Janardhana Reddy: ಈ ಹಿಂದೆ ಸಿಬಿಐ ಬಂಧಿಸಿದ್ದ ರಹಸ್ಯ ಬಿಚ್ಚಿಟ್ಟ ಜನಾರ್ದನ ರೆಡ್ಡಿ, ಚುನಾವಣೆ ಹೊತ್ತಲ್ಲಿ ಹೊಸ ಬಾಂಬ್ ಸಿಡಿಸಿದ ಗಣಿ ಧಣಿ

| Updated By: ರಮೇಶ್ ಬಿ. ಜವಳಗೇರಾ

Updated on: Feb 12, 2023 | 10:44 PM

ಭರ್ಜರಿ ಪ್ರಚಾರದ ನಡುವೆ ಗಾಲಿ ಜನಾರ್ದನ ರೆಡ್ಡಿ ಅವರು ಸಿಬಿಐ ಬಂಧನ ರಹಸ್ಯವನ್ನು ಬಿಟ್ಟಿದ್ದಾರೆ. ಈ ಮೂಲಕ ಚುನಾವಣೆ ಸಂದರ್ಭದಲ್ಲಿ ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

Janardhana Reddy: ಈ ಹಿಂದೆ ಸಿಬಿಐ ಬಂಧಿಸಿದ್ದ ರಹಸ್ಯ ಬಿಚ್ಚಿಟ್ಟ ಜನಾರ್ದನ ರೆಡ್ಡಿ, ಚುನಾವಣೆ ಹೊತ್ತಲ್ಲಿ ಹೊಸ ಬಾಂಬ್ ಸಿಡಿಸಿದ ಗಣಿ ಧಣಿ
ಗಾಲಿ ಜನಾರ್ದನ ರೆಡ್ಡಿ
Follow us on

ಕೊಪ್ಪಳ: ಗಾಲಿ ಜನಾರ್ದನ ರೆಡ್ಡಿ (Janardhana Reddy) ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿ ಮುಂಬರು ವಿಧಾನಸಭೆ ಚುನಾವಣೆಗಾಗಿ ಕಾಲಿಗೆ ಚಕ್ರಕಟ್ಟಿಕೊಂಡು ಭರ್ಜರಿ ಪ್ರಚಾರ ನಡೆಸಿದ್ದಾರೆ. ಅದರಂತೆ ಇಂದು (ಫೆಬ್ರುವರಿ 12) ಕೊಪ್ಪಳದ ಗಂಗಾವತಿಯಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ರೆಡ್ಡಿ, ಈ ಹಿಂದೆ ಸಿಬಿಐ ತಮ್ಮನ್ನ ಬಂಧಿಸಿದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಸಿಬಿಐ ಮೂಲಕ ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಿತ್ತು. ಆದ್ರೆ, ಸುಷ್ಮಾ ಸ್ವರಾಜ್​ ನನ್ನ ಮೇಲಿಟ್ಟ ನಂಬಿಕೆ ಕಳೆದುಕೊಳ್ಳಲು ಇಷ್ಟವಿರಲಿಲ್ಲ. ಇದರಿಂದ ನನ್ನ ಬಂಧನವಾಯಿತು. ಕಾಂಗ್ರೆಸ್​ ಪಕ್ಷ ಸೇರದಿದ್ದರಿಂದ ಸಿಬಿಐ ಬಂಧಿಸಿತ್ತು ಎಂದು ಸ್ಫೋಟಕ ಆರೋಪ ಮಾಡಿದರು. ಈ ಮೂಲಕ ಚುನಾವಣೆ ಸಂದರ್ಭದಲ್ಲಿ ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

ಇದನ್ನೂ ಓದಿ: Janardhana Reddy: ನಾನು ಕಿಂಗ್ ಆಗಲು ಬಯಸಲ್ಲ, ಕಿಂಗ್‌ ಮೇಕರ್ ಆಗುತ್ತೇನೆ: ಜನಾರ್ದನ ರೆಡ್ಡಿ ಗುಡುಗು

ಕಾಂಗ್ರೆಸ್ ಪಕ್ಷ ಸಿಬಿಐ ಮುಖಾಂತರ ಪಕ್ಷ ಸೇರ್ಪಡೆ ಆಹ್ವಾನಿಸಿತ್ತು. ನಾನು ಬಂಧನವಾಗ್ತಿನಿ ಎಂದು ಗೊತ್ತಿತ್ತು. ಆವತ್ತು ಬೆಳಗ್ಗೆ ಸಿಬಿಐ ಅಧಿಕಾರಿಗಳು ನನ್ನ ಮನೆಗೆ ಬಂದಿದ್ರು. ನೀವು ಕಾಂಗ್ರೆಸ್ ಪಕ್ಷಕ್ಕೆ ಬಂದ್ಬಿಟ್ರೆ, ನಿಮ್ಮ ಬಂಧನವಾಗಲ್ಲ ಎಂದಿದ್ರು. ನೀವು ಸುಖವಾಗಿ ಎಲ್ಲಾ ವ್ಯಾಪಾರ ಮಾಡಿಕೊಂಡು ಹೋಗಿ ಎಂದಿದ್ರು ಎಂದು ಹೊಸ ಬಾಂಬ್ ಸಿಡಿಸಿದರು.

ನಾನು ಸುಷ್ಮಾ ಸ್ವರಾಜ್ ‌ಇಟ್ಟ ನಂಬಿಕೆಯನ್ನು ಹಾಳು ಮಾಡಿಕೊಳ್ಳಬಾರದೆಂದು ಕಾಂಗ್ರೆಸ್ ಹೋಗಲಿಲ್ಲ. ಬಿಜೆಪಿ ಪಕ್ಷಕ್ಕೆ ದ್ರೋಹ ಮಾಡಲಿಲ್ಲ. ಅದಕ್ಕಾಗಿಯೇ ನನ್ನ ಬಂಧನವಾಯ್ತು ಎಂದು ಜನಾರ್ಧನರೆಡ್ಡಿ ತಮ್ಮ ಬಂಧನದ ರಹಸ್ಯವನ್ನು ಬಿಚ್ಚಿಟ್ಟರು.

ಮೂರೂವರೆ ವರ್ಷ ಜೈಲಿನಲ್ಲಿದ್ದ ರೆಡ್ಡಿ

ಸೆಪ್ಟೆಂಬರ್ 5, 2011ರಲ್ಲಿ ಜನಾರ್ದನ ರೆಡ್ಡಿ ಹಾಗೂ ಒಬಳಾಪುರಂ ಮೈನಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ಸಂಬಂಧಿ ಬಿ.ವಿ.ಶ್ರೀನಿವಾಸ್ ರೆಡ್ಡಿ ಅವರನ್ನು ಸಿಬಿಐ ಬಂಧಿಸಿತ್ತು. ಬಳಿಕ ಅವರನ್ನು ಆಂಧ್ರಪ್ರದೇಶದ ಪೆನುಗೊಂಡ ಜೈಲಿನಲ್ಲಿ ಇಡಲಾಗಿತ್ತು. ಮೂರೂವರೆ ವರ್ಷದಿಂದ ಜೈಲಿನಲ್ಲಿದ್ದ ಗಣಿ ಧಣಿ 2015ರ ಜನವರಿ 24ರಂದು ಜಾಮೀನಿನ ಮೇಲೆ ಆಚೆ ಬಂದಿದ್ದರು. ಆದ್ರೆ, ಇದುವರೆಗೂ ರೆಡ್ಡಿ, ಬಳ್ಳಾರಿಗೆ ಹೋಗುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಷರತ್ತು ವಿಧಿಸಿದೆ.

ಆಸ್ತಿ ಜಪ್ತಿಗೆ ರಾಜ್ಯ ಗೃಹ ಇಲಾಖೆ ಅನುಮತಿ

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿ ಹುಮ್ಮಸ್ಸಿನಲ್ಲಿದ್ದ ಜನಾರ್ದನ ರೆಡ್ಡಿಗೆ ರಾಜ್ಯ ಸರ್ಕಾರ ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ. ರೆಡ್ಡಿಯ ಆಸ್ತಿ ಜಪ್ತಿಗೆ ಸರ್ಕಾರ ಕೊನೆಗೂ ಅಸ್ತು ಎಂದಿದೆ. ಅಕ್ರಮ ಗಣಿಗಾರಿಕೆ (Illegal Mining) ಹಣದಿಂದ ರೆಡ್ಡಿ ಹೊಸದಾಗಿ ತೆಲಂಗಾಣ ರಾಜ್ಯಗಳಲ್ಲಿ 219 ಕಡೆ ಆಸ್ತಿಗಳನ್ನು ಖರೀದಿ ಮಾಡಿದ್ದಾರೆ. ಈ ಆಸ್ತಿಗಳನ್ನು ಜಪ್ತಿ ಮಾಡಲು ಅನುಮತಿ ನೀಡಬೇಕೆಂದು ಸರ್ಕಾರಕ್ಕೆ 2022ರ ಆಗಸ್ಟ್‌ 30 ರಂದು ಸಿಬಿಐ (CBI) ಪ್ರಾಸಿಕ್ಯೂಷನ್‌ಗೆ ಮನವಿ ಮಾಡಿತ್ತು. ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಸಿಬಿಐ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಸಿಬಿಐ ಅರ್ಜಿಗೆ ಸರ್ಕಾರ ಯಾವುದೇ ಉತ್ತರ ನೀಡಿರಲಿಲ್ಲ. ಇದರಿಂದ ಸರಕಾರದ ಕ್ರಮವನ್ನು ಹೈಕೋರ್ಟ್‌ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ಎಚ್ಚೆತ್ತ ಸರ್ಕಾರ ರೆಡ್ಡಿ ಆಸ್ತಿ ಜಪ್ತಿಗೆ ಗ್ರೀನ್ ಸಿಗ್ನಲ್ ನೀಡಿದೆ.