ಡಿಸಿಎಂ ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ನಲ್ಲಿ ಪರಿಷತ್ ಸದಸ್ಯರ ಅಸಮಾಧಾನ
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದೆ. ಈ ನಿಟ್ಟಿನಲ್ಲಿ ಮೂರು ಪಕ್ಷಗಳು ತಮ್ಮ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಕಸರತ್ತು ನಡೆಸಿವೆ. ಇದರ ಮಧ್ಯೆ ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ವಿಧಾನಪರಿಷತ್ನ ಕಾಂಗ್ರೆಸ್ ಸದಸ್ಯರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ಮಾಡಿದ್ದಾರೆ. ಈ ವೇಳೆ ಅಸಮಾಧಾನ, ಅಹವಾಲುಗಳ ದೊಡ್ಡ ಪಟ್ಟಿಯನ್ನೇ ವಿಧಾನಪರಿಷತ್ ಸದ್ಯಸರು ಮುಂದಿಟ್ಟಿದ್ದಾರೆ.
ಬೆಂಗಳೂರು, ಫೆಬ್ರವರಿ 23: ನಗರದ ಖಾಸಗಿ ಹೋಟೆಲ್ನಲ್ಲಿ ನಿನ್ನೆ ವಿಧಾನಪರಿಷತ್ನ ಕಾಂಗ್ರೆಸ್ ಸದಸ್ಯರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಡಿನ್ನರ್ ಮೀಟಿಂಗ್ ಮಾಡಿದ್ದಾರೆ. ಈ ವೇಳೆ ಪರಿಷತ್ ಸದಸ್ಯರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅಹವಾಲುಗಳ ದೊಡ್ಡ ಪಟ್ಟಿಯನ್ನೇ ಪರಿಷತ್ ಸದಸ್ಯರು ಮುಂದಿಟ್ಟಿದ್ದಾರೆ. ರಾಜಕೀಯವಾಗಿ ಸ್ಥಾನಮಾನ ನೀಡದೆ ಕಡೆಗಣಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನಿಗಮ ಮಂಡಳಿ ನೀಡದೆ, ಅನುದಾನವನ್ನೂ ನೀಡದಿದ್ದಕ್ಕೆ ತೀವ್ರ ಆಕ್ಷೇಪ ಹೊರಹಾಕಿದ್ದು, ರಾಜಕೀಯವಾಗಿ ಎಂಎಲ್ಸಿಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ನೀಡುವಂತೆ ಮನವಿ
ಲೋಕಸಭೆ ಚುನಾವಣೆ ಟಿಕೆಟ್ ಬಗ್ಗೆಯೂ ಎಂಎಲ್ಸಿಗಳು ಚರ್ಚೆ ಮಾಡಿದ್ದಾರೆ. ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ನೀಡುವಂತೆ ಪರಿಷತ್ ಸದಸ್ಯರು ಒತ್ತಾಯ ಮಾಡಿದ್ದು, ಸಚಿವರ ಮಕ್ಕಳಿಗೆ ಟಿಕೆಟ್ ನೀಡುವ ಬಗ್ಗೆ ಗಮನ ಹರಿಸಬೇಡಿ ಎಂದು ಮನವಿ ಕೂಡ ಮಾಡಿದ್ದಾರೆ.
ಇದನ್ನೂ ಓದಿ: ಕೇಂದ್ರದ ತೆರಿಗೆ ತಾರತಮ್ಯ ಖಂಡಿಸಿ ನಿರ್ಣಯ ಮಂಡಿಸಿದ ರಾಜ್ಯ ಸರ್ಕಾರ: ಸಿಡಿದೆದ್ದ ಬಿಜೆಪಿ
ಗಂಭೀರವಾಗಿ ಕೆಲಸ ಮಾಡುವ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿ. ಶಾಸಕರಿಗೆ ಅನುದಾನ ನೀಡುವಂತೆ ತಮಗೂ ಅನುದಾನ ನೀಡಿ ಎಂದು ಆಗ್ರಹಿಸಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಸಿಎಂ ಸಿದ್ದರಾಮಯ್ಯ ಗಮನಕ್ಕೆ ತರುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ಪರಿಷತ್ ಸದಸ್ಯರಿಗೆ ಡಿ.ಕೆ.ಶಿವಕುಮಾರ್ ಎಚ್ಚರಿಕೆ
ವಿಧೇಯಕ ಮಂಡಿಸುವಾಗ ಆಡಳಿತ ಪಕ್ಷದ ಸದಸ್ಯರ ಗೈರುಹಾಜರಿ ಬಗ್ಗೆ ಚರ್ಚೆ ಮಾಡಲಾಗಿದ್ದು, ಗೈರಾಗುತ್ತಿರುವ ಪರಿಷತ್ ಸದಸ್ಯರಿಗೆ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಇನ್ನು ವಿಧಾನಪರಿಷತ್ನಲ್ಲಿ ವಿಧೇಯಕಗಳಿಗೆ ಹಿನ್ನಡೆ ಆಗುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಶಾಸಕರಂತೆ ಟಾರ್ಗೆಟ್ 20ಗೆ ಶ್ರಮಿಸುತ್ತಿರುವುದಾಗಿ ಎಂಎಲ್ಸಿಗಳು ಮನವರಿಕೆ ಮಾಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಪಕ್ಷ 20 ಸ್ಥಾನ ಗೆಲುವಿಗೆ ಶ್ರಮಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ರಾಜಕೀಯ ಸ್ಥಾನಮಾನ ನೀಡುವಂತೆ ಡಿನ್ನರ್ ಮೀಟಿಂಗ್ನಲ್ಲಿ ಡಿ.ಕೆ.ಶಿವಕುಮಾರ್ಗೆ ಎಂಎಲ್ಸಿಗಳು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ರಾಜ್ಯಸಭಾ ಚುನಾವಣೆಗೆ ಬಿಜೆಪಿ ಸನ್ನದ್ಧ: ಮತದಾನಕ್ಕೆ ಶಾಸಕರ ಬ್ಯಾಚ್ ರಚನೆ, ಅದಕ್ಕೆ ಓರ್ವ ಲೀಡರ್
ಲೋಕಸಭಾ ಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ನಲ್ಲಿ ಭಾರೀ ಕಸರತ್ತು ನಡೆಯುತ್ತಿದೆ. ಈ ಬಾರಿ ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಭಾರೀ ಹಣಾಹಣಿ ನಡೆಯಲಿದ್ದು, ಗೆಲ್ಲುವ ಅಭ್ಯರ್ಥಿಗಳನ್ನು ಮೂರೂ ಪಕ್ಷಗಳು ಹುಡುಕಾಟ ನಡೆಸುತ್ತಿವೆ.
28 ಕ್ಷೇತ್ರಗಳ ಪೈಕಿ ಅತಿಹೆಚ್ಚು ಕ್ಷೇತ್ರ ಗೆಲ್ಲಲು ತಂತ್ರಗಾರಿಕೆ ರೂಪಿಸುತ್ತಿವೆ. ಅದರಲ್ಲೂ ಆಡಳಿತಾರೂಢ ಕಾಂಗ್ರೆಸ್ ಕಳೆದ ಬಾರಿ ಆದ ಹೀನಾಯ ಸೋಲಿನಿಂದ ಪುಟಿದೇಳುವ ನಿಟ್ಟಿನಲ್ಲಿ ಅಳೆದು ತೂಗಿ ಅಭ್ಯರ್ಥಿ ಆಯ್ಕೆಗೆ ಮೀಟಿಂಗ್ ಮೇಲೆ ಮೀಟಿಂಗ್ ಮಾಡುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:29 am, Fri, 23 February 24