ಮಳೆ ಹಾನಿ ಪ್ರದೇಶಗಳಿಗೆ ವಿಪಕ್ಷ ನಾಯಕ ಭೇಟಿ: ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ
ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ, ಒತ್ತುವರಿಯಾಗಿರುವ ರಾಜಕಾಲುವೆಗಳ ತೆರವಿಗೆ ಒತ್ತಾಯಿಸಿದರು.
ಬೆಂಗಳೂರು: ಸುರಿದ ಧಾರಾಕರ ಮಳೆ(Rain)ಗೆ ಬೆಂಗಳೂರಿನಲ್ಲಿ ಜನಜೀವನ ತತ್ತರಿಸಿದ್ದು, ರಾಜಕಾಲುವೆಗಳ ನೀರು ರಸ್ತೆಗೆ ನುಗ್ಗಿತ್ತು. ಈ ನಿಟ್ಟಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರು ಬೆಂಗಳೂರು ಸಿಟಿ ರೌಂಡ್ಸ್ ಹೊಡಿದ್ದಾರೆ. ಗಾಂಧಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮಳೆ ಹಾನಿ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಿದ್ದರಾಮಯ್ಯ, ಶೇಷಾದ್ರಿಪುರ ರಾಜಕಾಲುವೆ (storm water drain) ಬಳಿ ಪರಿಶೀಲನೆ ನಡೆಸಿದರು. ನಿನ್ನೆ ಸುರಿದ ಭಾರಿ ಮಳೆಗೆ ಈ ರಾಜಕಾಲುವೆಯಿಂದ ನೀರು ಉಕ್ಕಿಹರಿದಿತ್ತು. ಬೆಂಗಳೂರಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜಕಾಲುವೆ ಒತ್ತುವರಿ ತೆರವಿಗೆ ಇಚ್ಛಾಶಕ್ತಿ ಬೇಕು
ಬೆಂಗಳೂರಿನಲ್ಲಿ ರಾಜಕಾಲುವೆಗಳ ಒತ್ತುವರಿಯಿಂದಾಗಿ ಸಮಸ್ಯೆಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ರಾಜಕಾಲುವೆಗಳ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಸಿಟಿ ರೌಂಡ್ಸ್ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೆಲವರು ಅಕ್ರಮವಾಗಿ ರಾಜಕಾಲುವೆಗಳಲ್ಲಿ ಮನೆ ಕಟ್ಟಿಕೊಂಡು ಕೂತಿದ್ದಾರೆ. ನಮ್ಮ ಅವಧಿಯಲ್ಲಿ ರಾಜಕಾಲುವೆ ತೆರವು ಮಾಡಿದ್ದೆವು. ಇದಕ್ಕೆಲ್ಲ ರಾಜಕೀಯ ಇಚ್ಛಾಶಕ್ತಿ ಇರಬೇಕು ಎಂದರು.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಒಂದು ಕುಟುಂಬಕ್ಕೆ ಒಂದು ಟಿಕೆಟ್ ವಿಚಾರ; ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದೇನು?
ಬಿಬಿಎಂಪಿ, BWSSB, ಬಿಡಿಎ ನಡುವೆ ಸಮನ್ವಯ ಕೊರತೆಯಿದೆ. ಸರ್ಕಾರ ಹಣ ಬಿಡುಗಡೆ ಮಾಡದೇ ಕಾಮಗಾರಿ ವಿಳಂಬ ಆಗುತ್ತಿದೆ. ಬೇಸಿಗೆಯಲ್ಲಿ ಮಾಡಬೇಕಾದ ಕೆಲಸ ಮಳೆಗಾಲದಲ್ಲಿ ಮಾಡುತ್ತಿದ್ದಾರೆ. ರಾಜಕಾಲುವೆ ಸ್ವಚ್ಛ ಮಾಡದೆ ಇರೋದಕ್ಕೆ ಈಗ ಸಮಸ್ಯೆ ಆಗಿದೆ. ಸರ್ವ ವ್ಯಾಪಿ, ಸರ್ವ ಸ್ಪರ್ಶಿ, ಅಭಿವೃದ್ಧಿ ನಿರಂತರ ಎಂದು ಹೇಳುವ ಬದಲು ಮೊದಲು ಮುಖ್ಯಮಂತ್ರಿಯವರು ಕೆಲಸ ಮಾಡಬೇಕು ಎಂದರು.
ಬೆಂಗಳೂರು ಅಭಿವೃದ್ಧಿ ಖಾತೆ ಮುಖ್ಯಮಂತ್ರಿ ಅವರ ಬಳಿ ಇದೆ. ಅವರ ಮೊದಲ ಕೆಲಸ ಮಾಡಲಿ. ನಾನು ಬೆಂಗಳೂರು ಅಭಿವೃದ್ಧಿ ಖಾತೆಯನ್ನ ಬೇರೆಯವರಿಗೆ ನೀಡಿದ್ದೆ. ಸಿಎಂ ಈ ಖಾತೆ ತನ್ನಲ್ಲೇ ಇಟ್ಟುಕೊಂಡಿರುವುದರಿಂದ ಬೆಂಗಳೂರು ನಗರದ ಸಮಸ್ಯೆಗಳು ದುಪ್ಪಟ್ಟು ಆಗಿವೆ. ಸೋಲಿನ ಭೀತಿಯಿಂದ ಬಿಬಿಎಂಪಿ ಎಲೆಕ್ಷನ್ ಮುಂದೂಡಿಕೆ ಮಾಡಿರುವುದು ಕೂಡ ಇದಕ್ಕೆ ಕಾರಣ. ವಾರ್ಡ್ಗಳಲ್ಲಿ ಜನಪ್ರತಿನಿಧಿಗಳು ಇಲ್ಲದಿದ ಹಿನ್ನೆಲೆ ಪಾಲಿಕೆ ಅಧಿಕಾರಿಗಳ ಕೈಯಲ್ಲಿದೆ. ಬೆಂಗಳೂರು ನಗರದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಲಾಗಿದೆ. ನಾನು ಇದ್ದಾಗ ಬೆಂಗಳೂರಿಗೆ ಹಣ ಬಿಡುಗಡೆ ಮಾಡಿದ್ದೆ. ಇವರು ಬಂದ ಮೇಲೆ ಏನೂ ಮಾಡಿಲ್ಲ. ಬೆಂಗಳೂರು ನಗರ ಅಭಿವೃದ್ಧಿಯಲ್ಲಿ ಸರ್ಕಾರ ಸಂಪೂರ್ಣ ವಿಫಲ ಆಗಿದೆ ಎಂದರು.
ಸಿದ್ದು ಸಿಟಿ ರೌಂಡ್ ವೇಳೆ ಜಿಟಿಜಿಟಿ ಮಳೆ
ಸಿದ್ದರಾಮಯ್ಯ ಅವರು ಶಿವಾಜಿನಗರದ ಸುತ್ತಮುತ್ತ ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿ ಜಿಟಿಜಿಟಿ ಮಳೆಯಾಗಿದೆ. ಇದನ್ನು ಲೆಕ್ಕಿಸದೇ ಅವರು ಸಿಟಿ ರೌಂಡ್ಸ್ ಮಾಡಿದ್ದಾರೆ. ಪರಿಶೀಲನೆ ನಡುವೆ ಸಿದ್ದರಾಮಯ್ಯ ಅವರು ಶುಗರ್ ಲೆಸ್ ಟೀ ಸೇವನೆ ಮಾಡಿದರು. ನಂತರ ಶಿವಾಜಿನಗರದ ಹಳೇ ಪೋಸ್ಟ್ ಆಫೀಸ್ ರಸ್ತೆಯ ದಡ್ಡಿ ಪ್ರದೇಶಕ್ಕೆ ಭೇಟಿ ನೀಡಿದರು. ಅಲ್ಲದೆ ಶಿವಾಜಿನಗರದ ಬ್ರಾಡ್ ವೇ ರಸ್ತೆ, ಹಳೇ ಪೋಸ್ಟ್ ಆಫೀಸ್ ರಸ್ತೆ ಫಾತಿಮಾ ಮಸೀದಿ ಹಾಗೂ ಬ್ಯಾಟರಾಯನಪುರ ಹಫೀಜಾ ಶಾಲೆಗೆ ಭೇಟಿ ನೀಡಿದರು.
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ
Published On - 7:11 pm, Thu, 19 May 22