ಏಕಾಂಗಿ ಪ್ರವಾಸ ಕೈಬಿಟ್ಟ ಮಾಜಿ ಸಿಎಂ ಯಡಿಯೂರಪ್ಪ; ಬಿಜೆಪಿ ನಿಯಮಗಳೇ ಒಬ್ಬರೇ ಪ್ರವಾಸ ಮಾಡಲು ಅಡ್ಡಿ!
ಬಿಜೆಪಿಯ ನಿಯಮಗಳ ಪ್ರಕಾರ ಪಕ್ಷದ ಯಾವುದೇ ನಾಯಕ ರಾಜ್ಯ ಪ್ರವಾಸ ಕೈಗೊಳ್ಳಬೇಕಾದರೆ ಪಕ್ಷ ಪ್ರವಾಸ ಕಾರ್ಯಕ್ರಮ ಸಿದ್ಧಪಡಿಸಬೇಕು. ಪಕ್ಷದಿಂದ ಪ್ರವಾಸ ಪಟ್ಟಿ ಮತ್ತು ವಿಷಯ ನಿಗದಿಯಾಗದೇ ಒಬ್ಬರೇ ಪ್ರವಾಸ ಸಾಧ್ಯವಿಲ್ಲ.
ಬೆಂಗಳೂರು: ಗಣೇಶ ಚತುರ್ಥಿ ಹಬ್ಬದ ಬಳಿಕ ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಘೋಷಿಸಿದ್ದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ(BS Yediyurappa) ತಮ್ಮ ಪ್ರವಾಸದ ರೂಪುರೇಷೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆ. ಈಮುನ್ನ ಅವರೊಬ್ಬರೇ ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಅವರು ತಿಳಿಸಿದ್ದರು. ಆದರೆ ಇದೀಗ ಒಬ್ಬರೇ ಪ್ರವಾಸ ಕೈಗೊಳ್ಳುವ ಬದಲು ಪಕ್ಷದ ಮುಖಂಡರ ಜತೆಗೂಡಿ ಪ್ರವಾಸ ಮಾಡಲು ಬಿ.ಎಸ್.ಯಡಿಯೂರಪ್ಪ ತೀರ್ಮಾನಿಸಿದ್ದಾರೆ.
ಬಿಜೆಪಿಯ ನಿಯಮಗಳ ಪ್ರಕಾರ ಪಕ್ಷದ ಯಾವುದೇ ನಾಯಕ ರಾಜ್ಯ ಪ್ರವಾಸ ಕೈಗೊಳ್ಳಬೇಕಾದರೆ ಪಕ್ಷ ಪ್ರವಾಸ ಕಾರ್ಯಕ್ರಮ ಸಿದ್ಧಪಡಿಸಬೇಕು. ನಿರ್ದಿಷ್ಟ ವಿಷಯಗಳನ್ನು ಇಟ್ಟುಕೊಂಡು ಪ್ರವಾಸ ಕಾರ್ಯಕ್ರಮ ಸಿದ್ಧಪಡಿಸಬೇಕು. ಪಕ್ಷದಿಂದ ಪ್ರವಾಸ ಪಟ್ಟಿ ಮತ್ತು ವಿಷಯ ನಿಗದಿಯಾಗದೇ ಒಬ್ಬರೇ ಪ್ರವಾಸ ಸಾಧ್ಯವಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿರುವ ಕಾರಣದಿಂದ ಏಕ ವ್ಯಕ್ತಿ ಪ್ರವಾಸ ಸೂಕ್ತವೂ ಅಲ್ಲ ಎಂದು ಅವರು ತೀರ್ಮಾನಿಸಿದ್ದಾರೆ. ವಿಧಾನ ಪರಿಷತ್, ಜಿಲ್ಲಾ ಪಂಚಾಯತ್ ಮತ್ತು ತಾಲೂಕಾ ಪಂಚಾಯತ್ ಚುನಾವಣೆಗಳಿಗಾಗಿ ಶೀಘ್ರವೇ ರಾಜ್ಯದಲ್ಲಿ ಪಕ್ಷದಿಂದ ಸಂಘಟನಾ ಪ್ರವಾಸದಂತೆ ಅವರು ತಮ್ಮ ಪ್ರವಾಸವನ್ನು ರೂಪಿಸಲು ಅವರು ತೀರ್ಮಾನಿಸಿದ್ದಾರೆ. ಈ ಉದ್ದೇಶದ ಈಡೇರಿಕೆಗೆ ಮಾಜಿ ಸಿಎಂ ಯಡಿಯೂರಪ್ಪ ಒಬ್ಬರೇ ಪ್ರವಾಸ ನಡೆಸುವುದು ಸಮಂಜಸವಲ್ಲ. ಪಕ್ಷದಿಂದ ಕಾರ್ಯಸೂಚಿ ಸಿದ್ಧವಾಗದೇ ಒಬ್ಬರೇ ಪ್ರವಾಸ ನಡೆಸಿದರೆ ಪಕ್ಷದ ಮಟ್ಟದಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತವೆ ಎಂಬ ಕಾರಣಗಳು ಏಕಾಂಗಿ ಪ್ರವಾಸವನ್ನು ಮಾಡದಂತೆ ಅವರನ್ನು ತಡೆದಿವೆ ಎಂಬ ಮಾಹಿತಿ ಬಿಜೆಪಿ ಮೂಲಗಳಿಂದ ಲಭ್ಯವಾಗಿದೆ.
ಇತ್ತೀಚೆಗಷ್ಟೇ ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಘೋಷಿಸಿದ್ದರು. 2023ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಸಿದ್ಧತೆಯಲ್ಲಿ ತೊಡಗಿರುವ ಮಾಜಿ ಸಿಎಂ ಯಡಿಯೂರಪ್ಪ ರಾಜ್ಯದ ತುಂಬ ಪ್ರವಾಸ ಮಾಡಲೆಂದು ಬರೋಬ್ಬರಿ 1 ಕೋಟಿ ರೂ. ಮೌಲ್ಯದ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Polls 2023) ಬಿಜೆಪಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಪಣ ತೊಟ್ಟಿರುವ ಬಿ.ಎಸ್. ಯಡಿಯೂರಪ್ಪ ತಮ್ಮ ಪ್ರವಾಸಕ್ಕೆಂದು 1 ಕೋಟಿ ರೂ. ಮೌಲ್ಯದ ಹೊಸ ಟೊಯೊಟಾ ವೆಲ್‌ಫೈರ್ (Toyota Vellfire) ಕಾರನ್ನು ಖರೀದಿಸಿದ್ದಾರೆ.
78 ವರ್ಷದ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ತಮ್ಮ ಕುಟುಂಬಸ್ಥರೊಂದಿಗೆ ಮಾಲ್ಡೀವ್ಸ್ಗೆ ಪ್ರವಾಸಕ್ಕೆ ತೆರೆಳಿದ್ದರು. ಕುಟುಂಬದೊಂದಿಗೆ ಮಾಲ್ಡೀವ್ಸ್ನಲ್ಲಿ ಎಂಜಾಯ್ ಮಾಡಿದ ಯಡಿಯೂರಪ್ಪ ಸೋಮವಾರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಾಪಾಸಾಗಿದ್ದಾರೆ. ಈ ವೇಳೆ ಅವರನ್ನು ಬರಮಾಡಿಕೊಳ್ಳಲು ಹೊಸ ಟೊಯೊಟಾ ವೆಲ್‌ಫೈರ್ ಕಾರನ್ನು ತರಲಾಗಿತ್ತು. ಅಂದಾಜು 1 ಕೋಟಿ ರೂ. ಬೆಲೆಯ ಬಿಳಿ ಬಣ್ಣದ KA -05- ND – 4545 ನೋಂದಣಿ ಸಂಖ್ಯೆಯ ಟೊಯೊಟಾ ವೆಲ್‌ಫೈರ್ ಕಾರನ್ನು ಯಡಿಯೂರಪ್ಪ ತಮ್ಮ ರಾಜ್ಯ ಪ್ರವಾಸಕ್ಕಾಗಿ ಖರೀದಿ ಮಾಡಿದ್ದಾರೆ.
ಇದನ್ನೂ ಓದಿ:
ಮಾಜಿ ಸಿಎಂ ಯಡಿಯೂರಪ್ಪ ಬೆಂಗಳೂರು ಅಭಿವೃದ್ಧಿಗಾಗಿ ಕೈಗೊಂಡ ಯೋಜನೆ ಮುಂದುವರಿಕೆ: ಸಿಎಂ ಬೊಮ್ಮಾಯಿ ಸೂಚನೆ
Shivamogga: ಯಡಿಯೂರಪ್ಪ-ಈಶ್ವರಪ್ಪ ಭೇಟಿ: ಟಿಫನ್ ಬ್ರೇಕ್ನಲ್ಲಿ ಒಂದಾದ ಕುಚಿಕು ಗೆಳೆಯರು
(Former CM Yediyurappa abandoned Karnataka solo tour BJP rules impede travel alone)