆ. ಒಂದುಬಾರಿ ನಿಮ್ಮನ್ನ ಮಂತ್ರಿ ಮಾಡಬೇಕು ಎಂದು ನನ್ನ ಆಸೆ ಇದೆ ಎಂದು ಹೇಳಿದರು.
ರೇವಣ್ಣ ಅವರ ಮಾತಿಗೆ ಪ್ರತಿಕ್ರಿಯಿಸಿದ ರಾಮಸ್ವಾಮಿ, ನಾನು ಸಚಿವನಾಗಬೇಕೆಂದು ಯಾವತ್ತಿಗೂ ಬಯಸಿದವನಲ್ಲ. ನಾನು ಸಚಿವನಾಗಲು ಬಯಸಿದ್ದರೆ ಎಂದೋ ಆಗಬಹುದಿತ್ತು. ಸಾಕಷ್ಟು ಬಾರಿ ನನ್ನನ್ನ ಕರೆದಿರುವ ಬಗ್ಗೆ ನಿಮಗೆ ಗೊತ್ತಿರುವ ವಿಚಾರ. ನಾನು ಅದಿಕಾರಕ್ಕಾಗಿ, ಹಣಕ್ಕಾಗಿ ಎಂದು ರಾಜಕೀಯ ಮಾಡಿಲ್ಲ ಎಂದರು.
ಇದನ್ನು ಓದಿ: ಎಚ್.ಡಿ.ರೇವಣ್ಣ
ಒಂದೇ ವೇದಿಕೆಯಲ್ಲಿ ಕುಮಾರಸ್ವಾಮಿ ಮತ್ತು ರಾಮಸ್ವಾಮಿ
ಜೆಡಿಎಸ್ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿದ್ದ ಶಾಸಕ ಎ.ಟಿ.ರಾಮಸ್ವಾಮಿ, ಜೆಡಿಎಸ್ ಜಲಧಾರೆ ಸಮಾವೇಶಕ್ಕೂ ಗೈರಾಗಿದ್ದರು. ಇದೀಗ ಮತ್ತೆ ವೇದಿಕೆ ಹಂಚಿಕೊಂಡಿದ್ದಾರೆ. ಅದರಂತೆ, ಹಾಸನದಲ್ಲಿ ನಡೆದ ನೂತನ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಶಾಸಕ ಎ.ಟಿ.ರಾಮಸ್ವಾಮಿ ವೇದಿಕೆ ಹಂಚಿಕೊಂಡಿದ್ದಾರೆ. ಅರಕಲಗೂಡು ತಾಲೂಕಿನ ಮಲ್ಲಿತಮ್ಮನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ದೇವಮ್ಮದೇವಿ ಮತ್ತು ಗ್ರಾಮದೇವತೆಗಳ ಪುನರ್ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮ ಇದಾಗಿದೆ. ಈ ವೇಳೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಶಾಸಕ ಸಿ.ಎನ್. ಬಾಲಕೃಷ್ಣ ಉಪಸ್ಥಿತರಿದ್ದರು.
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ
Published On - 5:16 pm, Tue, 17 May 22