ಮುದ್ದಹನುಮೇಗೌಡ ವಾಪಸ್ ಕಾಂಗ್ರೆಸ್ ಸೇರ್ಪಡೆ: ತುಮಕೂರು ಬಣ ರಾಜಕೀಯ ಬಯಲಿಗೆ

|

Updated on: Feb 22, 2024 | 7:28 PM

ಮಾಜಿ ಸಂಸದ ಮುದ್ದಹನುಮೇಗೌಡ ಅವರು ಕೊನೆಗೂ ವಾಪಸ್​ ಕಾಂಗ್ರೆಸ್​ ಬಳಗ ಸೇರಿದ್ದಾರೆ. ಜಿಲ್ಲೆಯ ಹಲವು ನಾಯಕರ ಸಮ್ಮುಖದಲ್ಲಿ ಇಂದು ಮುದ್ದಹನುಮೇಗೌಡ್ರು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದರು. ಆದ್ರೆ, ಮುದ್ದಹನುಮೇಗೌಡರನ್ನು ಸೇರಿಸಿಕೊಳ್ಳಲು ಮೊದಲಿನಿಂದಲೂ ವಿರೋಧಿಸಿದ್ದ ಮತ್ತೊಂದು ಬಣ ಇಂದು ಸೇರ್ಪಡೆ ಕಾರ್ಯಕ್ರಮಕ್ಕೆ ಗೈರಾಗಿದೆ. ಈ ಮೂಲಕ ಅಸಮಾಧಾನ ಹೊರಕಿದೆ. ಈ ಮೂಲಕ ತುಮಕೂರು ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಬಯಲಿಗೆ ಬಂದಿದೆ. ಹಾಗಾದ್ರೆ, ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಯಾರೆಲ್ಲಾ ಇದ್ದರು? ಯಾರೆಲ್ಲಾ ಗೈರಾಗಿದ್ರು ಎನ್ನುವ ವಿವರ ಇಲ್ಲಿದೆ.

ಮುದ್ದಹನುಮೇಗೌಡ ವಾಪಸ್ ಕಾಂಗ್ರೆಸ್ ಸೇರ್ಪಡೆ: ತುಮಕೂರು ಬಣ ರಾಜಕೀಯ ಬಯಲಿಗೆ
ಮುದ್ದಹನುಮೇಗೌಡ ಕಾಂಗ್ರೆಸ್ ಸೇರ್ಪಡೆ
Follow us on

ಬೆಂಗಳೂರು, (ಫೆಬ್ರವರಿ 22): ಮಾಜಿ ಸಂಸದ ಮುದ್ದಹನುಮೇಗೌಡ (former mp Muddhanumegowda ) ಅವರು ಬಿಜೆಪಿ ತೊರೆದು ಮತ್ತೆ ವಾಪಸ್​ ಕಾಂಗ್ರೆಸ್‌ಗೆ (congress) ಸೇರ್ಪಡೆಯಾದರು. ಬೆಂಗಳೂರಿನಲ್ಲಿ(Bengaluru) ಇಂದು(ಫೆಬ್ರವರಿ 22) ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar), ಕಾರ್ಯಾಧ್ಯಕ್ಷರಾದ ಸಲೀಂ ಅಹಮ್ಮದ್, ಬಿ.ಎನ್.ಚಂದ್ರಪ್ಪ ಹಾಗೂ ತುಮಕೂರು ಜಿಲ್ಲೆಯ ನಾಯಕರು, ಸಚಿವರೂ ಆದ ಡಾ.ಜಿ.ಪರಮೇಶ್ವರ್‌, ಕೆ.ಎನ್‌.ರಾಜಣ್ಣ ಸಮ್ಮುಖದಲ್ಲಿ ಸೇರ್ಪಡೆಗೊಂಡರು. ಶಾಸಕರಾದ ಗುಬ್ಬಿ ಶ್ರೀನಿವಾಸ್‌, ಡಾ.ರಂಗನಾಥ್‌, ಕೆ.ವೈ.ನಂಜೇಗೌಡ ಸಹ ಉಪಸ್ಥಿತರಿದ್ದರು. ಆದ್ರೆ, ಶಾಸಕರಾದ ಟಿ.ಬಿ.ಜಯಚಂದ್ರ, ಕೆ.ಷಡಕ್ಷರಿ ಹಾಗೂ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಅವರು ಕಾರ್ಯಕ್ರಮದಿಂದ ದೂರ ಉಳಿದು ಪರೋಕ್ಷವಾಗಿ ಮುದ್ದಹನುಮೇಗೌಡರ ಸೇರ್ಪಡೆಗೆ ಅಸಮಾಧಾನ ಹೊರಹಾಕಿದ್ದಾರೆ.

ಮುದ್ದಹನುಮೇಗೌಡರ ಬಗ್ಗೆ ರಾಜಣ್ಣ ಹೇಳಿದ್ದಿಷ್ಟು

ಮುದ್ದಹನುಮೇಗೌಡ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾತನಾಡಿದ ಸಚಿವ ಕೆಎನ್​​ ರಾಜಣ್ಣ, ಮುದ್ದಹನುಮೇಗೌಡ ಬಗ್ಗೆ ನನಗೆ ವೈಯಕ್ತಿಕವಾಗಿ ಕೋಪ ಇದೆ. ಆ ಪಕ್ಷ ಸರಿಯಿಲ್ಲ ಎಂದು ನಾನು, ಪರಮೇಶ್ವರ್ ಗಿಣಿಗೆ ಹೇಳಿದಂತೆ ಹೇಳಿದ್ದೆವು. ಕಾಂಗ್ರೆಸ್‌ ಪಕ್ಷದಿಂದ ಜೆಡಿಎಸ್‌ಗೆ, ಜೆಡಿಎಸ್‌ ಪಕ್ಷದಿಂದ ಕಾಂಗ್ರೆಸ್‌ಗೆ. ಮತ್ತೆ ಬಿಜೆಪಿಗೆ ಹೋಗಿ ತಪ್ಪಿನ‌ ಅರಿವಾಗಿ ಪಕ್ಷಕ್ಕೆ ವಾಪಸ್ ಬಂದಿದ್ದಾರೆ. ಈಗ ಕಾಂಗ್ರೆಸ್​ಗೆ ಬಂದಿದ್ದೀರಿ, ಮತ್ತೆ ಯಾವ ಪಕ್ಷಕ್ಕೂ ಹೋಗಬಾರದು ಎಂದು ಷರತ್ತು ಹಾಕಿದರು.

2014ರಲ್ಲಿ ಪರಮೇಶ್ವರ್ ಹಠ ಮಾಡಿ ಟಿಕೆಟ್ ಕೊಟ್ಟು ಎಂಪಿ ಮಾಡಿದ್ರು. ನಾವು ಬಸವರಾಜ್‌ಗೆ ಟಿಕೆಟ್ ಕೊಡಿಸಬೇಕು ಅಂತಾ ಪ್ಲ್ಯಾನ್‌ ಮಾಡಿದ್ದೆವು. ಒಮ್ಮೊಮ್ಮೆ ತಪ್ಪು ನಿರ್ಧಾರ ಕೈಗೊಳ್ಳುತ್ತಾರೆ ಅನ್ನೋದಕ್ಕೆ ಇವರೇ ಸಾಕ್ಷಿ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ಲಬೇಕು, ಈ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು ಎಂದು ಹೇಳಿದರು.

ಇದನ್ನೂ ಓದಿ: ಮರಳಿ ಕಾಂಗ್ರೆಸ್​​ ಸೇರುತ್ತಾರೆ ಎನ್ನುವ ಸುದ್ದಿಗೆ ಸ್ಪಷ್ಟನೆ ಕೊಟ್ಟ ಸುಧಾಕರ್, ಎಲ್ಲಾ ಗೊಂದಲಗಳಿಗೆ ತೆರೆ

ತಪ್ಪಿನ ಅರಿವು ಆಗಿದೆ ಎಂದ ಮುದ್ದಹನುಮೇಗೌಡ

ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಮಾತನಾಡಿದ ಮುದ್ದಹನುಮೇಗೌಡ, ನಾನು ಪಕ್ಷಾಂತರ ಮಾಡಿದ್ದಕ್ಕೆ ನನಗೆ ಮುಜುಗರ ಆಗಿದೆ. ಚುನಾವಣೆಗೆ ಸ್ಪರ್ಧೆ ಮಾಡಲು ಪಕ್ಷಾಂತರ ಮಾಡಿದ್ದೆ. ತಪ್ಪಿನ ಅರಿವು ಆಗಿ, ಯಾವ ಪಕ್ಷ ರಾಜಕೀಯ ಜೀವ ಕೊಟ್ಟಿದೆ ಆ ಪಕ್ಷದಲ್ಲಿ ಸೇವೆ ಸಲ್ಲಿಸಬೇಕು ಎಂದು ಕಾಂಗ್ರೆಸ್ ಗೆ ಬಂದಿದ್ದೇನೆ. ಸಾರ್ವಜನಿಕ ಬದುಕಿನಲ್ಲಿ ಸ್ವಲ್ಪ ಹೆಸರು ಮಾಡಿ ಉಳಿಸಿಕೊಳ್ಳಬೇಕು. ನಾನು ಕಾಂಗ್ರೆಸ್ ಪಕ್ಷ ಅಭಾರಿಯಾಗಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ನನ್ನ ಮುಂದಿನ ಸಾರ್ವಜನಿಕ ಬದುಕು ನಡೆಸುತ್ತೇನೆ ಎಂದು ಹೇಳಿದರು.

ಮುದ್ದಹನುಮೇಗೌಡರ ಸೇರ್ಪಡೆಗೆ ನಡೆದಿತ್ತು ದೊಡ್ಡ ಹೈಡ್ರಾಮಾ

2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿಯಾಗಿದ್ದರಿಂದ ತುಮಕೂರು ಕ್ಷೇತ್ರ ಜೆಡಿಎಸ್​ ಪಾಲಾಗಿತ್ತು. ಮಾಜಿ ಪ್ರಧಾನಿ ಜೆಡಿಎಸ್​ ವರಿಷ್ಠ ಎಚ್​ಡಿ ದೇವೇಗೌಡ ಅವರು ಕಣಕ್ಕಿಳಿದಿದ್ದರು. ಇದರಿಂದ ಹಾಲಿ ಸಂಸದರಾಗಿದ್ದ ಮುದ್ದಹನುಮೇಗೌಡ ಅಸಮಾಧಾನಗೊಂಡು ಬಿಜೆಪಿ ಸೇರ್ಪಡೆಯಾಗಿದ್ದರು. ಆದ್ರೆ, 2023ರ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಯಲ್ಲೂ ಟಿಕೆಟ್ ವಂಚಿತರಾಗಿದ್ದರು. ಹೀಗಾಗಿ ಈ ಬಾರಿ ತುಮಕೂರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್​ನತ್ತ ಮುಖಮಾಡಿದ್ದಾರೆ.

ಮುದ್ದಹನುಮೇಗೌಡ ಅವರನ್ನು ವಾಪಸ್​ ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ ದೊಡ್ಡ ಹೈಡ್ರಾಮಾವೇ ನಡೆದಿದದೆ.ಕೆಎನ್​ ರಾಜಣ್ಣ ಅವರು ಮುದ್ದಹನುಮೇಗೌಡ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಮುಂದಾಗಿದ್ದರು. ಅದರಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಸಹ ಮನವೊಲಿಸಿದ್ದರು. ಆದ್ರೆ, ಟಿಬಿ ಜಯಚಂದ್ರ ಸೇರಿದಂತೆ ಇನ್ನು ಕೆಲ ತುಮಕೂರು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮುದ್ದಹನುಮೇಗೌಡ ಅವರು ಸಚಿವ ಪರಮೇಶ್ವರ್​ ಅವರ ದುಂಬಾಲು ಬಿದ್ದಿದ್ದರು. ಅಲ್ಲದೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದರು. ಇದೀಗ ಅಂತಿಮವಾಗಿ ಕೆಲವರ ಆಕ್ಷೇಪದ ನಡುವೆಯೂ ಮುದ್ದಹನುಮೇಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದ್ದು, ಇದು ಮುಂದೆ ಯಾವ ರೀತಿ ತಿರುವು ಪಡೆದುಕೊಳ್ಳಲಿದೆ ಎನ್ನುವುದು ಕಾದುನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ