ಕೆಂಗೇರಿ ಬಾರ್ ರೆಸ್ಟೋರೆಂಟ್ ಪರವಾನಗಿಗೆ ಲಂಚ, ಅಬಕಾರಿ ಇನ್ಸ್ಪೆಕ್ಟರ್ ಅಂದರ್; ಭೋವಿ ನಿಗಮದ ಪ್ರಧಾನ ವ್ಯವಸ್ಥಾಪಕ ಮನೆ ಮೇಲೆ ಎಸಿಬಿ ದಾಳಿ
ಬಾರ್ & ರೆಸ್ಟೋರೆಂಟ್ ಸನ್ನದು ಮಂಜೂರು ಮಾಡಲು ಇನ್ಸ್ಪೆಕ್ಟರ್ ಮಂಜುನಾಥ್ ಅನುಮತಿ ನೀಡಲು 15 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. 11 ಲಕ್ಷ ಹಣ ಅಡ್ವಾನ್ಸ್ ಪಡೆದು, ಬಾಕಿ 4 ಲಕ್ಷ ರೂಪಾಯಿಗೂ ಬೇಡಿಕೆಯಿಟ್ಟಿದ್ದರು. ಇಂದು 4 ಲಕ್ಷ ಹಣ ಸ್ವೀಕರಿಸುವಾಗ ಎಸಿಬಿ ವಶವಾದರು.

ಬೆಂಗಳೂರು: ಬಾರ್ & ರೆಸ್ಟೋರೆಂಟ್ (Restaurant) ಸನ್ನದು ಮಂಜೂರು (Licence) ಮಾಡಲು ಲಂಚಕ್ಕೆ ಬೇಡಿಕೆಯಿಟ್ಟ ಪ್ರಸಂಗ ನಡೆದಿದ್ದು, ಆರೋಪಿ ಅಬಕಾರಿ ಇನ್ಸ್ಪೆಕ್ಟರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೆಂಗೇರಿ ವಲಯದ (Kengeri) ಅಬಕಾರಿ ಇನ್ಸ್ಪೆಕ್ಟರ್ ಮಂಜುನಾಥ್ ಎಸಿಬಿ (ACB) ಬಲೆಗೆ ಬಿದ್ದ ಅಧಿಕಾರಿ. ದೂರುದಾರ ಸಿಎಲ್ 7 ಸನ್ನದಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿ ಅಬಕಾರಿ ಆಯುಕ್ತರು, ಅಬಕಾರಿ ಇನ್ಸ್ಪೆಕ್ಟರಿಗೆ ವರ್ಗಾಯಿಸಿದ್ದರು. ಆದರೆ ಇನ್ಸ್ಪೆಕ್ಟರ್ ಮಂಜುನಾಥ್ ಅನುಮತಿ ನೀಡಲು 15 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದರು (Bribe). 11 ಲಕ್ಷ ಹಣ ಅಡ್ವಾನ್ಸ್ ಪಡೆದು, ಬಾಕಿ 4 ಲಕ್ಷ ರೂಪಾಯಿಗೂ ಬೇಡಿಕೆಯಿಟ್ಟಿದ್ದರು. ಇಂದು 4 ಲಕ್ಷ ಹಣ ಸ್ವೀಕರಿಸುವಾಗ ಎಸಿಬಿ ವಶವಾದರು. 1 ಲಕ್ಷದ 2 ಸಾವಿರದ ನೂರು ರೂಪಾಯಿಗೂ ಹೆಚ್ಚು ಹಣದ ಸಮೇತ ಆರೋಪಿ ಅಧಿಕಾರಿಯನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದರು.
ಭೋವಿ ಅಭಿವೃದ್ಧಿ ನಿಗಮದ ಅಧಿಕಾರಿ ನಾಗರಾಜಪ್ಪ ಮನೆ ಮೇಲೆ ಎಸಿಬಿ ದಾಳಿ ಪ್ರಕರಣ
ಇನ್ನು, ಭೋವಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪ ಮನೆ ಮೇಲೆ ಎಸಿಬಿ ದಾಳಿ ಪ್ರಕರಣದಲ್ಲಿ ಎಸಿಬಿ ತನಿಖೆ ಮುಂದುವರೆದಿದೆ. ಪ್ರಕರಣ ಸಂಬಂಧ ಮಾಗಡಿ ರಸ್ತೆಯ ಸನ್ ಫ್ಲವರ್ ಅಪಾರ್ಟ್‌ಮೆಂಟಿನಲ್ಲಿ ನಾಗರಾಜಪ್ಪಗೆ ಸೇರಿದ ಫ್ಲ್ಯಾಟ್ ಮೇಲೆ ದಾಳಿ ನಡೆದಿತ್ತು. ವಿಜಯನಗರದ ಎಂ.ಸಿ. ಲೇಔಟಿನಲ್ಲಿ ವಾಸದ ಮನೆ, 1 ಕಾರು, 1 ದ್ವಿಚಕ್ರ ವಾಹನ, 26 ಸಾವಿರ ರೂ ಮೌಲ್ಯದ ಗೃಹೋಪಯೋಗಿ ವಸ್ತುಗಳು ಜಪ್ತಿಯಾಗಿವೆ. ಬೇನಾಮಿ ಹೆಸರಿನ ಖಾತೆಗಳಲ್ಲಿ 29.40 ಲಕ್ಷ ಠೇವಣಿ ಪತ್ತೆಯಾಗಿದೆ. ಅಸಮತೋಲಿತ ಆಸ್ತಿ ಹೊಂದಿರುವ ಬಗ್ಗೆ ಮಾಹಿತಿ ಆಧರಿಸಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.
ವಿದ್ಯಾರ್ಥಿ ವೀಸಾದಲ್ಲಿ ಭಾರತಕ್ಕೆ ಬಂದು ಮಾದಕ ದಂಧೆ
ವಿದ್ಯಾರ್ಥಿ ವೀಸಾದಲ್ಲಿ ಭಾರತಕ್ಕೆ ಬಂದು ಮಾದಕ ದಂಧೆ ಮಾಡುತ್ತಿದ್ದ ತಾಂಜಾನಿಯಾ ಮೂಲದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 4 ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದಿದ್ದ ಆರೋಪಿ ಅರ್ಧಕ್ಕೇ ಓದು ನಿಲ್ಲಿಸಿ, ಎಂಡಿಎಂಎ ಮಾರಾಟದಲ್ಲಿ ತೊಡಗಿದ್ದ. ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ದಂಧೆಯಲ್ಲಿ ತೊಡಗಿದ್ದಾಗ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತನಿಂದ 15 ಲಕ್ಷ ಮೌಲ್ಯದ 150 ಗ್ರಾಂ ಎಂಡಿಎಂಎ ಜಪ್ತಿ ಮಾಡಲಾಗಿದೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರವಾರ: ಅಕ್ರಮವಾಗಿ ಸಾಗಿಸುತಿದ್ದ 400 ಕೆಜಿ ಗೋಮಾಂಸ ವಶ
ಅಕ್ರಮವಾಗಿ ಸಾಗಿಸುತ್ತಿದ್ದ 80 ಸಾವಿರ ರೂಪಾಯಿ ಮೌಲ್ಯದ 400 ಕೆಜಿ ಗೋಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಭಟ್ಕಳದ ಶಿರಾಲಿ ಚಕ್ ಪೋಸ್ಟ್ ನಲ್ಲಿ ಮಾಂಸ ಸಾಗಣೆ ವಾಹನ ಸಹಿತ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಮೂವರು ಪರಾರಿಯಾಗಿದ್ದಾರೆ. ಸೈಯ್ಯದ್ ಮೋಹಿದೀನ್ ಅಲಿ ಬಂಧಿತ ಆರೋಪಿ. ಗಜಬರ್ ಯಾನೆ ಸಮೀರ್, ಇಬ್ರಾಹಿಂ ಮುಹಮ್ಮದ್ ಹುಸೇನ್ ಮತ್ತು ನಾಸೀರ್ ಪರಾರಿಯಾದವರು. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Also Read: ಹವಾಮಾನ ಇಲಾಖೆ ಮುನ್ಸೂಚನೆ ಇದ್ದರೂ ಸರ್ಕಾರ ಗಮನ ಹರಿಸಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ ಆರೋಪ
Published On - 8:53 pm, Thu, 19 May 22