ರಾಜ್ಯಸಭಾ ಚುನಾವಣೆಗೆ ಬಿಜೆಪಿ ಸನ್ನದ್ಧ: ಮತದಾನಕ್ಕೆ ಶಾಸಕರ ಬ್ಯಾಚ್ ರಚನೆ, ಅದಕ್ಕೆ ಓರ್ವ ಲೀಡರ್

ರಾಜ್ಯಸಭಾ ಹಾಗೂ ಲೋಕಸಭೆ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಅದರಲ್ಲೂ ರಾಜ್ಯಸಭೆಯಲ್ಲಿ ಎನ್​ಡಿಎ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರನ್ನು ಗೆಲ್ಲಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿದ್ದು ಈ ಸಂಬಂಧ ಇಂದು ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆದಿವೆ. ಅಲ್ಲದೇ ರಾಜ್ಯಸಭೆ ಚುನಾವಣೆಯ ಮತದಾನಕ್ಕೆ ಶಾಸಕರ ಬ್ಯಾಚ್​ ಮಾಡಲಾಗಿದೆ. ಮತ್ತೊಂದೆಡೆ ಈ ಪ್ರಮುಖ ಸಭೆಗೆ ಕೆಲ ಶಾಸಕರು ಗೈರಾಗಿದ್ದು, ನಾಯಕರ ಆತಂಕಕ್ಕೆ ಕಾರಣವಾಗಿದೆ.

ರಾಜ್ಯಸಭಾ ಚುನಾವಣೆಗೆ ಬಿಜೆಪಿ ಸನ್ನದ್ಧ: ಮತದಾನಕ್ಕೆ ಶಾಸಕರ ಬ್ಯಾಚ್ ರಚನೆ, ಅದಕ್ಕೆ ಓರ್ವ ಲೀಡರ್
ಬಿಜೆಪಿ ಶಾಸಕಾಂಗ ಸಭೆ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Feb 22, 2024 | 10:20 PM

ಬೆಂಗಳೂರು, (ಫೆಬ್ರವರಿ 22): ಕರ್ನಾಟಕದ 4 ರಾಜ್ಯಸಭಾ (Karnataka Rajyasbha Election)ಸ್ಥಾನಗಳಿಗೆ ಐದನೇ ಅಭ್ಯರ್ಥಿ ಸ್ಪರ್ಧಿಸಿರುವುದರಿಂದ ರಾಜ್ಯ ರಾಜಕಾರಣದಲ್ಲಿ ಲೆಕ್ಕಾಚಾರಗಳು ಗರಿಗೆದರಿವೆ. ಈ ಸಂಬಂಧ ಎನ್​ಡಿಎ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರನ್ನು ಹೇಗಾದರೂ ಮಾಡಿ ಗೆಲ್ಲಿಸಿಕೊಳ್ಳಲು ಜೆಡಿಎಸ್​ ಹಾಗೂ ಬಿಜೆಪಿ ಕಸರತ್ತು ನಡೆಸಿದ್ದು, ಈ ಸಂಬಂಧ ಇಂದು(ಫೆಬ್ರವರಿ 22) ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆದಿದ್ದು, ಸಭೆಯಲ್ಲಿ ರಾಜ್ಯಸಭೆ ಹಾಗೂ ಲೋಕಸಭಾ ಚುನಾವಣೆ ಸಂಬಂಧ ಮಹತ್ವದ ಚರ್ಚೆಗಳು ಆಗಿವೆ. ಇನ್ನು ಫೆಬ್ರವರಿ 28ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತ ಹಾಕಲು ಮೂರು ಶಾಸಕರ ಬ್ಯಾಚ್ ಮಾಡಲಾಗಿದ್ದು, ಒಂದು ಬ್ಯಾಚ್ ಗೆ ಒಬ್ಬ ಹಿರಿಯ ಶಾಸಕನನ್ನು ಲೀಡರ್ ಆಗಿ ನೇಮಕ ಮಾಡಲಾಗಿದೆ.

ಸಭೆಗೆ ಕೆಲ ಶಾಸಕರು ಗೈರು

ರಾಜ್ಯಸಭೆ ಚುನಾವಣೆಯನ್ನು ಬಿಜೆಪಿ, ಜೆಡಿಎಸ್​ ಗಂಭೀರವಾಗಿ ಪರಿಗಣಿಸಿದ್ದು, ಹೇಗಾದೂ ಮಾಡಿ ಕಾಂಗ್ರೆಸ್ ಕೆಲ ಶಾಸಕ ಮತಗಳನ್ನು ಸೆಳೆದು ಮೈತ್ರಿ ಕುಪೇಂದ್ರ ರೆಡ್ಡಿ ಅವರನ್ನು ಗೆಲ್ಲಿಸಿಕೊಳ್ಳುವ ತಂತ್ರ ರೂಪಿಸುತ್ತಿವೆ. ಆದ್ರೆ, ಇಂದು ನಡೆದ ಬಿಜೆಪಿ ಶಾಸಕಾಂಗ ಸಭೆಗೆ ಬಸನಗೌಡ ಪಾಟೀಲ್ ಯತ್ನಾಳ್, ಎಸ್​ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್​ ಗೈರು ಎದ್ದು ಕಂಡಿದೆ. ಅದರಲ್ಲೂ ಮುಖ್ಯವಾಗಿ ಶಿವರಾಮ್ ಹೆಬ್ಬಾರ್ ಹಾಗೂ ಎಸ್​​ಟಿ ಸೋಮಶೇಖರ್ ಅವರು ಬಿಜೆಪಿ ಶಾಸಕಾಂಗ ಸಭೆಗೆ ಗೈರಾಗಿರುವುದು ಹಲವು ಚರ್ಚೆಗೆ ಗ್ರಾಸವಾಗಿದೆ. ಈಗಾಗಲೇ ಈ ಇಬ್ಬರು ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿವೆ. ಇದಕ್ಕೆ ಪೂರಕವೆಂಬಂತೆ ಇವರಿಬ್ಬರು ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಇದೀಗ ರಾಜ್ಯಸಭಾ ಮತ್ತು ಲೋಕಸಭಾ ಚುನಾವಣೆಗೆ ಸಂಬಂಧ ಚರ್ಚಿಸಲು ಕರೆಯಲಾಗಿದ್ದ ಬಿಜೆಪಿ ಶಾಸಕಾಂಗ ಸಭೆಗೂ ಗೈರಾಗಿದ್ದು, ನಾಯಕರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ದಿಲ್ಲಿಯಿಂದ ಬೆಂಗಳೂರಿಗೆ ಕುಮಾರಸ್ವಾಮಿ ವಾಪಸ್: ಸೀಟು ಹಂಚಿಕೆ ಬಗ್ಗೆ ಹೇಳಿದ್ದಿಷ್ಟು

ಬಿಜೆಪಿ ಶಾಸಕಾಂಗ ಸಭೆಯಲ್ಲಿ ಲೋಕಸಭಾ ಚುನಾವಣಾ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಪಾಲ್ಗೊಂಡಿದ್ದು, ರಾಜ್ಯಸಭೆ ಹಾಗೂ ಲೋಕಸಭಾ ಚುನಾವಣೆಗೆ ಪಕ್ಷ ಸಂಘಟನೆ ಸೇರಿದಂತೆ ಹಲವು ರಣತಂತ್ರಗಳ ಬಗ್ಗೆ ಚರ್ಚಿಸಿದರು. ಇನ್ನು ಇದೇ ವೇಳೆ ಮಾತನಾಡಿರುವ ಅವರು ಪಕ್ಷ ನೀಡಿರುವ ಜವಾಬ್ದಾರಿ ಹಾಗೂ ಆದೇಶವನ್ನು ಸೂಕ್ತವಾಗಿ ನಿರ್ವಹಿಸುವಂತೆ ರಾಜ್ಯ ನಾಯಕರಿಗೆ ಖಡಕ್​ ಸೂಚನೆ ನೀಡಿದರು.

ಇನ್ನು ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಆರ್​ ಅಶೋಕ್ , ಲೋಕಸಭೆ ಚುನಾವಣೆ ಬಗ್ಗೆ ರಾಧಾ ಮೋಹನದಾಸ್ ಮಾತಾಡಿದ್ದು, ಮುಂದೆ ಹೇಗೆ ಚುನಾವಣೆ ಎದುರಿಸಬೇಕು ಎಂದು ಚರ್ಚೆಯಾಗಿದೆ ಎಂದು ಸ್ಪಷ್ಟಪಡಿಸಿದರು. ಇನ್ನು ಇದೇ ವೇಳೆ ಸಭೆಗೆ ಕೆಲ ಶಾಸಕರು ಗೈರಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ವಿಧಾನಸಭೆಗೆ ಯಾರು ಆಗಮಿಸಿದ್ದರೋ ಅವರು ಮಾತ್ರ ಬಂದಿದ್ದಾರೆ. ಕೆಲವರು ಊರಿಗೆ ಹೋಗಿರುವುದರಿಂದ ಸಭೆಗೆ ಬರಲಾಗಿಲ್ಲ. ಮೂರು ಮೂರು ಜನರ ಬ್ಯಾಚ್ ಮಾಡಿದ್ದೇವೆ. ಅವರ ಮೂಲಕ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿಸುವ ಕ್ರಮ ನಡೆಯಲಿದೆ ಎಂದು ಹೇಳಿದರು.

ಅಲ್ಲದೇ ಫೆ.27 ರಂದು ಬೆಳಗ್ಗೆ 8.30ಕ್ಕೆ ವಿಧಾನಸೌಧದಲ್ಲಿ ವಿಪಕ್ಷ ನಾಯಕರ ಕೊಠಡಿಯಲ್ಲಿ ಉಪಹಾರಕ್ಕೆ ಹಾಜರಾಗುವಂತೆ ಎಲ್ಲಾ ಶಾಸಕರಿಗೆ ಸೂಚನೆ ನೀಡಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲ್ ಕ್ಲಿಕ್ ಮಾಡಿ

Published On - 10:14 pm, Thu, 22 February 24