ಕೇಂದ್ರದ ತೆರಿಗೆ ತಾರತಮ್ಯ ಖಂಡಿಸಿ ನಿರ್ಣಯ ಮಂಡಿಸಿದ ರಾಜ್ಯ ಸರ್ಕಾರ: ಸಿಡಿದೆದ್ದ ಬಿಜೆಪಿ

ಕೇಂದ್ರ ಸರ್ಕಾರದ ತೆರಿಗೆ ತಾರತಮ್ಯ ಖಂಡಿಸಿ ದೆಹಲಿಯಲ್ಲಿ ಪ್ರತಿಭಟನೆ ಮಾಡಿ ಗಮನಸೆಳೆದ್ದ ಸಿದ್ದರಾಮಯ್ಯ ಸರ್ಕಾರ, ಇದೀಗ ಇನ್ನೊಂದೆಜ್ಜೆ ಮುಂದೆ ಹೋಗಿ ಅಧಿಕೃತ ನಿರ್ಣಯ ಅಂಗೀಕರಿಸಿದೆ. ವಿಧಾನಸಭೆಯಲ್ಲಿ ಇಂದು(ಫೆಬ್ರವರಿ 22) ಸಚಿವ ಎಚ್​ಕೆ ಪಾಟೀಲ್ ಮಂಡಿಸಿದರು. ಈ ಮೂಲಕ ರಾಜ್ಯ ಸರ್ಕಾರದ ಈ ದಿಢೀರ್​ ನಿರ್ಣಯ ಮಂಡಿಸುವ ಮೂಲಕ, ವಿಪಕ್ಷಗಳಾದ ಜೆಡಿಎಸ್​ ಹಾಗೂ ಬಿಜೆಪಿ ಶಾಸಕ ಕೊಟ್ಟಿದೆ. ಇದರಿಂದ ರೊಚ್ಚಿಗೆದ್ದಿರುವ ಬಿಜೆಪಿ ನಾಯಕರು ಧರಣಿ ನಡೆಸಿದರು.

ಕೇಂದ್ರದ ತೆರಿಗೆ ತಾರತಮ್ಯ ಖಂಡಿಸಿ ನಿರ್ಣಯ ಮಂಡಿಸಿದ ರಾಜ್ಯ ಸರ್ಕಾರ: ಸಿಡಿದೆದ್ದ ಬಿಜೆಪಿ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Feb 22, 2024 | 10:56 PM

ಬೆಂಗಳೂರು, (ಫೆಬ್ರವರಿ 22): ಕೇಂದ್ರ ಸರ್ಕಾರವು (Union Government)  ಕರ್ನಾಟಕದ (Karnataka) ತೆರಿಗೆ (Tax) ಪಾಲನ್ನು ನೀಡುವುದರಲ್ಲಿ ತಾರತಮ್ಯ ಎಸಗಿರುವುದನ್ನು ಖಂಡಿಸಿ ವಿಧಾನಸಭೆಯಲ್ಲಿ ಇಂದು(ಫೆಬ್ರವರಿ 22) ರಾಜ್ಯ ಸರ್ಕಾರ ಖಂಡನಾ ನಿರ್ಣಯ ಅಂಗೀಕರಿಸಿತು. ಕಾನೂನು ಸಚಿವ ಹೆಚ್ ಕೆ ಪಾಟೀಲ್ ಅವರು ತೆರಿಗೆ ತಾರತಮ್ಯದ ವಿರುದ್ಧ ನಿರ್ಣಯ ಮಂಡಿಸಿ, “ರಾಜ್ಯಕ್ಕೆ ಸಮ ಪ್ರಮಾಣದಲ್ಲಿ ತೆರಿಗೆಯ ಪಾಲು ನೀಡದೆ ಕೇಂದ್ರ ಸರ್ಕಾರವು ಅನ್ಯಾಯ ಎಸಗುತ್ತಿದೆ. ಇದು ರಾಜ್ಯದ ಜನರಿಗೆ ಮಾಡಿದ ಅನ್ಯಾಯ. ತೆರಿಗೆಯಲ್ಲಿ ಪಾಲು ನೀಡದೆ ರಾಜ್ಯದ ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ. ಇದನ್ನು ವಿರೋಧಿಸಿ ರಾಜ್ಯದ ನಾಗರಿಕರ ಪರವಾಗಿ ಈ ನಿರ್ಣಯ ತೆಗೆದುಕೊಂಡಿದ್ದೇವೆ” ಎಂದು ಅಂಕಿಅಂಶ ಸಮೇತ ಸದನಕ್ಕೆ ತಿಳಿಸಿದರು. ಸಚಿವರು ನಿರ್ಣಯ ಮಂಡಿಸುತ್ತಿದ್ದಂತೆಯೇ ಒಮ್ಮೆಲೆ ಶಾಕ್ ಆದ ವಿಪಕ್ಷ ಬಿಜೆಪಿಯ ನಾಯಕರು, ಸದನದ ಬಾವಿಗಿಳಿದು ಧರಣಿ ನಡೆಸಿದರು.

ಪ್ರತಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ಬಿಜೆಪಿ ನಾಯಕರು ಸದನದ ಬಾವಿಗಿಳಿದು ಏರುಧ್ವನಿಯಲ್ಲಿ ಗದ್ದಲ ಎಬ್ಬಿಸಿದರು. “ಇಂದಿನ ಕಲಾಪದ ಅಜೆಂಡಾದಲ್ಲಿ ಉಲ್ಲೇಖಿಸದೆ ಈ ನಿರ್ಣಯ ಅಂಗೀಕರಿಸಲಾಗಿದೆ. ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರವು ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಇದು ಹೇಡಿಗಳ ಸರ್ಕಾರ. ಸಿದ್ದರಾಮಯ್ಯನವರು ವಿಷ ಕಾರುತ್ತಿರುವ ಮನಸ್ಥಿತಿ ಇದು” ಅಶೋಕ್​ ಕಿಡಿಕಾರಿದರು. ಈ ನಡುವೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕಾಗದಗಳನ್ನು ಹರಿದೆಸೆದು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ಭುಗಿಲೆದ್ದ ಆಕ್ರೋಶ: ಕೊನೆಗೂ ಬಜರಂಗದಳ ಕಾರ್ಯಕರ್ತರಲ್ಲಿ‌ ಕ್ಷಮೆಯಾಚಿಸಿದ ಅಶೋಕ್​​!

ಬಳಿಕ ಬಿಜೆಪಿ ಕಚೇರಿಯಲ್ಲಿ ಸಂಧಾನ ಸಭೆ ನಡೆದಿದ್ದು, ಸಭೆಯಲ್ಲೂ ಬಿಜೆಪಿ ನಾಯಕರು ಏರು ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಮಾಹಿತಿ ನೀಡದೆ ನಿರ್ಣಯ ತಂದಿದ್ದೀರಿ. ಬಿಲ್ ಮೇಲೆ ಚರ್ಚಿಸಲು ಅವಕಾಶವಿಲ್ಲ. ನಮ್ಮ ಗಮನಕ್ಕೆ ತಾರದೆ ಬಿಲ್ ಬಗ್ಗೆ ಚರ್ಚಿಸಲು ಯಾವ ನಿಯಮವಿದೆ? ಎಂದು ಪ್ರಶ್ನಿಸಿದರು. ಅಲ್ಲದೇ ಸದನದಲ್ಲಿ ಧರಣಿ ಮುಂದುವರಿಸಲು ಬಿಜೆಪಿ, ಜೆಡಿಎಸ್ ನಾಯಕರು ನಿರ್ಧರಿಸಿದರು. ಈ ಹಿನ್ನೆಲೆಯಲ್ಲಿ ಸಂಧಾನ ಸಭೆ ವಿಫಲವಾಯಿತು. ಅಂತಿಮವಾಗಿ ಬಿಜೆಪಿಯವರ ಗದ್ದಲದ ನಡುವೆಯೇ ಸಭಾಧ್ಯಕ್ಷ ಯುಟಿ ಖಾದರ್ ಅವರು ನಿರ್ಣಯವನ್ನು ಅಂಗೀಕರಿಸಿದರು.

ಇದಲ್ಲದೇ, ಕೇಂದ್ರ ಸರ್ಕಾರವು ರೈತರ ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಸದನದಲ್ಲಿ ಸರ್ಕಾರ ನಿರ್ಣಯ ಅಂಗೀಕರಿಸಿದೆ. ರೈತರ ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಕೇಂದ್ರ ಸರಕಾರ ಶಾಸನ ರೂಪಿಸುವಂತೆ ಈ ಸದನ ಒಕ್ಕೂರಲಿನಿಂದ ಒತ್ತಾಯಿಸುತ್ತದೆ. ರೈತರೊಂದಿಗೆ ಸಂಘರ್ಷದ ಹಾದಿ ತುಳಿಯದೇ ಅತ್ಯಂತ ನ್ಯಾಯಯುತವಾದ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ಸದನ ಒತ್ತಾಯಿಸುವುದಾಗಿ ಸರ್ಕಾರ ನಿರ್ಣಯ ಅಂಗೀಕರಿಸುವ ವೇಳೆ ತಿಳಿಸಿತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲ್ ಕ್ಲಿಕ್ ಮಾಡಿ